ಮೋವಾಡಿ ದಲಿತ‌ ಕಾಲನಿ ರಸ್ತೆ ಪರಿಶೀಲಿಸಿದ ಅಧಿಕಾರಿಗಳು

KannadaprabhaNewsNetwork | Published : Aug 17, 2024 12:50 AM

ಸಾರಾಂಶ

ಮೋವಾಡಿ ದಲಿತ‌ ಕಾಲನಿಯ ಹದಗೆಟ್ಟ ರಸ್ತೆಯ ಕುರಿತು ಕನ್ನಡಪ್ರಭ ಆ.14ರಂದು ‘ನಾಲ್ಕೇ ತಿಂಗಳಲ್ಲಿ ಕಳಪೆ ಕಾಮಗಾರಿ ಬಯಲು’! ಎನ್ನುವ ಶೀರ್ಷಿಕೆಯಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ‌ ಸೆಳೆದಿತ್ತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಕಾಮಗಾರಿ ಮಾಡಿದ ನಾಲ್ಕೇ ತಿಂಗಳಲ್ಲಿ ಕಿತ್ತು ಹೋದ ಮೋವಾಡಿ ದಲಿತ ಕಾಲನಿ ರಸ್ತೆ ಪರಿಶೀಲನೆಗೆ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ, ನಿರ್ಮೀತಿ ಕೇಂದ್ರದ ಅಧಿಕಾರಿಗಳು ಆಗಮಿಸಿ ದಲಿತ‌ ನಿವಾಸಿಗಳ ಅಹವಾಲು ಆಲಿಸಿದ್ದಾರೆ.ಮೋವಾಡಿ ದಲಿತ‌ ಕಾಲನಿಯ ಹದಗೆಟ್ಟ ರಸ್ತೆಯ ಕುರಿತು ಕನ್ನಡಪ್ರಭ ಆ.14ರಂದು ‘ನಾಲ್ಕೇ ತಿಂಗಳಲ್ಲಿ ಕಳಪೆ ಕಾಮಗಾರಿ ಬಯಲು’! ಎನ್ನುವ ಶೀರ್ಷಿಕೆಯಡಿಯಲ್ಲಿ ವಿಸ್ತೃತ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ‌ ಸೆಳೆದಿತ್ತು.ಕನ್ನಡಪ್ರಭ ವರದಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ವರ್ಣೇಕರ್, ಉಡುಪಿ ನಿರ್ಮಿತಿ ಕೇಂದ್ರದ ಪ್ರಭಾರ ಯೋಜನಾ ನಿರ್ದೇಶಕ ದಿವಾಕರ್ ಶುಕ್ರವಾರ ತ್ರಾಸಿ ಗ್ರಾ.ಪಂ. ವ್ಯಾಪ್ತಿಯ ಮೋವಾಡಿ ದಲಿತ ಕಾಲನಿಗೆ ಭೇಟಿ ನೀಡಿ ಹದಗೆಟ್ಟ ಕಾಂಕ್ರೀಟ್ ರಸ್ತೆಯ ಪರಿಶೀಲನೆ‌ ನಡೆಸಿದ್ದಾರೆ. ಸಮಾಜ‌ಕಲ್ಯಾಣ ಇಲಾಖೆಯಿಂದ‌ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ 261 ಮೀ. ಉದ್ದದ ಕಾಂಕ್ರೀಟ್ ರಸ್ತೆಯ ಒಂದು ಭಾಗದಲ್ಲಿ ಜಲ್ಲಿ ಕಲ್ಲುಗಳೆಲ್ಲಾ ಮೇಲೆದ್ದು ಬಂದು ಹೊಂಡ ಸೃಷ್ಟಿಯಾಗಿದೆ. ಕಲ್ಲುಕುಟ್ಟಿಗ ದೈವಸ್ಥಾನದ ಎದುರಿನ 15 ಮೀಟರ್‌ನಷ್ಟು ಹದಗೆಟ್ಟ ರಸ್ತೆಯನ್ನು ಸಂಪೂರ್ಣವಾಗಿ ಕಿತ್ತು ಮತ್ತೆ ಹೊಸದಾಗಿ ಶೀಘವೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜೊತೆಗೆ ಸೋಮವಾರವೇ ಕಾಮಗಾರಿ ಆರಂಭಿಸಿ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಲು ತಾಕೀತು ಮಾಡಿದ್ದಾರೆ.

