ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಶಾಸಕ ಕೊತ್ತುರು ಮಂಜುನಾಥ್

KannadaprabhaNewsNetwork | Published : Mar 8, 2024 1:52 AM

ಸಾರಾಂಶ

ಗ್ರಾಪಂಗಳ ಪಿಡಿಒಗಳು ಜನ, ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಲು ಮುಂದಾಗಿ, ಸಣ್ಣಪುಟ್ಟ ಸಮಸ್ಯೆಗಳು ಜನಪ್ರತಿನಿಧಿಯವರೆಗೆ ಬರಬಾರದು. ಜನರಿಂದ ದೂರವಾಣಿ ಕರೆ ಬಂದರೆ ತಹಸೀಲ್ದಾರ್, ತಾಪಂ ಇಓರನ್ನು ಹೊಣೆ ಮಾಡಲಾಗುತ್ತದೆ. ಕ್ರಮಕೈಗೊಳ್ಳುವ ವಿಚಾರದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಪ್ರತಿ ಹಳ್ಳಿಗೂ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಬೇಸಿಗೆ ಪ್ರಾರಂಭವಾಗಿದೆ, ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಯಾರಾದರೂ ದೂರುಗಳನ್ನು ನೀಡಿದರೆ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗುತ್ತದೆ. ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು, ಕೂಡಲೇ ಎಚ್ಚರಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಹಣಕ್ಕೆ ಕೊರತೆಯಿಲ್ಲ, ಮೊದಲು ಜನ, ಜಾನುವಾರುಗಳಿಗೆ ನೀರು, ಮೇವು ಕೊಡುವ ಕೆಲಸ ಮಾಡಿ, ಅದನ್ನು ಬಿಟ್ಟು ನಿರ್ಲಕ್ಷ್ಯ ಮಾಡಿದ್ದೇ ಆದರೆ ಪರಿಣಾಮ ಸರಿ ಇರಲ್ಲ. ಇದನ್ನು ಎಚ್ಚರಿಕೆಯಂದೇ ತಿಳಿದುಕೊಳ್ಳಿ ಎಂದರು.

ಗ್ರಾಪಂಗಳ ಪಿಡಿಒಗಳು ಜನ, ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಲು ಮುಂದಾಗಿ, ಸಣ್ಣಪುಟ್ಟ ಸಮಸ್ಯೆಗಳು ಜನಪ್ರತಿನಿಧಿಯವರೆಗೆ ಬರಬಾರದು. ಜನರಿಂದ ದೂರವಾಣಿ ಕರೆ ಬಂದರೆ ತಹಸೀಲ್ದಾರ್, ತಾಪಂ ಇಓರನ್ನು ಹೊಣೆ ಮಾಡಲಾಗುತ್ತದೆ. ಕ್ರಮಕೈಗೊಳ್ಳುವ ವಿಚಾರದಲ್ಲಿ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಪ್ರತಿ ಹಳ್ಳಿಗೂ ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಗ್ರಾಮಗಳಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆ ಆಗುತ್ತಿರುವ ಬಗ್ಗೆ ಪರಿಶೀಲಿಸಬೇಕು. ಡೀಸಿ, ತಹಸೀಲ್ದಾರ್ ಖಾತೆಯಲ್ಲಿ ದುಡ್ಡಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕುಡಿಯಲು ನೀರು, ಚರಂಡಿ, ಬೀದಿ ದೀಪ ಕೇಳುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಯೊಂದಿಗೆ ಸಮನ್ವಯತೆ ಬೆಳೆಸಿಕೊಳ್ಳಬೇಕು. ಯಾವುದೇ ಗ್ರಾಮಗಳಲ್ಲಿ ಟಿಸಿ ಬದಲಾವಣೆ, ಸ್ಥಳಾಂತರ ಕೇಳಿದಾಗ ಕೂಡಲೇ ಮಾಡಿಕೊಡಬೇಕು, ಸರ್ಕಾರಿ ಕೊಳವೆಬಾವಿಗಳಿಗೆ ಸಕಾಲಕ್ಕೆ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅಧಿಕಾರಿಗಳು ಕಚೇರಿಯಿಂದ ಗ್ರಾಮಗಳಿಗೆ ತೆರಳಿ ಸಮಸ್ಯೆಗಳ ಬಗ್ಗೆ ಜನರಿಂದ ಮಾಹಿತಿ ಪಡೆಯಬೇಕು. ಸಮಸ್ಯೆಗಳ ಕುರಿತು ಗಮನಕ್ಕೆ ತಂದರೆ ಕೂಡಲೇ ಟಾಸ್ಕ್ ಸಮಿತಿಗೆ ಮಾಹಿತಿ ಬಗೆಹರಿಸಲು ಅನುಮೋದನೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಪಂ ಇಓ ಮುನಿಯಪ್ಪ ಮಾತನಾಡಿ, ತಾಲೂಕಿನ ೧೨ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಅಗತ್ಯ ಕ್ರಮಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಲಾಗಿದೆ, ಪಂಚಾಯಿತಿ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ, ಕೊಳವೆಬಾವಿ ಕೊರೆಸಿದರೂ ನೀರು ಲಭ್ಯವಾಗುವುದಿಲ್ಲ ಎಂಬ ಅನುಮಾನವಿದ್ದರೆ, ಖಾಸಗಿ ಕೊಳವೆಬಾವಿಯನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲು ಕ್ರಮವಹಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ತಹಸೀಲ್ದಾರ್ ಹರ್ಷವರ್ಧನ್ ಮಾತನಾಡಿ, ಈಗಾಗಲೇ ತೀವ್ರ ಬರಗಾಲ ಎದುರಾಗಿದೆ, ತಾಲೂಕಿನಲ್ಲಿ ರಾಸುಗಳ ಸರ್ವೇ ನಡೆದಿದ್ದು, ೫೪ ಸಾವಿರಕ್ಕೂ ಹೆಚ್ಚು ಎಮ್ಮೆ, ಹಸು, ಕುರಿ, ಮೇಕೆಗಳು ಇವೆ. ಸದ್ಯಕ್ಕೆ ೧೩ ವಾರಗಳಿಗೆ ಆಗುವಷ್ಟು ೩೪ ಸಾವಿರ ಟನ್ ಮೇವು ದಾಸ್ತಾನು ಇದೆ ಎಂದರು.

