ಅಡಕೆ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಬೇರ್ಪಡಿಸುವುದು ಸಾಧ್ಯವಿಲ್ಲದ ಹಂತಕ್ಕೆ ತಲುಪಿದೆ. ಹೀಗಾಗಿ ಅಡಕೆಯನ್ನು ಕ್ಯಾನ್ಸರ್ ಅಥವಾ ಗುಟ್ಕಾ ಗುಮ್ಮದಿಂದ ಹೊರತರಲು ಪರ್ಯಾಯ ವ್ಯವಸ್ಥೆಯ ಕಡೆ ನೋಡಲೇಬೇಕಾದ ಅನಿವಾರ್ಯತೆ ಇದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ : ಅಡಕೆ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಬೇರ್ಪಡಿಸುವುದು ಸಾಧ್ಯವಿಲ್ಲದ ಹಂತಕ್ಕೆ ತಲುಪಿದೆ. ಹೀಗಾಗಿ ಅಡಕೆಯನ್ನು ಕ್ಯಾನ್ಸರ್ ಅಥವಾ ಗುಟ್ಕಾ ಗುಮ್ಮದಿಂದ ಹೊರತರಲು ಪರ್ಯಾಯ ವ್ಯವಸ್ಥೆಯ ಕಡೆ ನೋಡಲೇಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಅಡಕೆಯನ್ನು ಆಹಾರ ವ್ಯಾಪ್ತಿಯಿಂದ ಕಳಚಿ ಪೌಷ್ಟಿಕಾಂಶಗಳನ್ನುಒಳಗೊಂಡ ಉಪಯುಕ್ತ ವಸ್ತುವಿನ ಸ್ಥಾನದಲ್ಲಿ ಇರಿಸಿದರೆ ಮಾತ್ರ ಇದಕ್ಕೆ ಭವಿಷ್ಯ ರೂಪಿಸಬಹುದು. ಹೀಗೊಂದು ಹೊಸ ಚರ್ಚೆಯನ್ನು ಅಡಕೆ ವಲಯದ ತಜ್ಞರು ಆಡುತ್ತಿದ್ದಾರೆ.
Nutranical ಸ್ತರಕ್ಕೆ ಕೊಂಡೊಯ್ಯುವುದು ಮಾತ್ರವಲ್ಲ, ಈ ನಿಟ್ಟಿನಲ್ಲಿ ಹೊಸ ಸಂಶೋಧನೆಗಳನ್ನು ನಡೆಸಿ ಅದಕ್ಕೆ ಪೇಟೆಂಟ್ ಪಡೆದುಕೊಳ್ಳಬೇಕು. ಹೊಸ ಹೊಸ ಉಪಯುಕ್ತ ವಸ್ತುಗಳ ಸಂಶೋಧನೆ ಹೆಚ್ಚಿದಂತೆ ಅಡಕೆಯ ಮಾರುಕಟ್ಟೆ ತಂತಾನೆ ಗಟ್ಟಿಯಾಗುತ್ತದೆ. ಆಗ ಯಾವುದೇ ನಿಷೇಧದ ಭಯ ಇರುವುದೂ ಇಲ್ಲ ಎನ್ನುತ್ತಾರೆ ನಿವೃತ್ತ ವಿಜ್ಞಾನಿ, ಬೆಲೆ ಆಯೋಗದ ಮಾಜಿ ಅಧ್ಯಕ್ಷರು, ಅಡಕೆ ತಜ್ಞ ಪ್ರಕಾಶ್ ಕಮ್ಮರಡಿಯವರು.ಈ ಹಿಂದೆ ಅಡಕೆ ನಿಷೇಧದ ಗುಮ್ಮ ಎದುರಾದಾಗ ಪ್ರಮುಖ ಅಡಕೆ ಬೆಳೆಗಾರರು, ಅಡಕೆ ವಲಯದ ಸಹಕಾರಿ ಸಂಸ್ಥೆಗಳು, ಅಡಕೆ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳು ಒಟ್ಟಾಗಿ ಸರ್ಕಾರದ ಮೇಲೆ ಒತ್ತಡ ತಂದು ಅಡಕೆಯನ್ನು ಆಹಾರ ಪದಾರ್ಥದ ಗುಂಪಿಗೆ ಸೇರಿಸಿದರು. ಒಮ್ಮೆ ಅಡಕೆ ಆಹಾರ ಎಂದಾದರೆ ಇದನ್ನು ನಿಷೇಧಿಸುವುದು ಸಾಧ್ಯವಿಲ್ಲದ ಮಾತು ಎನ್ನುವುದು ಆಗಿನ ಒಮ್ಮತದ ಅಭಿಪ್ರಾಯವಾಗಿತ್ತು. ಆದರೆ ಆಹಾರ ಗುಂಪಿಗೆ ಸೇರ್ಪಡೆಯಾದರೆ ಅದು ಬಳಿಕ ಕಲಬೆರಕೆ ಕಾಯ್ದೆಯಡಿ ಬಂದು ಅಡಕೆಯ ಪರ್ಯಾಯ ಬಳಕೆಗೆ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಯಾರೂ ಗಂಭೀರ ಚಿಂತನೆ ನಡೆಸಿರಲಿಲ್ಲ.
