ಕನ್ನಡಪ್ರಭ ವಾರ್ತೆ ಸಿರಿಗೆರೆ
1000 ಎಕರೆ ವಿಸ್ತೀರ್ಣದ ಕೆರೆಗೆ 56 ಕಿ.ಮೀ. ದೂರದಿಂದ ₹525 ಕೋಟಿ ವೆಚ್ಚದಲ್ಲಿ ತುಂಗಾಭದ್ರ ನೀರು ತಂದು ತುಂಬಿಸಲಾಗಿದೆ. ಈ ಕೆರೆಯಿಂದ 42 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಹಲವು ವರ್ಷಗಳ ಕಾಲ ನೀರಿಲ್ಲದೆ ಬತ್ತಿಹೋಗಿದ್ದ ಕೆರೆಯಲ್ಲಿ ಈಗ ಸಮೃದ್ಧ ನೀರು ಶೇಖರಗೊಂಡಿದೆ. ಇದರಿಂದ ಈ ಭಾಗದ ರೈತರ ಮೊಗದಲ್ಲಿ ಹಸನ್ಮುಖಿ ಭಾವ ತುಂಬಿ ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆದರೆ ಈ ಭಾವನೆ ಭರಮಸಾಗರ ಅಡಿಕೆ ಬೆಳೆಗಾರರಿಗೆ ಇದ್ದಂತಿಲ್ಲ. ಅವರ ನಡೆಯಿಂದ ಕೆರೆಯ ಅಂಗಳದಲ್ಲಿ ರಾಶಿಗಟ್ಟಲೆ ಅಡಿಕೆ ತ್ಯಾಜ್ಯ ಬಂದು ಬಿದ್ದಿದೆ. ಕೆರೆಯ ಅಂಗಳಕ್ಕೆ ಹೊಂದಿಕೊಂಡಿರುವ ಕೆಲವು ಅಡಿಕೆ ಬೆಳೆಗಾರರು, ವ್ಯಾಪಾರಸ್ಥರು ಸುಲಿದ ಅಡಿಕೆಯ ಹಸಿ ಸಿಪ್ಪೆಯನ್ನು ಕೆರೆಯ ನೀರಿಗೆ ಸಾಗುಹಾಕುವ ಕೆಲಸವನ್ನು ಕಳೆದ ವರ್ಷದಿಂದ ನಿತ್ಯವೂ ಮಾಡುತ್ತಿದ್ದಾರೆ. ಕೆರೆಯ ಅಂಚಿನಲ್ಲಿ ನೂರಾರು ಲೋಡು ತ್ಯಾಜ್ಯವನ್ನು ಸುರಿದಿರುವುದು ಈಗಲೂ ಕಣ್ಣಿಗೆ ರಾಚುವಂತಿದೆ. ಕ್ರಮೇಣ ಈ ತ್ಯಾಜ್ಯ ನೀರಿನಲ್ಲಿ ಬೆರೆತುಹೋಗುತ್ತಿದೆ.ಇದರಿಂದ ಪರಿಶುಭ್ರವಾಗಿರುವ ತುಂಗಭದ್ರೆಯ ನೀರು ಮಲಿನಗೊಂಡು ಕೊನೆಯಲ್ಲಿ ಕೆರೆಯಲ್ಲಿನ ಜೀವರಾಶಿಗಳ ಪ್ರಾಣಕ್ಕೆ ಎರವಾಗುತ್ತದೆ. ಕೆರೆಯಲ್ಲಿನ ನೀರನ್ನು ಕುಡಿಯುವ ಜಾನುವಾರುಗಳ ಪ್ರಾಣಕ್ಕೂ ಇದು ಕುತ್ತು ತರಬಹುದು. ಈ ಬೃಹತ್ ಕೆರೆಯಲ್ಲಿ ಮೀನು ಸಾಕುವ ಉದ್ಯಮ ಮಾಡುವ ಅಪೇಕ್ಷೆ ಇಟ್ಟುಕೊಂಡಿರುವವರಿಗೆ ಹಿನ್ನಡೆಯಾಗಬಹುದು.
ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ
ಇಂತಹ ವೇಳೆಯಲ್ಲಿ ತಾಲೂಕು ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಕೂಡಲೇ ಸ್ಥಳಕ್ಕೆ ಅಗಮಿಸಿ, ವಾಸ್ತವವನ್ನು ಪರಿಶೀಲಿಸಿ ಕೆರೆಯ ಅಂಗಳದ ಅಂಚಿನಲ್ಲಿ ಅಡಿಕೆ ಸುಲಿಯುವ ಮತ್ತು ಅಲ್ಲಿಗೆ ತಂದು ತ್ಯಾಜ್ಯವನ್ನು ವಿಲೇವಾರಿ ಮಾಡುವ ಜನರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ರೈತರ ಬಗ್ಗೆ ಅಪಾರ ಕಾಳಜಿಯಿಂದ ತರಳಬಾಳು ಶ್ರೀಗಳು ಭರಮಸಾಗರ ಕೆರೆಗೆ ನೀರು ತಂದಿದ್ದಾರೆ. ಕೆರೆಯ ಆವರಣವನ್ನು ಪರಿಶುಭ್ರವಾಗಿ ಇರಿಸಿಕೊಳ್ಳಲು ಅವರು ಈಗಾಗಲೇ ಹಲವು ಬಾರಿ ಹೇಳಿದ್ದಾರೆ. ಇಲ್ಲಿ ಬೋಟಿಂಗ್ ವ್ಯವಸ್ಥೆ ಮಾಡುವ ಆಲೋಚನೆ ಕೂಡ ಅವರಲ್ಲಿದೆ. ಹೀಗಿರುವಾಗ ಭರಮಸಾಗರದ ಕೆಲವು ನಾಗರೀಕರು ಕೆರೆಯ ಆವರಣದಲ್ಲಿ ಅಡಿಕೆ ತ್ಯಾಜ್ಯವನ್ನು ನೀರಿಗೆ ಸೇರಿಸುವುದು ಅಪೇಕ್ಷಣೀಯವಲ್ಲ. ಕೂಡಲೆ ಸ್ವಯಂ ಪ್ರೇರಿತರಾಗಿ ತ್ಯಾಜ್ಯವನ್ನು ಬೇರೆಡೆಗೆ ಸಾಗಿಸಬೇಕು.
ಕೆರೆ ಸಮಿತಿ ಅಧ್ಯಕ್ಷರು, ಭರಮಸಾಗರ
ಸಿ.ಆರ್. ನಾಗರಾಜ್