ಗ್ರಾಮೀಣ ಭಾಗದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ತುರ್ತು ನೀರಿನ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಅವಕಾಶಗಳು ಇದ್ದು, ಸಮಿತಿಗೆ ಮಾಹಿತಿ ನೀಡಿದರೆ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ಕಂದಾಯ ನಿರೀಕ್ಷರಿಗೆ ಸಹ ಮೇವು, ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಶಿವಾನಂದ, ಕುರಗಲ್ ಮತ್ತು ವೇಮಗಲ್ ಪಟ್ಟಣ ಪಂಚಾಯಿತಿ ಮುಖ್ಯ ಆಡಳಿತಾಧಿಕಾರಿ ವೆಂಕಟೇಶ್ ಮತ್ತಿತರ ಅಧಿಕಾರಿಗಳಿದ್ದರು.

ಆದ್ಯತೆಯ ಮೇರೆಗೆ ಕೊಳವೆಬಾವಿ ಕೊರೆಸಿ:ಗ್ರಾಮೀಣ ಭಾಗದಲ್ಲಿ ಮನೆಮನೆಗೆ ನಲ್ಲಿ ಮೂಲಕ ನೀರು ಸರಬರಾಜು ಮಾಡುವ ಕಾಮಗಾರಿಗಳು ಚಾಲ್ತಿಯಲ್ಲಿವೆ. ಆದ್ಯತೆ ಮೇರೆಗೆ ಪೈಪ್ಲೈನ್, ಕೊಳವೆಬಾವಿ ಕೊರೆಸಬೇಕು. ಸಮಸ್ಯೆಗಳು ಎದುರಾಗುವವರೆಗೂ ಕಾಯಬಾರದು. ಅಧಿಕಾರಿಗಳು ಎದುರಾಗುವ ಸಮಸ್ಯೆಗಳಿಗೆ ಮುಂಜಾಗ್ರತವಾಗಿ ಪರಿಹಾರ ಕಂಡುಕೊಳ್ಳಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ, ಉತ್ತರ ಕರ್ನಾಟಕದ ಭಾಗಗಳಿಗಿಂತಲೂ ದಕ್ಷಿಣ ಭಾಗದಲ್ಲಿ ತಾಪಮಾನ ಹೆಚ್ಚಾಗಿದೆ, ತಾಪಮಾನ ಹೆಚ್ಚಾದಂತೆ ನೀರು ಇಂಗುವುದು ಹೆಚ್ಚಾಗುತ್ತಿದೆ. ಕೆರೆಗಳಲ್ಲೂ ನೀರು ಖಾಲಿಯಾಗಿ ಸುತ್ತಮುತ್ತ ಕೊಳವೆಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗುತ್ತಿದೆ ಎಂದರು.

ಕೆಸಿ ವ್ಯಾಲಿಯಿಂದ ಹಿಂದೆ ಜಿಲ್ಲೆಗೆ ೮೦ ಎಂಎಲ್ಡಿ ನೀರು ಹರಿಯುತ್ತಿತ್ತು, ಈಗ ೬೦ ಎಂಎಲ್ಡಿಗೆ ಇಳಿದಿದೆ, ಇದು ಮುಂದಿನ ದಿನಗಳಲ್ಲಿ ಇನ್ನು ಕಡಿಮೆಯಾಗಲಿದೆ. ಮಳೆಯಾದರೆ ಸಮಸ್ಯೆಗಳು ಎಲ್ಲಾ ನಿವಾರಣೆಯಾಗುತ್ತವೆ. ಚುನಾವಣೆ ಎದುರಾಗಿದೆ, ಕೆಲಸಗಳಿವೆ ಎಂದು ಸಬೂಬು ಹೇಳಬಾರದು ಎಂದು ಎಚ್ಚರಿಕೆ ನೀಡಿದರು.

Share this article