ಗಜೇಂದ್ರಗಡ: ಜೀವರಕ್ಷಣೆಯ ಜವಾಬ್ದಾರಿ ಹೊತ್ತವರು ಕರ್ತವ್ಯಕ್ಕೆ ಸಮಯದ ನಿಗದಿಯನ್ನು ಹಾಕಿಕೊಳ್ಳಬಾರದು ಎಂದು ಪ್ರಾಚಾರ್ಯ ಜೆ.ಬಿ. ಗುಡಿಮನಿ ತಿಳಿಸಿದರು.
ಸ್ಥಳೀಯ ಸಾಯಿರಾಮ ಟ್ರಸ್ಟ್ ಕಮಿಟಿ, ತಾರಿಣಿ ಇನಸ್ಟಿಟ್ಯೂಟ್ ಆಪ್ ನರ್ಸಿಂಗ್ ಸೈನ್ಸ್ ವಿಭಾಗದ ಬಿಎಸ್ಸಿ ನರ್ಸಿಂಗ್ ಮತ್ತು ಜಿಎನ್‌ಎಂ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.ಸಮಾಜದಲ್ಲಿ ಎಲ್ಲ ಕೆಲಸಗಳಿಗೆ ಸಮಯದ ನಿಗದಿಯಾಗಿದೆ. ಕೆಲ ದಿನಗಳ ನಂತರ ಸಿಬ್ಬಂದಿಯೊಬ್ಬರ ಕರ್ತವ್ಯಕ್ಕೆ ರಜೆ ಹಾಕಿದ್ದರೆ ಕೆಲಸದ ಒತ್ತಡವಿದ್ದರೆ ಬೇರೆ ಸಿಬ್ಬಂದಿ ಕೆಲಸವನ್ನು ಪೂರ್ಣಗೊಳಿಸಬಹುದು. ಆದರೆ ಜೀವದ ರಕ್ಷಣೆಯ ಮಹತ್ತರ ಜವಾಬ್ದಾರಿ ಹೊಂದಿರುವ ವೈದ್ಯರು ಸಮಯದ ನಿಗದಿಯನ್ನು ಹಾಕಿಕೊಂಡರೆ ಮನುಷ್ಯ ಕುಲಕ್ಕೆ ಸಂಕಷ್ಟದ ದಿನಗಳು ಆರಂಭವಾಗಲಿದೆ. ಹೀಗಾಗಿ ನರ್ಸಿಂಗ್ ಸೇರಿ ವೈದ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಮೂಹವು ಹಿರಿಯ ವೈದ್ಯರ ಕರ್ತವ್ಯಪ್ರಜ್ಞೆ ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಜಿಲ್ಲಾ ಸಂಕನೂರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯ ವಿನ್ಸೆಂಟ್ ಪಾಟೀಲ ಮಾತನಾಡಿ, ನರ್ಸಿಂಗ್ ಕ್ಷೇತ್ರಕ್ಕೆ ಉಜ್ವಲವಾದ ಭವಿಷ್ಯವಿದ್ದು, ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಸೂಕ್ತ ಅಧ್ಯಯನದ ಮೂಲಕ ಜೀವನ್ಮರಣದ ನಡುವೆ ಹೋರಾಡುವ ರೋಗಿಗಳಿಗೆ ವೈದ್ಯರು ನೀಡುವ ಚಿಕಿತ್ಸೆಯಷ್ಟೇ ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಆಗಿರುತ್ತದೆ. ಹೀಗಾಗಿ ನರ್ಸಿಂಗ್ ವಿದ್ಯಾರ್ಥಿಗಳು ಮುಂದೆ ನಿರ್ವಹಿಸುವ ಕರ್ತವ್ಯ ಅರಿತು ಅಧ್ಯಯನ ಮಾಡಲಿ ಎಂದರು.ಸಾಯಿರಾಮ್ ಸಮಿತಿ ಅಧ್ಯಕ್ಷ ಡಾ. ಆರ್.ಎಸ್. ಜೀರೆ ಮಾತನಾಡಿ, ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ ಹಾಗೂ ರೋಗಿಗಳ ಪ್ರಾಣ ಉಳಿಸುವ ವೈದ್ಯರಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ಹೀಗಾಗಿ ವೈದ್ಯರು ರೋಗಿಗೆ ಚಿಕಿತ್ಸೆ ನೀಡುವ ಮೂದಲು ನರ್ಸ್‌ಗಳು ನೀಡುವ ಪ್ರಥಮ ಚಿಕಿತ್ಸೆ ಮುಖ್ಯವಾದದ್ದು. ಹೀಗಾಗಿ ನರ್ಸಿಂಗ್ ಕಲಿಯುವ ವಿದ್ಯಾರ್ಥಿಗಳು ಮಹತ್ತರ ಕರ್ತವ್ಯವನ್ನು ಆಯ್ಕೆ ಮಾಡಿಕೊಂಡ ಪರಿಕಲ್ಪನೆ ಮೊದಲ ದಿನದಿಂದಲೇ ಇರಲಿ ಎಂದರು.ಡಾ. ಸೋಮಶೇಖರ ಕಲ್ಮಠ, ಪ್ರಾ. ಯಶವಂತ ಸೇರಿ ವಿದ್ಯಾರ್ಥಿಗಳ ಪಾಲಕರು, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಬೋಧಕ ಸಿಬ್ಬಂದಿ ಇದ್ದರು.