ಯಲ್ಲಾಪುರ:
ಕಳೆದ ೮ ತಿಂಗಳಿಂದ ಪಟ್ಟಣದಲ್ಲಿ ತಹಸೀಲ್ದಾರ್ ಅವರು ಆಡಳಿತಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಅಧಿಕಾರಿಗಳು ಸದಸ್ಯರೊಂದಿಗೆ ಸಭೆ ನಡೆಸುತ್ತಿಲ್ಲ. ಮುಖ್ಯಾಧಿಕಾರಿ ಮತ್ತು ಅಭಿಯಂತರರು ಸದಸ್ಯರ ಮಾತಿಗೆ ಸ್ಪಂದಿಸದೆ ಅಗೌರವ ತೋರುತ್ತಿದ್ದಾರೆಂದು ಸದಸ್ಯ ಸೋಮೇಶ್ವರ ನಾಯ್ಕ ಆರೋಪಿಸಿದರು.ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಪಪಂ ಆಡಳಿತವನ್ನು ಸ್ವಂತ ಆಸ್ತಿಯಂತೆ ಭಾವಿಸಿದ್ದಾರೆ. ಕ್ರಿಯಾಯೋಜನೆ ಮಾಡಿರುವ ಕಾಮಗಾರಿಗಳೂ ಅನುಷ್ಠಾನಗೊಳ್ಳುತ್ತಿಲ್ಲ. ಒಟ್ಟಾರೆ ಪಟ್ಟಣ ವಿವಿಧ ಪ್ರದೇಶಗಳಲ್ಲಿ ರಸ್ತೆ, ನೀರು ಸೇರಿದಂತೆ ಅನೇಕ ಮೂಲ ಸೌಲಭ್ಯಗಳ ಕಾಮಗಾರಿ ನಡೆಯದಿರಲು ರಾಜಕೀಯ ಒತ್ತಡವೇ ಕಾರಣವೇನೋ ಎಂಬಂತೆ ಭಾಸವಾಗುತ್ತಿದೆ ಎಂದು ದೂರಿದರು.ಲಿಂಗ್ಯಾನಕೊಪ್ಪದಲ್ಲಿ ಒಂದೇ ಮನೆ ಇರುವ ಪ್ರದೇಶದಲ್ಲಿ ಅಗತ್ಯವಿಲ್ಲದಿದ್ದರೂ ₹ ೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದ್ದು, ರವೀಂದ್ರ ನಗರದಲ್ಲಿ ನಗರೋತ್ಥಾನ ಯೋಜನೆಯಡಿ ₹ ೨೦ ಲಕ್ಷ ವೆಚ್ಚದ ಸಿಸಿ ರಸ್ತೆ, ಅಂಬೇಡ್ಕರ್ ನಗರದಲ್ಲಿ ₹ ೧೫ ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯಾದರೂ ಕಾಮಗಾರಿ ಆರಂಭಗೊಂಡಿಲ್ಲ. ವೆಂಕಟರಮಣ ಮಠದ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಅನುಪಯುಕ್ತವಾಗಿದೆ ಎಂದು ಟೀಕಿಸಿದರು.ಪಟ್ಟಣದ ಹಿಂದೂ ರುದ್ರಭೂಮಿಯ ಶವಾಗಾರದಲ್ಲಿ ಸ್ವಚ್ಛತೆಯಿಲ್ಲದೇ ತೀವ್ರ ಅವ್ಯವಸ್ಥೆಯುಂಟಾಗಿದೆ. ಈ ಕುರಿತು ಮುಖ್ಯಾಧಿಕಾರಿ ಪ್ರಶ್ನಿಸಿದರೆ ಸೌಜನ್ಯದಿಂದ ಉತ್ತರಿಸುತ್ತಿಲ್ಲ. ಪಟ್ಟಣದಲ್ಲಿ ಅಳವಡಿಸಲಾದ ಅಲಂಕಾರಿಕ ಬೀದಿದೀಪಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳು ಸ್ವಷ್ಟನೆ ನೀಡಬೇಕೆಂದು ಆಗ್ರಹಿಸಿದರು.