ಅಡಕೆಯಲ್ಲಿನ ಉತ್ತೇಜಕ ಅಂಶ ಗುರುತಿಸಬೇಕು:
ಅಡಕೆಯಲ್ಲಿ ಉತ್ತೇಜಕ ಅಂಶಗಳಿವೆ. ಇದನ್ನು ಪರಂಪರೆಯಲ್ಲಿ ಗುರುತಿಸಲಾಗಿದೆ. ಇದೇ ಕಾರಣಕ್ಕೆ ಅಡಕೆಯನ್ನು ಅನೇಕ ಸಂದರ್ಭಗಳಲ್ಲಿ ಬಳಸಲಾಗುತ್ತಿತ್ತು. ಇಂತಹ ಉತ್ತೇಜಕ ವಸ್ತುಗಳ ನಿಗದಿತ ಪ್ರಮಾಣದ ಬಳಕೆ ಮನುಷ್ಯನಿಗೆ ಅತ್ಯಂತ ಲಾಭಕರವಾಗಿದೆ. ವಯೋಸಹಜ ಸಂದರ್ಭದಲ್ಲಿ ಉಂಟಾಗುವ ಮರೆಗುಳಿತನಕ್ಕೆ ಕೂಡ ಇದು ಉತ್ತಮ ಔಷಧ ಎನ್ನಲಾಗುತ್ತಿದೆ. ವಯಾಗ್ರವಾಗಿ ಕೂಡ ಕೆಲಸ ಮಾಡುತ್ತದೆ. ಇಂತಹ ಉತ್ತೇಜಕ ಅಂಶಗಳನ್ನು ಗುರುತಿಸಿ ಬಳಕೆಯ ಬಗ್ಗೆ ಗಮನಹರಿಸಬೇಕಾಗಿದೆ.ಸಿಆರ್ ಸಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಕೇಂದ್ರ ಸರ್ಕಾರ ಹಣ ನೀಡುತ್ತದೆ. ಆದರೆ ಇದರ ಬಗ್ಗೆ ಇದುವರೆಗೆ ಸರಿಯಾದ ಒತ್ತಡ ಕೇಂದ್ರ ಸರ್ಕಾರದ ಮೇಲೆ ಬಿದ್ದಿಲ್ಲ. ಸಹಕಾರಿ ವಲಯಕ್ಕೆ ಇದನ್ನು ನೀಡಿದರೆ ಅಥವಾ ಪ್ರತ್ಯೇಕ ಅಡಕೆ ಮಂಡಳಿ ಸ್ಥಾಪಿಸಿದಲ್ಲಿ ಸಿಆರ್ ಸಿ ಸಂಸ್ಥೆ ಸ್ಥಾಪನೆ ಸಾಧ್ಯವಾಗುತ್ತದೆ. ಹೀಗಾಗಿ ಅಡಕೆ ಮಂಡಳಿ ಸ್ಥಾಪನೆ ಅತ್ಯಂತ ಮುಖ್ಯ. ಆದರೆ ಇದುವರೆಗೆ ಯಾಕೋ ಇದಾಗಿಲ್ಲ ಎಂದು ಪ್ರಕಾಶ್ ಕಮ್ಮರಡಿ ಬೇಸರ ವ್ಯಕ್ತಪಡಿಸುತ್ತಾರೆ.
