ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಶುಕ್ರವಾರ ಮಾತನಾಡಿದರು. ಜಿಲ್ಲೆಯಲ್ಲಿ ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಜಿಲ್ಲೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಮತ್ತು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಪ್ರತಿಯೊಬ್ಬ ಭಾರತೀಯರಿಗೆ ಗಣರಾಜ್ಯೋತ್ಸವ ಅತ್ಯಂತ ಮಹತ್ವದ ದಿನ. ಬಲಿಷ್ಠ ರಾಷ್ಟ್ರ ನಿರ್ಮಾಣ ಮತ್ತು ಸದಾ ಕಾಲ ರಾಷ್ಟ್ರದ ಅಭಿವೃದ್ಧಿಗಾಗಿ ದೀಕ್ಷೆ ತೊಡುವ ದಿನ ಇದು. ಅಂಬೇಡ್ಕರ್ ದೇಶಕ್ಕೆ ನೀಡಿದ ಸಂವಿಧಾನ ಅರ್ಥೈಸಿಕೊಂಡು ಪ್ರತಿಯೊಬ್ಬರು ಅವರ ಆಶಯದಲ್ಲಿ ನಡೆಯಕು. ಅತಿದೊಡ್ಡ ಮತ್ತು ಅತ್ಯಂತ ವಿಶೇಷವಾದ ಪ್ರಜಾಪ್ರಭುತ್ವ ಹಾಗೂ ಸಮಾನತೆ ಸಾರುವ ದೇಶ ನಮ್ಮದು. ಇಂತಹ ದೇಶದ ರಕ್ಷಣೆ, ಸಂಸ್ಕೃತಿ ಎತ್ತಿ ಹಿಡಿಯಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬ ಭಾರತೀಯನು ಶ್ರಮಿಸಬೇಕು ಎಂದು ಹೇಳಿದರು.ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ದೇವರು. ಪ್ರಜೆಗಳಿಗೆ ಎಲ್ಲ ಸೌಲಭ್ಯ ಒದಗಿಸುವುದು ಆಯಾ ರಾಜ್ಯ ಸರ್ಕಾರಗಳ ಕರ್ತವ್ಯ ಮತ್ತು ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆ ಮತ್ತು ಸವಲತ್ತು ಮುಟ್ಟಿಸಲಾಗುತ್ತಿದೆ. ಸರ್ಕಾರದ ಬೊಕ್ಕಸದ ಸಿಂಹಪಾಲನ್ನು ರಾಜ್ಯದ ಬಡವರಿಗಾಗಿ ಮೀಸಲಿರಿಸಲಾಗುತ್ತಿದೆ ಎಂದರು.
ಸಂವಿಧಾನ ಜಾಗೃತಿ ಜಾಥಕ್ಕೆ ಚಾಲನೆ:
ಕಾರ್ಯಕ್ರಮದ ಮೂಲ ಆಶಯದಂತೆ ರಾಯಚೂರು ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಅಶ್ರಯದಲ್ಲಿ ಜ.26 ರಿಂದ ಫೆ.22ರವರೆಗೆ ಒಟ್ಟು 28 ದಿನ ಇಡೀ ಜಿಲ್ಲೆಯಾದ್ಯಂತ 179 ಗ್ರಾಪಂ ಮತ್ತು 13 ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಜಾಥಾ(ಎಲ್‌ಇಡಿ ಪರದೆಯುಳ್ಳ ಟ್ಯಾಬ್ಲೋ) ಸ್ತಬ್ಧಚಿತ್ರ ವಾಹನದೊಂದಿಗೆ ಸಂಚರಿಸಲಿದೆ.