ಮಹದೇವಪ್ಪ ಎಂ.ಸ್ವಾಮಿ ಶಿರಹಟ್ಟಿ
ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಹಾಲು, ಮೊಸರು, ಬೆಣ್ಣೆ ಮಾರುವಂತೆ ರಸ್ತೆ ಅಕ್ಕಪಕ್ಕ ಇಟ್ಟುಕೊಂಡು ಮದ್ಯ ಮಾರಾಟ ಮಾಡುತ್ತಿರುವುದು ಸಾಮಾನ್ಯವಾಗಿದೆ.ತಾಲೂಕು ವ್ಯಾಪ್ತಿಯಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ ಅಂಗಡಿಗಳ ಮಾಲೀಕರೊಂದಿಗೆ ಎಷ್ಟೊಂದು ಶಾಮೀಲಾಗಿದ್ದಾರೆ ಎಂದರೆ, ಬಾರ್ ಅಂಗಡಿಗಳ ತಪಾಸಣೆಗೆಂದು ಇಲಾಖೆ ಅಧಿಕಾರಿಗಳು ಬಂದರೆ ಅವರೆದುರೆ ಎಗ್ಗಿಲ್ಲದೆ ಅಕ್ರಮ ಮದ್ಯ ಸಾಗಾಟ ಆಗುತ್ತಿರುತ್ತದೆ.
ಅಬಕಾರಿ ಅಧಿಕಾರಿಗಳು ಮಾತ್ರ ತಮ್ಮ ವಾಹನದಲ್ಲಿ ಮೊಬೈಲ್ ನೋಡುತ್ತಾ ಕುಳಿತು ಕಾಲ ಹರಣ ಮಾಡಿ ಪರೋಕ್ಷವಾಗಿ ಬಾರ್ ಅಂಗಡಿಗಳಿಗೆ ಸಾಥ್ ನೀಡುತ್ತಿರುತ್ತಾರೆ.ಸಮಯ ನಿಗದಿ ಇಲ್ಲ: ಇಲ್ಲಿ ಹೆಸರಿಗಷ್ಟೇ ಬಾರ್ ಅಂಗಡಿಗಳು ಸಂಜೆ ಮತ್ತು ರಾತ್ರಿ ಬಾಗಿಲು ಹಾಕಿದಂತೆ ಕಾಣುತ್ತಿವೆ, ಆದರೆ ಹಿಂಬಾಗಿಲಿನಿಂದ ಅವ್ಯಾಹತವಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾತ್ರ ನಿರಂತರವಾಗಿ ನಡೆಯುತ್ತಿರುತ್ತದೆ. ಹಬ್ಬ ಹರಿದಿನಗಳು, ಚುನಾವಣೆ ಸಮಯ, ಜಾತ್ರೆ ಉತ್ಸವ ಹೀಗೆ ಹಲವಾರು ಕಾರಣಗಳಿಗಾಗಿ ಮದ್ಯ ಮಾರಾಟದ ಅಂಗಡಿ ಬಂದ್ ಮಾಡಿಸುತ್ತಾರೆ. ಆದರೆ ಅದೇ ಅಧಿಕಾರಿಗಳ ಸಮ್ಮುಖದಲ್ಲಿಯೇ ದುಪ್ಪಟ್ಟು ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಾರೆ.