ಸರ್ಕಾರ ಮತ್ತು ಸಂಶೋಧನಾ ಸಂಸ್ಥೆಯಿಂದ ಅಡಕೆಯ ಸಮಸ್ಯೆಗೆ ಪರಿಹಾರ ಅಸಾಧ್ಯ ಎಂಬ ವ್ಯವಸ್ಥಿತವಾದ ವ್ಯವಸ್ಥೆಯೊಂದು ಎಲ್ಲೆಡೆ ಆಳವಾಗಿ ಬೇರೂರಿಸಿದೆ. ಮುಖ್ಯವಾಗಿ ವಿವಿಧ ಇಲಾಖೆಗಳ ಸೆಕ್ರೆಟರಿಯೇಟ್, ಸಚಿವಾಲಯ, ಮಂತ್ರಿಗಳು, ಜನಪ್ರತಿನಿಧಿಗಳು, ಐಎಎಸ್ ಅಧಿಕಾರಿಗಳ ವಲಯದಲ್ಲಿ ಗುಟ್ಕಾ ಪರವಾಗಿ ತೀವ್ರ ವಿರೋಧವಿದೆ. ಈ ಅಂಶವನ್ನು ಪೋಷಿಸಲು ಮತ್ತು ಇದೇ ಅಭಿಪ್ರಾಯ ದಟ್ಟವಾಗಿ ಉಳಿಯುವಂತೆ ಮಾಡಲು ಸಿಗರೇಟು ಲಾಬಿ ಸತತವಾಗಿ ಪ್ರಯತ್ನಿಸುತ್ತಿದೆ. ಹೀಗಾಗಿಯೇ ಗುಟ್ಕಾ ಎನ್ನುವ ಬದಲಿಗೆ ಸದ್ಯ ‘ಸ್ಮೋಕ್ ಲೆಸ್ ಟೊಬ್ಯಾಕೋ’ ಎಂಬ ಶಬ್ದವನ್ನು ಬಳಸುತ್ತಿವೆ.
ಏಷ್ಯಾದಲ್ಲಿ ಹೆಚ್ಚುತ್ತಿರುವ ಸ್ಮೋಕ್ ಲೆಸ್ ಟೊಬ್ಯಾಕೋ ಬಳಕೆ:ಈ ಸ್ಮೋಕ್ ಲೆಸ್ ಟೊಬ್ಯಾಕೋ ಬಳಕೆ ಏಷ್ಯಾ ದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಸಿಗರೇಟು ಸೇದುವವರ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದೆ. ಹೀಗಾಗಿ ಈ ಲಾಬಿ ದಟ್ಟವಾಗಿ ಕೆಲಸ ಮಾಡುತ್ತಲೇ ಇದೆ ಎನ್ನುತ್ತಾರೆ ಪ್ರಕಾಶ್ ಕಮ್ಮರಡಿ.ಅಡಕೆ ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ಬೇರ್ಪಡಿಸುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ಇದು ಸದ್ಯಕ್ಕೆ ಸಾಧ್ಯವೂ ಇಲ್ಲ. ಬದಲಾಗಿ ಪರ್ಯಾಯ ಉತ್ಪನ್ನಗಳ ಬಗ್ಗೆ ಗಮನ ಹರಿಸಬೇಕು. ಇದರಿಂದಾಗಿ ಭವಿಷ್ಯದಲ್ಲಿ ಇಂತಹ ತಂಬಾಕು ಲಾಬಿಯ ಒತ್ತಡ ಅಥವಾ ಬೆದರಿಕೆಯ ಗುಮ್ಮ ಇದರ ಮೇಲೆ ಬೀಳುವುದಿಲ್ಲ ಎನ್ನುವುದು ತಜ್ಞರ ಮಾತು.
ಉತ್ಪಾದಿಸುವ ಯಾವುದೇ ವಸ್ತುವು ಹಾನಿಕಾರಕವಾದರೆ ಆ ನೈತಿಕ ಜವಾಬ್ದಾರಿಯನ್ನು ಪ್ರತಿ ರೈತರು ಹೊರಬೇಕಾಗುತ್ತದೆ. ಅಡಕೆ ಆಹಾರ ಪದಾರ್ಥವಲ್ಲ, ಬದಲಿಗೆ ಪೌಷ್ಟಿಕಾಂಶ ವಸ್ತು. ಹೀಗಾಗಿ ಹೊಸ ಸಂಶೋಧನೆಯ ಮೂಲಕ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ಅದಕ್ಕಾಗಿ ಸರ್ಕಾರದ ಬದಲಿಗೆ ಸಹಕಾರಿಯತ್ತ ನೋಡಬೇಕು.
ಪ್ರಕಾಶ್ ಕಮ್ಮರಡಿ, ಅಡಕೆ ತಜ್ಞ