ಜೆಸಿ ಆಸ್ಪತ್ರೆಯಿಂದ 6 ಮಂದಿ ವೈದ್ಯರ ವರ್ಗಾವಣೆಗೆ ಆಕ್ಷೇಪ

KannadaprabhaNewsNetwork | Published : Jul 2, 2025 12:20 AM
ಪೋಟೋ: 30ಟಿಟಿಎಚ್‌01ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯರುಗಳ ವರ್ಗಾವಣೆಗೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. | Kannada Prabha

ತಾಲೂಕು ಸರ್ಕಾರಿ ಜೆಸಿ ಆಸ್ಪತ್ರೆಯಿಂದ 6 ಮಂದಿ ವೈದ್ಯರು ಮತ್ತು ನಾಲ್ಕು ಮಂದಿ ಸ್ಟಾಫ್ ನರ್ಸ್‍ಗಳನ್ನು ಬೇರೆಡೆಗೆ ವರ್ಗ ಮಾಡಿರುವ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿರುವ ಶಾಸಕ ಆರಗ ಜ್ಞಾನೇಂದ್ರ ಆರೋಗ್ಯ ಇಲಾಖೆ ನಿರ್ಧರಿಸಿರುವ ಕ್ರಿಟಿಕಲ್ -ನಾನ್ ಕ್ರಿಟಿಕಲ್ ಮಾನದಂಡವೇ ಅವೈಜ್ಞಾನಿಕವಾಗಿದೆ ಎಂದಿದ್ದಾರೆ.

ತೀರ್ಥಹಳ್ಳಿ: ತಾಲೂಕು ಸರ್ಕಾರಿ ಜೆಸಿ ಆಸ್ಪತ್ರೆಯಿಂದ 6 ಮಂದಿ ವೈದ್ಯರು ಮತ್ತು ನಾಲ್ಕು ಮಂದಿ ಸ್ಟಾಫ್ ನರ್ಸ್‍ಗಳನ್ನು ಬೇರೆಡೆಗೆ ವರ್ಗ ಮಾಡಿರುವ ಬಗ್ಗೆ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿರುವ ಶಾಸಕ ಆರಗ ಜ್ಞಾನೇಂದ್ರ ಆರೋಗ್ಯ ಇಲಾಖೆ ನಿರ್ಧರಿಸಿರುವ ಕ್ರಿಟಿಕಲ್ -ನಾನ್ ಕ್ರಿಟಿಕಲ್ ಮಾನದಂಡವೇ ಅವೈಜ್ಞಾನಿಕವಾಗಿದೆ ಎಂದಿದ್ದಾರೆ.

ಸೋಮವಾರ ಶಾಸಕ ಆರಗ ಜ್ಞಾನೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

ಈ ವೇಳೆ ಆರೋಗ್ಯ ಇಲಾಖೆಯ ಆಯುಕ್ತ ಹರ್ಷ ಗುಪ್ತಾರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದ ಅವರು, ಪರ್ಯಾಯ ಸಿಬ್ಬಂದಿಯನ್ನು ನೇಮಕ ಮಾಡದೇ ಒಮ್ಮೆಲೆ ಆರು ಮಂದಿ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಿದಲ್ಲಿ ಬಡ ರೋಗಿಗಳ ಸ್ಥಿತಿ ಚಿಂತಾಜನಕವಾಗಲಿದೆ ಎಂಬುದನ್ನೂ ಇಲಾಖೆ ಅರಿಯಬೇಕಿದೆ ಎಂದರು.

100 ಹಾಸಿಗೆಯ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆ ಕೇವಲ ಒಂದು ತಾಲೂಕಿಗೆ ಸೀಮಿತವಾಗಿಲ್ಲ. ನೆರೆಯ ತಾಲೂಕುಗಳಾದ ಕೊಪ್ಪ, ಎನ್‌ಆರ್ ಪುರ, ಶೃಂಗೇರಿ ಮತ್ತು ಹೊಸನಗರ ತಾಲೂಕಿನ ಜನರೂ ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಈ ಆಸ್ಪತ್ರೆಗೆ ಪ್ರತಿದಿನ ಸರಾಸರಿ 500 ಹೊರರೋಗಿಗಳು ಬರುತ್ತಿದ್ದು ತಾಲೂಕಿನಲ್ಲಿ ಕೆಎಫ್‍ಡಿ ಡೆಂಘೀ ರೋಗಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ಹಾಗೂ ಸರಾಸರಿ 100 ಹೆರಿಗೆ ಆಗುತ್ತಿದ್ದು ಇಲ್ಲಿಗೆ ಅರವಳಿಕೆ ವೈದ್ಯರು ಬಾರದಿದ್ದಲ್ಲಿ ಸಮಸ್ಯೆ ಗಂಭೀರವಾಗಲಿದೆ. ರೋಗಿಗಳ ಒಲವನ್ನು ಗಳಿಸಿರುವ ನುರಿತ ಸ್ಟಾಫ್ ನರ್ಸ್‍ಗಳ ಸ್ಥಾನ ತುಂಬುವುದು ಸುಲಭ ಸಾಧ್ಯವಲ್ಲ ಎಂದು ಹೇಳಿದರು.

ದಶಕಗಳಿಂದ ಈ ಭಾಗದ ಜನರನ್ನು ಬಾಧಿಸುತ್ತಿರುವ ಕೆಎಫ್‍ಡಿ ಹಾಗೂ ಡೆಂಘೀನಿಂದಾಗಿ ಹತ್ತಾರು ಸಾವು ಕೂಡಾ ಸಂಭವಿಸಿದೆ. ಹಾಗೂ ಆರೋಗ್ಯ ಇಲಾಖೆ ನಿರ್ಧರಿಸಿರುವ ಕ್ರಿಟಿಕಲ್ -ನಾನ್ ಕ್ರಿಟಿಕಲ್ ಮಾನದಂಡವೇ ಅವೈಜ್ಞಾನಿಕವಾಗಿದೆ. ತಾಲೂಕು ಕೇಂದ್ರದಲ್ಲಿರುವ ಆಸ್ಪತ್ರೆಯನ್ನು ನಾನ್ ಕ್ರಿಟಿಕಲ್ ಪಟ್ಟಿಗೆ ಸೇರಿಸಿರುವುದೇ ಅಶ್ಚರ್ಯಕರವಾಗಿದೆ. ಇಷ್ಟು ದೊಡ್ಡ ಆಸ್ಪತ್ರೆಯನ್ನು ಅವಲಂಬಿಸಿರುವ ರೋಗಿಗಳ ಭವಣೆಯನ್ನು ಅರಿತು ಇಲಾಖೆ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ವರ್ಗವಾಗಿರುವವರಲ್ಲಿ ಮೆಡಿಕಲ್ ಆಫೀಸರ್ ಅರವಳಿಕೆ ತಜ್ಞ ಡಾ.ಗಣೇಶ್ ಭಟ್, ಮಕ್ಕಳ ತಜ್ಞ ಡಾ.ಪ್ರಭಾಕರ್, ಮೂಳೆ ತಜ್ಞ ಡಾ.ನಿಶ್ಚಲ್, ಇಎನ್‍ಟಿ ಡಾ.ರವಿಕುಮಾರ್, ಕಣ್ಣಿನ ವೈದ್ಯ ಡಾ.ಮಹಿಮಾ ಮತ್ತು ದಂತ ವೈದ್ಯ ಡಾ. ಗುರುರಾಜ್ ಸೇರಿದ್ದಾರೆ.