ಮಕ್ಕಳು ಹಾಳು: ಬಾರ್ ಅಂಗಡಿಗಳ ಲೈಸೆನ್ಸ್ ಕೊಡುವ ವೇಳೆಯಲ್ಲಿ ಅದ್ಯಾವ ಒತ್ತಡಕ್ಕೆ ಮಣಿದು ಅಧಿಕಾರಿಗಳು ಅನುಮತಿ ನೀಡಿದ್ದಾರೋ ಗೊತ್ತಿಲ್ಲ. ಆಸ್ಪತ್ರೆ, ಶಾಲೆ, ಸರ್ಕಾರಿ ಇಲಾಖೆ, ದೇವಸ್ಥಾನದ ಅಕ್ಕಪಕ್ಕಗಳಲ್ಲಿಯು ಮದ್ಯ ಮಾರಾಟದ ಅಂಗಡಿಗಳಿವೆ, ಇವೆಲ್ಲವೂ ಪ್ರತಿ ವರ್ಷ ಅಬಕಾರಿ ಇಲಾಖೆಗೆ ಸಲ್ಲಿಕೆಯಾಗುವ ಕಪ್ಪದಿಂದ ಲೈಸೆನ್ಸ್ ನವೀಕರಣವಾಗುತ್ತಿದ್ದು, ಹೈಸ್ಕೂಲ್, ಕಾಲೇಜಿಗೆ ಹೋಗುವ ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ಕೂಡಾ ತಾಲೂಕಿನಲ್ಲಿ ಮತ್ತು ಪಟ್ಟಣದಲ್ಲಿ ಕುಡಿತದ ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಮನೆಯಲ್ಲಿ ತಂದೆ, ತಾಯಿಗಳು ಗೋಳಿಟ್ಟು ಅಳುವಂತಾಗಿದೆ.ಕಿರಾಣಿ ಅಂಗಡಿಗಳಲ್ಲಿ ಸಾರಾಯಿ! ಕುಡಿಯಲು ಎಷ್ಟೇ ದುಬಾರಿ ಬೆಲೆಯ ಮದ್ಯ ಬೇಕೆಂದರೂ ಎಲ್ಲಿಯೂ ಹೋಗಬೇಕಾಗಿಲ್ಲ, ಬಾರ್ ಅಂಗಡಿಗಳಿಗೆ ತೆರಳಬೇಕಾಗಿಲ್ಲ, ತಾಲೂಕಿನ ಬಹುತೇಕ ಗ್ರಾಮಗಳ ಕಿರಾಣಿ, ಗೂಡಂಗಡಿಗಳು, ಹೋಟೆಲ್‌ಗಳಲ್ಲಿ ದೊರೆಯುತ್ತದೆ. ಅಂಗಡಿ ಮಾಲೀಕರು ಕಮೀಷನ್ ಆಧಾರದ ಮೇಲೆ ವಾರ, ತಿಂಗಳುಗಳ ಕಾಲ ಮಾರಾಟ ಮಾಡಿ ಬಾರ್‌ಗಳಿಗೆ ಹಣ ಕಟ್ಟಿದರೆ ಸಾಕು. ಉದ್ರಿ ನೆಪದಲ್ಲಿ ಕಿರಾಣಿ ಶಾಪ್ ಗಳನ್ನೆಲ್ಲ ಗ್ರಾಮೀಣ ಭಾಗದಲ್ಲಿ ಬಾರ್‌ಗಳನ್ನಾಗಿ ರೂಪಿಸಿರುವ ಕೀರ್ತಿ, ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಲ್ಲುತ್ತದೆ.
ಚುನಾವಣೆ ಕಾರ್ಯ ಮುಗಿಸಿಕೊಂಡು ಈದೀಗ ಬಂದಿದ್ದೇನೆ. ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಪತ್ರಿಕೆಗಳಿಗೆ ಹೇಳಿಕೆ ಕೊಡುವ ಅಧಿಕಾರ ನನಗಿಲ್ಲ. ಜಿಲ್ಲಾ ಹಂತದ ಅಧಿಕಾರಿಗಳು ಇದೆಲ್ಲವನ್ನು ಗಮನಿಸುತ್ತಾರೆ. ಈ ತರದ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಶಿರಹಟ್ಟಿ ಅಬಕಾರಿ ಅಧಿಕಾರಿ ಸಂತೋಷ ರಡ್ಡೇರ ತಿಳಿಸಿದ್ದಾರೆ.