ಚಿತ್ರದುರ್ಗ: ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಗ್ರಾಮೀಣ ಪ್ರದೇಶದ ಮಹಿಳೆಯರ 3 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ತಾಲೂಕಿನ ಗೊಡಬನಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಡರಹಳ್ಳಿ ಗ್ರಾಮದಲ್ಲಿ ಸಿದ್ಧಗೊಳಿಸಲಾದ ಕೂಸಿನ ಮನೆಗೆ ಶಾಸಕ ವೀರೇಂದ್ರ ಪಪ್ಪಿ 2 ವರ್ಷದ ಮಗುವಿಗೆ ಪೌಷ್ಟಿಕ ಹಾಲು ನೀಡುವ ಮೂಲಕ ಚಾಲನೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಮಾಹಿತಿ ನೀಡಿ, ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತುಕೊಡುವ ಹಲವು ಯೋಜನೆಗಳಲ್ಲಿ ಕೂಸಿನ ಮನೆಯೂ ಒಂದಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಗ್ರಾಮೀಣ ಭಾಗದ ಮಹಿಳೆಯರ 3 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕೂಸಿನ ಮನೆ ಅನುಷ್ಠಾನಗೊಳಿಸಲಾಗುತ್ತಿದೆ. ಸದ್ಯ ತಾಲೂಕಿನಲ್ಲಿ 26 ಕೂಸಿನ ಮನೆಗಳ ನಿರ್ಮಾಣದ ಗುರಿ ಇದ್ದು, ಭರದಿಂದ ಸಿದ್ಧಗೊಳ್ಳುತ್ತಿವೆ. ಇಂತಹ ಕೂಸಿನ ಮನೆಗಳ ನಿರ್ವಹಿಸಲು ರೊಟೇಷನ್ ಆಧಾರದ ಮೇಲೆ 8 ಆರೈಕೆದಾರರನ್ನು ಗುರುತಿಸಿ ಸದ್ಯ 5 ಜನರಿಗೆ 7 ದಿನ ಮಕ್ಕಳ ನಿರ್ವಹಣೆ ಬಗ್ಗೆ ಪಂಚಾಯತ್ ರಾಜ್ ಮತ್ತು ಎಸ್ಐಆರ್‌ಡಿ ಸಂಸ್ಥೆಯ ನುರಿತವರಿಂದ ವೈಜ್ಞಾನಿಕವಾಗಿ ತರಬೇತಿ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಮಧು ರಮೇಶ್, ಸಹಾಯಕ ನಿರ್ದೇಶಕ ಎರ್ರಿಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳ, ಐಇಸಿ ಸತ್ಯನಾರಾಯಣ, ಪಿಡಿಒ ಭವಾನಿ, ಗ್ರಾಪಂ ಸಿಬ್ಬಂದಿ, ಅಂಗವಾಡಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.