ಅಧಿಕಾರಿಗಳು ರಾಜಕೀಯ ಮರ್ಜಿಗೆ ಒಳಗಾಗದೆ ಸೇವೆ ಸಲ್ಲಿಸಿ: ಗೊರುಚ

KannadaprabhaNewsNetwork | Updated : May 28 2024, 10:33 AM IST
Follow Us

ಸಾರಾಂಶ

ನಿವೃತ್ತ ಐಎಎಸ್‌ ಅಧಿಕಾರಿ ‘ಟಿ.ತಿಮ್ಮೇಗೌಡರ ಬಹುಮುಖಿ ಚಿಂತನೆಗಳು ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ.

 ಬೆಂಗಳೂರು :  ಅಧಿಕಾರಿಗಳು ರಾಜಕೀಯ ಮರ್ಜಿಗೆ ಒಳಗಾಗದೆ, ಅಧಿಕಾರವನ್ನು ಹೊಣೆಗಾರಿಕೆ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಿದಲ್ಲಿ ಮಾತ್ರ ಉತ್ತಮ ಸೇವೆ ಸಲ್ಲಿಸಬಹುದು ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.

ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ‘ಟಿ.ತಿಮ್ಮೇಗೌಡರ ಬಹುಮುಖಿ ಚಿಂತನೆಗಳು ಹಾಗೂ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಅಧಿಕಾರಿಗಳು ರಾಜಕೀಯ ಮರ್ಜಿಗೆ ಒಳಗಾಗುವುದನ್ನು ಕಾಣುತ್ತಿದ್ದೇವೆ. ಹೀಗಾದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಟಿ. ತಿಮ್ಮೇಗೌಡರು ಇಂತಹ ಮರ್ಜಿಗೆ ಒಳಗಾದವರಲ್ಲ. ಅಧಿಕಾರ ಎನ್ನುವುದು ಹೊಣೆಗಾರಿಕೆ. ಅದನ್ನು ಸಮರ್ಪಕವಾಗಿ ನಿಭಾಯಿಸಿದಲ್ಲಿ ಮಾತ್ರ ಜನಸಾಮಾನ್ಯರನ್ನು ತಲುಪಲು ಸಾಧ್ಯ. ನುಣುಚಿಕೊಂಡರೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಲ್ಲ ಎಂದು ಹೇಳಿದರು.

ಆಡಳಿತದಲ್ಲಿ ನೈತಿಕ ಪ್ರಜ್ಞೆ ಇಟ್ಟುಕೊಂಡು ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು ಎಂಬುದಕ್ಕೆ ತಿಮ್ಮೇಗೌಡರು ಮಾದರಿ. ಕೋಲಾರದಲ್ಲಿ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ಆದಾಗ ಆ ವ್ಯಾಪ್ತಿಯ ಜನ ಪ್ರತಿಭಟಿಸಿದ್ದನ್ನು, ವಿರೋಧಿಸಿದ್ದನ್ನು ಕಂಡಿದ್ದೇವೆ. ಅಧಿಕಾರನ್ನು ಎಂದಿಗೂ ಸ್ವ ಹಿತಕ್ಕಾಗಿ ಬಳಸಿಕೊಂಡವರಲ್ಲ ಎಂದು ಸ್ಮರಿಸಿದರು.

ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಹಿ.ಚೀ.ಬೋರಲಿಂಗಯ್ಯ, ಅನ್ಯ ರಾಜ್ಯದಿಂದ ಬಂದ ಐಎಎಸ್‌ ಅಧಿಕಾರಿಗಳು ಇಲ್ಲಿನ ನೆಲ, ಜಲ, ಸಂಸ್ಕೃತಿಗಳ ಬಗ್ಗೆ ಅರಿಯದೇ, ಪ್ರೀತಿ ಬೆಳೆಸಿಕೊಳ್ಳದೇ ಆಡಳಿತ ನಡೆಸುವುದು ದೌರ್ಭಾಗ್ಯ. ಹೀಗಾಗದೆ ನಮ್ಮ ರಾಜ್ಯದ ಅಧಿಕಾರಿಗಳೇ ಇಲ್ಲಿಗೆ ಬಂದಾಗ ಹೆಚ್ಚು ಬದ್ಧತೆಯಿಂದ ಕೆಲಸ ಮಾಡಿದ್ದನ್ನು ನೋಡಿದ್ದೇವೆ ಎಂದರು.

ಟಿ.ತಿಮ್ಮೇಗೌಡರು ನೆಲ ಮತ್ತು ಜಲದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದವರು. ಕಾವೇರಿ ನದಿ ನೀರು ಹಂಚಿಕೆ ಸೇರಿ ಇಡೀ ಸಮಸ್ಯೆಯನ್ನು ಅತ್ಯಂತ ತಲಸ್ಪರ್ಷಿಯಾಗಿ ಅಧ್ಯಯನ ಮಾಡಿ ತಿಳಿದುಕೊಂಡು ರಾಜ್ಯದ ಪರ ಅಧಿಕೃತವಾಗಿ ಮಾತನಾಡುವ ಪರಿಪೂರ್ಣ ಜ್ಞಾನವನ್ನು ಹೊಂದಿದ್ದಾರೆ. ಕಾವೇರಿ ನಿಗಮದ ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾಗಿ ಹೊಸ ಯೋಜನೆಗಳನ್ನು ತಂದರು. ತಲಕಾವೇರಿ ಕಣ್ವ ಜಲಾಶಯದ ವರೆಗೆ ಹಲವಾರು ಸಣ್ಣ ಅಣೆಕಟ್ಟು ನಿರ್ಮಿಸಿ ರೈತರ ಹಿತ ಕಾದಿದ್ದಾರೆ ಎಂದರು. ವೇದಿಕೆ ಅಧ್ಯಕ್ಷ ಜೀವನ್ಮುಖಿ ಸುರೇಶ್‌ ಇದ್ದರು. ಇದೇ ವೇಳೆ ಟಿ. ತಿಮ್ಮೇಗೌಡ ಅವರನ್ನು ಗೌರವಿಸಲಾಯಿತು.