ಕನ್ನಡಪ್ರಭ ವಾರ್ತೆ ದಾವಣಗೆರೆ
ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆಯಲ್ಲಿ ನಾಯಕತ್ವ ಗುಣ ಬೆಳೆಸಿಕೊಂಡ ವ್ಯಕ್ತಿತ್ವ ವಿಕಸನದ ಜೊತೆಗೆ ದೇಶದ ಸಮಗ್ರ ಅಭಿವೃದ್ಧಿಯಾಗಲು ರಾಷ್ಟ್ರೀಯ ಸೇವಾ ಯೋಜನೆ ಬುನಾದಿಯಾಗಿದೆ ಎಂದು ದಾವಣಗೆರೆ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿವಿಯಲ್ಲಿ ಶನಿವಾರ ರಾಷ್ಟ್ರೀಯ ಸೇವಾ ಯೋಜನೆ ಸ್ನಾತಕೋತ್ತರ ಘಟಕ 1 ಮತ್ತು 2ರಿಂದ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆ ಹಾಗೂ ಎನ್ಎಸ್‌ಎಸ್ ವಿದ್ಯಾರ್ಥಿ ನಾಯಕರ ನಿಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಮಗ್ರ ಅಭಿವೃದ್ಧಿಗೆ ಎನ್ಎಸ್‌ಎಸ್ ಬುನಾದಿಯಾಗಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯು ರಾಷ್ಟ್ರ ವ್ಯಾಪ್ತಿ ಸೇವೆ ನನಗಲ್ಲ, ನಿನಗಾಗಿ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಸೇವಾ ಮನೋಭಾವ, ಸಮುದಾಯ ಪ್ರಜ್ಞೆ, ದೇಶಪ್ರೇಮ, ಸಂಘಟನಾ ಚಾತುರ್ಯ, ಶಿಸ್ತು, ಸಮಯ ಸ್ಫೂರ್ತಿಯನ್ನು ಅದು ಬೆಳೆ ಯುತ್ತದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ನೈಜ ಚಿತ್ರಣ, ವಾಸ್ತವ ಅಂಶಗಳು, ಜನ ಸಾಮಾನ್ಯರ ಸಾಮಾಜಿಕ ಬದುಕಿನ ಸ್ಥಿತಿಗತಿ, ಜೀವನ ಶೈಲಿಯನ್ನು ಸ್ವಯಂ ಅನುಭವ ಪಡೆಯಲು ಎನ್ನೆಸ್ಸೆಸ್ ಸಹಕಾರಿ ಎಂದು ಅವರು ಹೇಳಿದರು.ಕೇವಲ 10 ದಿನದಲ್ಲಿ ಒಂದು ಹಳ್ಳಿಯ ಚಿತ್ರಣವನ್ನು ವಿದ್ಯಾರ್ಥಿಗಳು ಗುಣಾತ್ಮಕ ಆಲೋಚನೆಗಳನ್ನು ವೃದ್ಧಿಸಿಕೊಂಡು, ಮುಂದಿನ ಜೀವನವನ್ನು ನಿರ್ಧರಿಸುವುದು ಪ್ರಮುಖವಾಗುತ್ತದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸ್ವಯಂ ಆಸಕ್ತಿಯಿಂದ ಪಾಲ್ಗೊಂಡಾಗ ದೈಹಿಕ ಮತ್ತು ಮಾನಸಿಕ ದೃಢತೆ ಬೆಳೆಸಿಕೊಳ್ಳಬೇಕು. ದಾವಣಗೆರೆಯಿಂದಲೂ ಎನ್ನೆಸ್ಸೆಸ್ ಯೋಜನೆ ಉದ್ಘಾಟಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬಿತ್ತುವ ಕೆಲಸ ಮಾಡುತ್ತಿದೆ ಎಂದು ಅವು ತಿಳಿಸಿದರು.
ದಾವಿವಿ ಕುಲ ಸಚಿವ ಆಡಳಿತ ಪ್ರೊ.ವೆಂಕಟರಾವ್ ಪಲಾಟೆ ಮಾತನಾಡಿ, ವಿಶ್ವದ ಹಲವು ರಾಷ್ಟ್ರಗಳಲ್ಲೇ ಭಾರತ ಸೇವಾ ಮನೋಭಾವದಲ್ಲಿ ಪ್ರಮುಖ ಸಾಲಿನಲ್ಲಿರುವುದು ಹೆಮ್ಮೆಯ ವಿಷಯ. ಭಾರತೀಯರಲ್ಲಿ ಸ್ವಯಂ ಸೇವಾ ಮನೋಭಾವ ಸಂವಿಧಾನ ಹಾಗೂ ಕಾನೂನಾತ್ಮಕವಾಗಿ ಬಂದವುಗಳಲ್ಲವಾದರೂ ಸ್ವಪ್ರೇರಣೆಯಲ್ಲಿ ಸಾಗಿ ಬಂದಿವೆ. ವ್ಯಕ್ತಿತ್ವ ವಿಕಸನಕ್ಕೆ ಸೇವಾ ಮನೋಭಾವ ಪ್ರಮುಖ ಸಾಧನ. ವಿದ್ಯಾರ್ಥಿಗಳು ಶೈಕ್ಷಣಿಕ ಅಧ್ಯಯನಕ್ಕೆ ಸೀಮಿತವಾಗದೆ ಸೇವಾ ಮನೋಭಾವ ರೂಢಿಸಿಕೊಂಡು ದೇಶದ ಸರ್ವಾಂಗೀಣ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕು ಎಂದರು.ವಿವಿ ಹಣಕಾಸು ಅಧಿಕಾರಿ ಮುದ್ದನಗೌಡ ದ್ಯಾಮನಗೌಡರ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮುದಾಯ ಸೇವೆ, ವೈಚಾರಿಕ ಪ್ರಜ್ಞೆ ಮೂಡಿಸಿ ವಿಶ್ವಮಾನವರನ್ನಾಗಿ ಮಾಡುವುದು ಎನ್ನೆಸ್ ಆಶಯ. ದ್ಯಾರ್ಥಿಗಳು ತಾವು ಸಮರ್ಥರಾಗುವ ಜೊತೆಗೆ ಜನಸಾಮಾನ್ಯ ರಿಗೂ ವೈಚಾರಿಕ ವಿಷಯಗಳನ್ನು ತಿಳಿಸಿ, ಉತ್ತಮ ಇಚ್ಛಾಶಕ್ತಿ ಹಾಗೂ ಸೇವಾ ಮನೋಭಾವ ಕಲ್ಪಿಸಿ ಸದೃಢ ಭಾರತದೆಡೆಗೆ ಸಾಗಬೇಕು ಎಂದು ತಿಳಿಸಿದರು.
ದಾವಿವಿ ವಾಣಿಜ್ಯ ವಿಭಾಗ ಪ್ರಾಧ್ಯಾಪಕ ಪ್ರೊ.ಪಿ.ಲಕ್ಷ್ಮಣ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ.ಅಶೋಕಕುಮಾರ್ ಪಾಳೇದ, ಕಾರ್ಯಕ್ರಮಾಧಿಕಾರಿ ಡಾ.ಸಿದ್ದಪ್ಪ ಭೀ.ಕಕ್ಕಳಮೇಲಿ, ಡಾ.ಸೌಮ್ಯ ಎಸ್.ಬುಳ್ಳಾ, ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು