ಹಾವೇರಿ: ಅಧಿಕಾರಿಗಳು ಒತ್ತಡಕ್ಕೆ ಮಣಿದು ಯಾವುದೇ ಕಾನೂನು ಬಾಹಿರ ತೀರ್ಮಾನಗಳನ್ನು ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಶಿಗ್ಗಾಂವಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ, ಶಿಗ್ಗಾಂವಿ ವಿಧಾನಸಭಾ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಅವರು ಮಾತನಾಡಿದರು. ನಾನು ದೆಹಲಿಯಲ್ಲಿಯೇ ಇರಲಿ, ಹಾವೇರಿಯಲ್ಲಿರಲಿ, ಎಲ್ಲಿಯೇ ಇದ್ದರೂ ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿಯ ಮೇಲೆ ಒಂದು ಕಣ್ಣು ಮತ್ತು ಕಳಕಳಿ ಇದ್ದೇ ಇರುತ್ತದೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ, ನಾನೇ ಹೇಳಲಿ ಇನ್ನಾರೋ ಒತ್ತಡ ಹೇರಿದರೂ ಕಾನೂನು ಮೀರಿ ಕೆಲಸ ಮಾಡಬೇಡಿ, ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ಯಾವಾಗಲೂ ರಕ್ಷಣೆ ಕೊಡುವ ಕೆಲಸ ನಾನು ಮಾಡುತ್ತೇನೆ ಎಂದರು.ಶಿಗ್ಗಾಂವಿ ಸವಣೂರು ಮಾದರಿ ಕ್ಷೇತ್ರ ಮಾಡುವುದು ನಮ್ಮ ಕನಸು, ಕಳೆದ ಹದಿನೈದು ವರ್ಷದ ಹಿಂದೆ ಈ ಕ್ಷೇತ್ರದಲ್ಲಿ ಸರಿಯಾದ ರಸ್ತೆ ಇರಲಿಲ್ಲ. ಕುಡಿಯಲು ನೀರು ಸಿಗುತ್ತಿರಲಿಲ್ಲ. ಹದಿನೈದು ವರ್ಷದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಿದೆ ಎಂದು ಹೇಳಿದರು.ಬಡವರು, ಮಹಿಳೆಯರು, ಅಸಹಾಯಕರು, ಸರ್ಕಾರದ ಯೋಜನೆಯ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಿ, ಅವರಿಗೆ ಸಾಧ್ಯವಾದಷ್ಟು ಕಾನೂನಿನ ಮಿತಿಯಲ್ಲಿ ಸಹಾಯ ಮಾಡುವ ಕೆಲಸ ಮಾಡಿ, ಎಲ್ಲರಿಗೂ ಕಾನೂನು ಗೊತ್ತಿದೆ. ಆದರೆ, ಒಂದು ಕೆಲಸವನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಟ್ಟು ತಿರಸ್ಕಾರ ಮಾಡುವುದು, ಮತ್ತೊಂದು ಕಾನೂನು ವ್ಯಾಪ್ತಿಗೆ ತಂದು ಕೆಲಸ ಮಾಡುವುದು. ನಮ್ಮ ಕ್ಷೇತ್ರದಲ್ಲಿ ಮಾನವೀಯ ನೆಲೆಯಲ್ಲಿ ಕಾನೂನು ವ್ಯಾಪ್ತಿಗೆ ತಂದು ಕೆಲಸ ಮಾಡಿಕೊಡುವ ವ್ಯವಸ್ಥೆ ಇದೆ ಎಂದು ಹೇಳಿದರು.