ಪ್ರೇಮದ ನಕ್ಷತ್ರ ವಿದ್ಯಾರ್ಥಿ ನಿಲಯದ ನೀರಿನ ಪೂರೈಕೆಗಾಗಿ ವ್ಯವಸ್ಥಾಪಕರು ನೀಡಿದ್ದರೆನ್ನಲಾದ ಮನವಿಯನ್ನು ಈ ವರೆಗೂ ಗಂಭೀರವಾಗಿ ಅಧಿಕಾರಿಗಳು ಗಮನಿಸದೆ ಇರುವುದು ಇವರ ದುರಾಡಳಿತಕ್ಕೆ ಉದಾಹರಣೆಯಾಗಿದೆ. ಅಲ್ಲದೇ ಶಿರಸಿ ರಸ್ತೆಯ ಶಕ್ತಿಗಣಪತಿ ದೇವಸ್ಥಾನದ ಸಮೀಪದ ಸಾರ್ವಜನಿಕರೂ ನೀರಿಗಾಗಿ ನೀಡಿದ ಅರ್ಜಿಗೆ ಅಧಿಕಾರಿಗಳು ಸ್ಪಂದಿಸಿಲ್ಲ. ಪಟ್ಟಣದಲ್ಲಿ ಕಸ ಸಂಗ್ರಹಿಸಲು ₹ ೬.೨ ಲಕ್ಷ ವೆಚ್ಚದಲ್ಲಿ ಅಳವಡಿಸಲಾಗಿದ್ದ ೩೫ ಸ್ಟೀಲಿನ್ ತೊಟ್ಟಿಗಳು ಕಣ್ಮರೆಯಾಗಿವೆ. ಮೀನು ಮಾರುಕಟ್ಟೆ ನಿರ್ವಹಣೆ ಹದಗೆಟ್ಟಿದ್ದು, ೯ ತಿಂಗಳಿಂದ ಟೆಂಡರ್ ಕರೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಎಲ್ಲ ವಿವಿಧ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಸಮೀಕ್ಷೆ ನಡೆಸಿ, ತಪ್ಪಿದ್ದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸದಸ್ಯೆ ಕಲ್ಪನಾ ನಾಯ್ಕ ಮಾತನಾಡಿ, ತಮ್ಮ ವಾರ್ಡಿನಲ್ಲಿ ಟೆಂಡರ್ ಕರೆಯಲಾಗಿದ್ದ ರಸ್ತೆ ಕಾಮಗಾರಿಯನ್ನು ನಿಯಮ ಮೀರಿ ನಿರ್ಮಿಸಲಾಗಿದೆ. ಪಪಂ ೩೫ ಸಿಸಿ ಕ್ಯಾಮೆರಾ ಖರೀದಿಸಿದ್ದು ತಮ್ಮ ವಾರ್ಡಿನಲ್ಲಿ ಕ್ಯಾಮೆರಾ ಅಳವಡಿಸಿಲ್ಲ. ಪಪಂನಲ್ಲಿ ಇತ್ತೀಚೆಗೆ ಮಂಜೂರಾದ ಕ್ರಿಯಾಯೋಜನೆಯನ್ನೇ ಬದಲಿಸುತ್ತಿರುವ ಅನೇಕ ಉದಾಹರಣೆಗಳು ಕಂಡುಬರುತ್ತಿದ್ದು, ಸದಸ್ಯರ ಮಾತಿಗಂತೂ ಅಧಿಕಾರಿಗಳು ಕಿಂಚಿತ್ತೂ ಗೌರವ ಕೊಡುತ್ತಿಲ್ಲ ಎಂದು ಆಪಾದಿಸಿದರು.
ಸದಸ್ಯರಾದ ಆದಿತ್ಯ ಗುಡಿಗಾರ, ಪುಷ್ಟಾ ನಾಯ್ಕ, ಖೈಸರ್ ಸೈಯದ್ ಅಲಿ, ರಾಜು ನಾಯ್ಕ ಮುಂತಾದವರು ತಮ್ಮ ವಾರ್ಡಿನ ದುಃಸ್ಥಿತಿಯಲ್ಲಿ ತೆರೆದಿಟ್ಟರು.