-------ಕನ್ನಡಪ್ರಭ ಕಳಕಳಿಗೆ ಶ್ಲಾಘನೆಒಂದೇ ಮಳೆಗಾಲಕ್ಕೆ‌ ಹದಗೆಟ್ಟ ರಸ್ತೆಯ ಬಗ್ಗೆ ಮೋವಾಡಿಯ ದಲಿತ‌ ನಿವಾಸಿಗಳು ಸಂಬಂಧಪಟ್ಟ ಜನಪ್ರತಿನಿಧಿಗಳು, ಸ್ಥಳೀಯಾಡಳಿತದ ಗಮನಕ್ಕೆ‌ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪತ್ರಿಕೆ ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ‌ ಮಾಡಿದ್ದು, ಕನ್ನಡಪ್ರಭ ಪತ್ರಿಕೆಯ ಸಾಮಾಜಿಕ ಕಳಕಳಿಗೆ ಇದೀಗ ಸರ್ವತ್ರ ಶ್ಲಾಘನೆ ವ್ಯಕ್ತವಾಗುತ್ತಿದೆ.-------ಉಪಗುತ್ತಿಗೆದಾರನ ವಿರುದ್ಧ ರೇಗಾಡಿದ ದಲಿತರು!ಅಧಿಕಾರಿಗಳ ಪರಿಶೀಲನೆಯ ವೇಳೆ ಸ್ಥಳಕ್ಕೆ ಆಗಮಿಸಿದ ಉಪಗುತ್ತಿಗೆದಾರನ‌ನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ‌ ದಲಿತರು, ಕುಂದಾಪುರ-ಬೈಂದೂರು ಕ್ಷೇತ್ರದಲ್ಲಿ‌ ಈ ವ್ಯಕ್ತಿಯ ನೇತೃತ್ವದಲ್ಲಿ‌ ನಡೆದ ಎಲ್ಲ ಕಾಮಗಾರಿಗಳನ್ನು ಸರ್ಕಾರದ ತನಿಖಾ‌ ಏಜೆನ್ಸಿಯ‌ ಮೂಲಕ‌ ತನಿಖೆಗೆ ಒಳಪಡಿಸಿಬೇಕೆಂದು ಆಗ್ರಹಿಸಿದ ಪ್ರಸಂಗವೂ ನಡೆಯಿತು.

-----ಸುಮಾರು 20 ಮೀಟರ್‌ನಷ್ಟು ಉದ್ದದ ರಸ್ತೆಯ ಜಲ್ಲಿಕಲ್ಲುಗಳು ಮೇಲೆದ್ದು ಹಾಳಾಗಿ ಹೋಗಿದೆ. ಧಾರಕಾರವಾಗಿ ಸುರಿದ ಮಳೆಯಿಂದಾಗಿ ರಸ್ತೆ ಹಾಳಾಗಿದೆ ಎಂದು ತಿಳಿಸಿದ್ದಾರೆ. ಹದಗೆಟ್ಟ ರಸ್ತೆಗೆ ತೇಪೆ ಹಾಕಲು ಸಾಧ್ಯವಿಲ್ಲ. ಆದಷ್ಟು ಬೇಗ 20 ಮೀಟರ್ ರಸ್ತೆಯನ್ನು ಸಂಪೂರ್ಣ ಸರಿಪಡಿಸಿ ಜನರಿಗೆ ಓಡಾಡಲು ಅನುಕೂಲ‌ ಮಾಡಿಕೊಡಲು ಸೂಚಿಸಿದ್ದೇನೆ. ಈ ವಿಚಾರವನ್ನು ಇಲಾಖೆಯ ಗಮನಕ್ಕೆ‌ ತಂದ ಕನ್ನಡಪ್ರಭ ಪತ್ರಿಕೆಗೆ ಧನ್ಯವಾದಗಳು.। ರಾಘವೇಂದ್ರ‌ ವರ್ಣೇಕರ್, ಸಹಾಯಕ ನಿರ್ದೇಶಕ ಸಮಾಜಕಲ್ಯಾಣ ಇಲಾಖೆ

-------------

ಶುಕ್ರವಾರ ಎಂಜಿನಿಯರ್ ಜೊತೆ ತೆರಳಿ ಮೋವಾಡಿ ದಲಿತ ಕಾಲನಿ ರಸ್ತೆಯನ್ನು ಪರಿಶೀಲನೆ ನಡೆಸಿದ್ದೇನೆ. ಸೋಮವಾರವೇ ಕೆಲಸ ಆರಂಭಿಸಿ ಹದಗೆಟ್ಟ 20 ಮೀಟರ್‌ನಷ್ಟು ಉದ್ದದ ರಸ್ತೆಯನ್ನು ಅಗೆದು ಮತ್ತೆ ಹೊಸದಾಗಿ‌ ಕಾಂಕ್ರೀಟಿಕರಣ‌ಗೊಳಿಸಿ ಸ್ಥಳೀಯ ಜನರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.

। ದಿವಾಕರ್, ಪ್ರಭಾರ ಯೋಜನಾ ನಿರ್ದೇಶಕ ನಿರ್ಮೀತಿ ಕೇಂದ್ರ ಉಡುಪಿ

Share this article