ಅಧಿಕಾರಿಗಳು ಪರಸ್ಪರ ಸಹಕಾರದಿಂದ ಅಭಿವೃದ್ಧಿಗೆಶ್ರಮಿಸಬೇಕು: ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ

KannadaprabhaNewsNetwork | Published : Aug 4, 2024 1:23 AM

ಸಾರಾಂಶ

ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕಾರದಿಂದ ತಾಲೂಕಿನ ಅಭಿವೃದ್ಧಿ ಕಡೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಹರಿಹರ

ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಪರಸ್ಪರ ಸಹಕಾರದಿಂದ ತಾಲೂಕಿನ ಅಭಿವೃದ್ಧಿ ಕಡೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ನೀಡಿದರು.

ನಗರದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶನಿವಾರ ತಾಲೂಕಿನ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಒಂದು ಇಲಾಖೆ ಮತ್ತೊಂದು ಇಲಾಖೆ ಕಡೆ ಬೊಟ್ಟು ತೋರಿಸುವ ಬದಲಿಗೆ, ಪರಸ್ಪರ ಸಹಕಾರದೊಂದಿಗೆ ತಾಲೂಕಿನ ಎಂಥದ್ದೇ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಅಭಿವೃದ್ಧಿ ಕಡೆಗೆ ಗಮನಹರಿಸಬೇಕು. ಸರ್ಕಾರದ ವಿವಿಧ ಯೋಜನೆಗಳು ತಳ ಸಮುದಾಯದ ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಬದ್ಧತೆ ತೋರಬೇಕು ಎಂದರು.

ರಾಜ್ಯಾದ್ಯಂತ ಡೆಂಘೀಜ್ವರ ಪ್ರಭಾವ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿಯೂ ಡೆಂಘೀ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹರಿಹರ ತಾಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳು ಡೆಂಘೀ ವಿಚಾರದಲ್ಲಿ ತಾತ್ಸಾರ ಮಾಡದೇ ನಗರ ಗ್ರಾಮೀಣ ಪ್ರದೇಶಗಳಲ್ಲಿ ಭೇಟಿ ನೀಡಿ ಸ್ವಚ್ಛತೆ ಕಾಪಾಡಲು ಅಗತ್ಯ ಎಚ್ಚರ ವಹಿಸಬೇಕು. ಡೆಂಘೀಜ್ವರ ಪ್ರಕರಣ ಹೆಚ್ಚಾಗದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ಶೀಘ್ರ ಡೆಂಘೀ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನೆರೆ ಹಾವಳಿ ಪೀಡಿತ ಪ್ರದೇಶಗಳಿಗೆ ತಾಲೂಕಿನ ಅಧಿಕಾರಿಗಳು ತಕ್ಷಣ ಭೇಟಿ ನೀಡಬೇಕು. ಸಂತ್ರಸ್ತರಿಗೆ ಅನುಕೂಲ ಕಲ್ಪಿಸಲು ಕಾಳಜಿ ಕೇಂದ್ರ ತೆರೆಯುವುದು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯ ಸಾಮಾಜಿಕ ಸೌಲಭ್ಯದಲ್ಲಿ ವ್ಯತ್ಯವಾಗದಂತೆ ಗಮನಹರಿಸಬೇಕು. ಮತ್ತೆ ಭೇಟಿ ನೀಡಿ ಸಭೆ ನಡೆಸಿ, ಸಮಗ್ರ ಮಾಹಿತಿ ಪಡೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಇತ್ತೀಚೆಗೆ ಗುತ್ತೂರು ಗ್ರಾಮದಲ್ಲಿ ಪರಿಶಿಷ್ಟರ ರುದ್ರಭೂಮಿ ಇಲ್ಲದಿರುವ ಕಾರಣಕ್ಕೆ ನದಿಯಲ್ಲಿಯೇ ಶವ ಸಂಸ್ಕಾರ ಮಾಡಿದ್ದನ್ನು ಪತ್ರಿಕೆಗಳಲ್ಲಿ ಮಾಹಿತಿ ಗಮನಿಸಿದ್ದೇನೆ. ಈ ವಿಚಾರವಾಗಿ ಕಂದಾಯ ಅಧಿಕಾರಿಗಳು ಆದಷ್ಟು ಬೇಗನೆ ಸೂಕ್ತ ಕ್ರಮ ಕೈಗೊಳ್ಳಬೇಕು. ಏನಾದರೂ ಸಮಸ್ಯೆ ಇದ್ದಲ್ಲಿ ನೇರವಾಗಿ ಗಮನಕ್ಕೆ ತಂದು, ಬಗೆಹರಿಸಿಕೊಂಡು, ಪರಿಶಿಷ್ಟರಿಗೆ ರುದ್ರಭೂಮಿ ಸೌಲಭ್ಯ ಕಲ್ಪಿಸುವ ಕೆಲಸ ಮಾಡಿ ಎಂದು ತಿಳಿಸಿದರು.

Share this article