ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಭರವಸೆ । ತ್ರೈ ಮಾಸಿಕ ಕೆಡಿಪಿ ಸಭೆ । ಒಂದೂವರೆ ತಾಸು ಗಂಭೀರ ಚರ್ಚೆ
ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ದಿನೆ ದಿನೇ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅರಣ್ಯ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಚರ್ಚಿಸಿ ಸೂಕ್ತವಾದ ನಿರ್ಣಯತೆಗೆದುಕೊಳ್ಳಲಾಗುವುದು ಎಂದು ರಾಜ್ಯದ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಿಗೆ ಅನ್ವಯವಾಗುವಂತೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.ಸಭೆ ಆರಂಭದಲ್ಲಿ ಅನುಪಾಲನಾ ವರದಿ ಆಧಾರದ ಮೇಲೆ ಸಭೆ ನಡೆಸಲು ಕೆಲವು ಶಾಸಕರು ಸಲಹೆ ನೀಡಿದರು. ಆದರೆ, ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಕಾಡಾನೆಗಳ ಉಪಟಳದ ನಿಯಂತ್ರಣದ ಬಗ್ಗೆ ಚರ್ಚೆಯಾಗಬೇಕು ಎಂದು ಮನವಿ ಮಾಡಿದರು.
ವಿಷಯವಾಗಿ ಉತ್ತರಿಸಿದ ಚಿಕ್ಕಮಗಳೂರು ಡಿಎಫ್‌ಒ ರಮೇಶ್ ಬಾಬು, ಚಿಕ್ಕಮಗಳೂರು ವಲಯದಲ್ಲಿ 35, ಕೊಪ್ಪ ವಲಯ ದಲ್ಲಿ 125, ಭದ್ರಾ ವನ್ಯಜೀವಿ ವಿಭಾಗದಲ್ಲಿ 400 ಕಾಡಾನೆಗಳು ಇವೆ. ಕಳೆದ 2-3 ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮೂಡಿಗೆರೆ ತಾಲೂಕಿಗೆ ಕಾಡಾನೆಗಳು ಹಿಂಡು ಹಿಂಡಾಗಿ ಬರುತ್ತಿವೆ. ಈ ಹಿಂದೆ ಒಂದೆರಡು ಗುಂಪಾಗಿದ್ದ ಆನೆಗಳು ಇದೀಗ ನಾಲ್ಕೈದು ಆಗಿವೆ. ಅವುಗಳ ಚಲನವಲನದ ಮೇಲೆ ನಿಗಾ ಇಡಲು ಕೆಲವು ಆನೆಗಳಿಗೆ ಕಾಲರ್ ಐಡಿ ಹಾಕಲಾಗಿದೆ ಎಂದು ಹೇಳಿದರು.
ಕಾಡಿನಲ್ಲಿ ನೀಲಗಿರಿ, ಅಕೇಶಿಯಾ ಮರಗಳನ್ನು ಬೆಳೆಸುವುದು ನಮ್ಮ ಸರ್ಕಾರ ಜಾರಿಗೆ ತಂದಿರುವ ಪಾಲಿಸಿ ಅಲ್ಲ, ಇದು, ಅನೇಕ ವರ್ಷಗಳಿಂದ ರೂಪಿಸಿಕೊಂಡು ಬರಲಾಗುತ್ತಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದಾಗ, ಆನೆಗಳ ನಿಯಂತ್ರಣಕ್ಕೆ ತಕ್ಷಣಕ್ಕೆ ಹಾಗೂ ಕೆಲವು ವರ್ಷಗಳಲ್ಲಿ ಜಾರಿಗೆ ಬರುವ ಪರಿಹಾರ ಕಂಡುಕೊಳ್ಳಬೇಕೆಂದು ಸಿ.ಟಿ. ರವಿ ಸಲಹೆ ನೀಡಿದರು.
ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಹಿರಿಯ ಅಧಿಕಾರಿಗಳ ಹಾಗೂ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಸಲಹೆ ನೀಡಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆದ ಬಳಿಕ ಸಚಿವ ಕೆ.ಜೆ. ಜಾರ್ಜ್ ಹಲವು ಸಲಹೆಗಳನ್ನು ಆಲಿಸಿ ಬೆಂಗಳೂರಿನಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
-- ಬಾಕ್ಸ್ --ತಮ್ಮಯ್ಯ- ಸಿ.ಟಿ. ರವಿ ವಾಕ್ ವಾರ್‌ಕಳೆದ 2024ರ ಜುಲೈ 12 ರಂದು ಕೆಡಿಪಿ ಸಭೆ ಮಾಡಲಾಗಿದೆ. 10 ತಿಂಗಳ ಬಳಿಕ ಸಭೆ ಕರೆಯಲಾಗಿದೆ. ಇದಕ್ಕೆ ತ್ರೈಮಾಸಿಕ ಅರ್ಥವೇ ಬರುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ವೇದಿಕೆಯಲ್ಲಿ ಕುಳಿತವರು ರೂಲಿಂಗ್ ಕೊಟ್ಟರೆ ನಾನು ಈ ಸಭೆಯಲ್ಲಿ ಇರೋದಿಲ್ಲ, ಅಧ್ಯಕ್ಷರೇ ನೀವೇ ಉತ್ತರ ಕೊಡಬೇಕು. ಮಧ್ಯ ಮಾತನಾಡುವವರು ಸಹ ಅಧ್ಯಕ್ಷರೇ ಎಂದು ಸಿ.ಟಿ. ರವಿ ಹೇಳಿದಾಗ, ದಿಶಾ ಮಿಟಿಂಗ್ ಆಗುವಾಗ ಇದೇ ವೇದಿಕೆ ಯಲ್ಲಿ ಕುಳಿತು ಅವರು (ಸಿ.ಟಿ. ರವಿ) ರೂಲಿಂಗ್ ಕೊಟ್ಟಿಲ್ವಾ ಎಂದು ತಮ್ಮಯ್ಯ ಪ್ರಶ್ನಿಸಿದರು.
--ಅಮೃತ್ ಮಹಲ್ ಕಾವಲ್‌ಜಿಲ್ಲೆಯಲ್ಲಿ 16,370 ಎಕರೆ ಪ್ರದೇಶದಲ್ಲಿ ಅಮೃತ್ ಮಹಲ್ ಕಾವಲ್ ಇದ್ದು, ಈ ಪೈಕಿ 4599 ಎಕರೆ ಪ್ರದೇಶ ಒತ್ತುವರಿ ಯಾಗಿದೆ. ಇದರಲ್ಲಿ 171 ಎಕರೆ ತೆರವು ಮಾಡಲಾಗಿದೆ. ಇನ್ನು 4406 ಎಕರೆ ಒತ್ತುವರಿ ತೆರವುಗೊಳಿಸಬೇಕಾಗಿದೆ ಎಂದು ಅಮೃತ್ ಮಹಲ್ ಕಾವಲ್‌ನ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು. ಒತ್ತುವರಿ ಗುರುತು ಮಾಡಿ ಕೊಡಲೇ ತೆರವುಗೊಳಿ ಸಬೇಕು. ಆ ಸ್ಥಳದಲ್ಲಿ ಸುತ್ತಲೂ ಮತ್ತೆ ಒತ್ತುವರಿಯಾಗದಂತೆ ಟ್ರಂಚ್ ಹೊಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸರ್ವೆ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.--
17 ಕೆಸಿಕೆಎಂ 2ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಶನಿವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.