ಶ್ರಮದ ಮಹತ್ವ ಸಾರಿದ ಶ್ರೇಷ್ಠ ವಚನಕಾರ ನುಲಿಯ ಚಂದಯ್ಯ

KannadaprabhaNewsNetwork | Published : Aug 20, 2024 12:45 AM

ಸಾರಾಂಶ

ಔರಾದ್ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸೋಮವಾರ ನಡೆದ ನುಲಿಯ ಚಂದಯ್ಯ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ವಿದ್ಯಾವತಿ ಬಲ್ಲೂರು ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಔರಾದ್

ನುಲಿ ಚಂದಯ್ಯ ಕಾಯಕ ದಾಸೋಹಕ್ಕೆ ಮಹತ್ವದ ಸ್ಥಾನ ನೀಡಿ ಬದುಕಿ ಶ್ರಮದ ಮಹತ್ವ ಸಾರಿದ ಶ್ರೇಷ್ಠ ವಚನಕಾರ ಎಂದು ಸಾಹಿತಿ ವಿದ್ಯಾವತಿ ಬಲ್ಲೂರು ಅಭಿಪ್ರಾಯಪಟ್ಟರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸೋಮವಾರ ನಡೆದ ನುಲಿಯ ಚಂದಯ್ಯ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಸವಾದಿ ಶರಣರ ವಚನಗಳು ಮಾನವೀಯತೆಯ ಅದ್ಭುತ ಸಂದೇಶಗಳನ್ನು ಸಾರುತ್ತವೆ. ಬಸವಣ್ಣನ ನೇತೃತ್ವದಲ್ಲಿ ಅಂದು ಎಲ್ಲರೂ ಒಗ್ಗೂಡಿದಂತೆ ಪ್ರಸ್ತುತ ನಾವುಗಳು ಒಗ್ಗೂಡಿ ಬಸವ ತತ್ವ ಅಪ್ಪಿಕೊಂಡು ಬದುಕಿದಾಗ ಮಾತ್ರ ಸುಂದರ ಸಮಾಜ‌ ನಿರ್ಮಾಣ ಸಾಧ್ಯ ಎಂದರು.

ಸುಂದರ ಸಾರ್ಥಕ ಬದುಕಿಗಾಗಿ ಸಮಾನತೆಯ ಸಂಕಲ್ಪದೊಂದಿಗೆ ನಡೆದ ಕ್ರಾಂತಿಯೇ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯಾಗಿತ್ತು. ನುಲಿ ಚಂದಯ್ಯ ಅವರು ಸಹ ಈ ಕಲ್ಯಾಣ ನಾಡು ಕಂಡ ಅಪರೂಪದ ಮಹಾನುಭಾವ ಶರಣ ಅವರಾಗಿದ್ದರು ಎಂದರು.

ತಾಲೂಕು ಅಧ್ಯಕ್ಷ ಧನರಾಜ ಮಾನೆ ಮಾತನಾಡಿ, 12ನೇ ಶತಮಾನದಲ್ಲಿ ಬಾಳಿ ಬದುಕಿದ ಗುರು ನುಲಿ ಚಂದಯ್ಯ ಅವರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕು. ಶೋಷಿತ ಸಮುದಾಯದ ಏಳ್ಗೆಗೆ ಶಿಕ್ಷಣವೇ ಅಸ್ತ್ರ. ಶಿಕ್ಷಣ ಪಡೆಯುವ ಮೂಲಕ ಸಮುದಾಯ ಅಭಿವೃದ್ಧಿಯಾಗಬೇಕು ಎಂಬದು ನಾವು ಅರಿಯಬೇಕು ಎಂದರು.

ರಾಮಣ್ಣ ವಡೆಯರ್ ಮಾತನಾಡಿ, ಬುದ್ಧ ಬಸವ ಅಂಬೇಡ್ಕರ್ ದಾರಿಯಲ್ಲಿ ನಾವು ಸಾಗಬೇಕು ಎಂದರು. ಡಾ. ಧನರಾಜ ರಾಗಾ ಮಾತನಾಡಿದರು. ಈ ವೇಳೆ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಅಬ್ದುಲ್ ರಹೀಮ, ಡಾ.ಫಯಾಜ್ ಅಲಿ, ಜಿಲ್ಲಾಧ್ಯಕ್ಷ ಸಂತೋಷ ಹಳೆಂಬರೆ, ಜಿಲ್ಲಾ ಕಾರ್ಯದರ್ಶಿ ಸಂಜೀವ ಬೇಲೂರ್, ಜಿಲ್ಲಾ ಹೇಳವ ಮಹಾಸಂಘ ಪ್ರಧಾನ ಕಾರ್ಯದರ್ಶಿ ಸಂತೋಷ ಕಮಠಾಣೆ, ನರಸಿಂಗ ಮಾನೆ, ವಾಮನ ಮಾನೆ, ವಿಜಯಕುಮಾರ ಮಾಣಿಕೇಶ್ವರ, ಬಾಲಾಜಿ ಜಾಧವ, ವೈಜಿನಾಥ ವಡೆಯರ್, ನಾಗನಾಥ ಶಂಕು, ಅನೀಲಕುಮಾರ ಮೆಲ್ದೊಡ್ಡಿ, ರವೀಂದ್ರ ಮೇತ್ರೆ, ಮಾಣಿಕ ನೇಳಗಿ, ಪ್ರಮೀಳಾ ಸೇರಿದಂತೆ ಇನ್ನಿತರರಿದ್ದರು.

Share this article