ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಗೆ ಖಂಡನೆ

KannadaprabhaNewsNetwork | Published : Aug 20, 2024 1:02 AM

ಸಾರಾಂಶ

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿಗೆ ಖಂಡಸಿ ಕಾಂಗ್ರೆಸ್‌ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ತುಮಕೂರುಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ನಗರ ಕಾಂಗ್ರೆಸ್ ಘಟಕದಿಂದ ಪ್ರತಿಭಟಿಸಿ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿದರು.ನಗರದ ಜಿ.ಜಿ.ಎಸ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ರಾಜ್ಯಪಾಲರ ವಿರುದ್ದ ಘೋಷಣೆ ಕೂಗುತ್ತಾ, ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಒತ್ತಾಯಿಸಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಎಲ್ಲಾ ಜನರಿಗೆ ಅನುಕೂಲ ಕಲ್ಪಿಸಿ, ನಾಡಿನ ಅಭಿವೃದ್ದಿಯಲ್ಲಿ ಪಾಲುದಾರರಾಗುವಂತೆ ಮಾಡಿದ್ದರು. ಇದನ್ನು ಸಹಿಸದ ಕೆಲವರು ಕುತಂತ್ರ ಮಾಡಿ 2021-22ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಿವೇಶನ ಹಂಚಿಕೆ ಮಾಡಿ, ಈಗ ಮುಖ್ಯಮಂತ್ರಿಗಳ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ ಎಂದರು.2023ರ ಚುನಾವಣೆ ವೇಳೆ ಡಾ.ಜಿ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಪ್ರಣಾಳಿಕೆ ನೀಡಿದ್ದ ಐದು ಗ್ಯಾರಂಟಿಗಳು ಈ ನಾಡಿನ ಬಡವರ ಪಾಲಿಗೆ ಭದ್ರತೆ ನೀಡಿವೆ. ಇದನ್ನು ಸಹಿಸಲಾಗದೆ ಈ ರೀತಿಯ ವಾಮಮಾರ್ಗದಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗೆ ಇಳಿಸಲು ಮುಂದಾಗಿದ್ದಾರೆ. ಇದಕ್ಕೆ ಎಂದಿಗೂ ಪಕ್ಷದ ಕಾರ್ಯಕರ್ತರು ಅವಕಾಶ ಮಾಡಿಕೊಡುವುದಿಲ್ಲ. ಅವಶ್ಯವಿದ್ದರೆ ಎಂತಹ ಹೋರಾಟಕ್ಕೂ ಸಿದ್ದ. ಕೂಡಲೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜಿಪಂ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಒಂದು ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ರಾಜಕೀಯ ಅಸ್ತ್ರವಾಗಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು ಇನ್ನಿಲ್ಲದ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅವಧಿಯಲ್ಲಿ ಆಗಿರುವ ಹಗರಣವನ್ನು ಸಿದ್ದರಾಮಯ್ಯ ತಲೆಗೆ ಕಟ್ಟಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಮುಂದಾಗಿವೆ. ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ ಸೇರಿದಂತೆ ಹಲವರು ಈ ಕುತಂತ್ರಕ್ಕೆ ಬಲಿಯಾಗಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಪರ ನಿಲ್ಲಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ, ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರ ನಡೆ ಖಂಡನೀಯ ಎಂದರು.ತಹಸೀಲ್ದಾರ್ ಸಿದ್ದೇಶ್ವರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕರಾದ ಎಸ್. ಷಫಿ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಪಾಲಿಕೆ ಮಾಜಿ ಸದಸ್ಯರಾದ ಇನಾಯತ್, ನಯಾಜ್ ,ಎನ್. ಮಹೇಶ್. ನಿಖೇತರಾಜ್ ಮೌರ್ಯ, ಮಾಜಿ ಮೇಯರ್ ಪ್ರಭಾವತಿ ಸುಧೀಶ್ವರ್, ಗುರುಪ್ರಸಾದ್ ಪಾಲ್ಗೊಂಡಿದ್ದರು.

Share this article