ಹದಿನೈದು ವರ್ಷಗಳ ಹಿಂದೆ ಸವಣೂರಿನಲ್ಲಿ ಸಾಕಷ್ಟು ಕೋಮು ಗಲಭೆಗಳು ನಡೆಯುತ್ತಿದ್ದವು, ಹದಿನೈದು ವರ್ಷದಲ್ಲಿ ಯಾವುದೇ ಕೋಮುಗಲಭೆಗಳು ನಡೆಯದಂತೆ ಕಾಪಾಡಿಕೊಂಡು ಬರಲಾಗಿದೆ. ಹದಿನೈದು ವರ್ಷದ ಹಿಂದೆ ಇಲ್ಲಿ ಕೆಲಸ ಮಾಡಲು ಪೊಲೀಸರು ಬರುತ್ತಿರಲಿಲ್ಲ. ಯಾವಾಗ ಯಾರ ಮೇಲೆ ಕಲ್ಲು ಬೀಳುತ್ತದೆ ಎಂಬ ಭಯ ಇತ್ತು. ಎಲ್ಲವೂ ಶಾಂತವಾಗಿದೆ. ಕ್ಷೇತ್ರ ಅಭಿವೃದ್ಧಿ ಆಗಿದೆ. ನೀರಿಗಾಗಿ ರೈತರ ಹೋರಾಟಗಳು ನಡೆಯುತ್ತಿದ್ದವು, ಸರಿಯಾಗಿ ಕೆಲಸ ಮಾಡಲು ಸರ್ಕಾರಿ ಕಚೇರಿಗಳು ಇರಲಿಲ್ಲ. ಈಗ ಸುಸಜ್ಜಿತ ಕಚೇರಿಗಳಾಗಿವೆ. ನೀವು ಈಗ ಸುಗಮವಾಗಿ ಆಡಳಿತ ನಡೆಸುವ ಸ್ಥಿತಿಯಲ್ಲಿದ್ದೀರಿ. ಇದನ್ನು ಗಮನದಲ್ಲಿಟ್ಟುಕೊಂಡ ಕೆಲಸ ಮಾಡಬೇಕು. ಶಿಗ್ಗಾಂವಿ ಹಿಂದುಳಿದ ತಾಲೂಕಿನಿಂದ ಪ್ರಗತಿದಾಯಕ ತಾಲೂಕು ಆಗಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿದ ತಾಲೂಕು ಮಾಡಲು ನಿಮ್ಮ ಸಹಕಾರ ಅಗತ್ಯ ಎಂದು ಹೇಳಿದರು.ಅಭಿವೃದ್ಧಿಗೆ ಹಿನ್ನಡೆಯಾಗಬಾರದುಕಳೆದ ಏಳೆಂಟು ತಿಂಗಳಿಂದ ಶಿಗ್ಗಾಂವಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ನಮ್ಮ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ ಹಣ ಬಿಡುಗಡೆಯಾಗಿದ್ದು, ಅಂತಹ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ನಿಮ್ಮ ಇಲಾಖೆಗಳಲ್ಲಿ ಎಷ್ಟು ಯೋಜನೆ ಗುರಿ ಹಾಕಿಕೊಳ್ಳಲಾಗಿತ್ತು, ಎಷ್ಟು ಪ್ರಗತಿ ಸಾಧಿಸಲಾಗಿದೆ. ಎಷ್ಟು ಸಾಧಿಸಬೇಕಿದೆ ಎನ್ನುವುದನ್ನು ಪರಾಮರ್ಶಿಸಿಕೊಳ್ಳಿ, ಸಂಪೂರ್ಣ ಗುರಿ ತಲುಪಲು ನಿಮ್ಮ ಕಾರ್ಯವೈಖರಿ ಹೇಗೆ ಬದಲಾಯಿಕೊಳ್ಳುತ್ತೀರಿ ಎನ್ನುವುದನ್ನು ನಿರ್ಧರಿಸಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ರಾಜ್ಯ ಸರ್ಕಾರ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಎಲ್ಲರಿಗೂ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿಗಳು ಎಷ್ಟು ಜನರಿಗೆ ತಲುಪಿವೆ. ಎಷ್ಟು ಕಾರ್ಯ ನಿರ್ವಹಿಸುತ್ತಿವೆ ಎನ್ನುವುದನ್ನು ಪರಿಶೀಲಿಸುವಂತೆ ಸೂಚಿಸಿದರು.ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಹಣ ಬಿಡುಗಡೆಯಾಗಿಲ್ಲ. ಅನುದಾನ ಬರುವ ನಿರೀಕ್ಷೆಯೂ ಇಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.ಪೊಲಿಸ್ ಅಧಿಕಾರಿಗಳಿಗೆ ಎಚ್ಚರಿಕೆ-ಸಭೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳು, ಜನ ಸಾಮಾನ್ಯರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ರಾಜಕಾರಣಿಗಳ ಸೂಚನೆಯಂತೆ ನಡೆದುಕೊಳ್ಳುತ್ತಿರುವ ಆರೋಪ ಇದ್ದು, ಜನ ಸಾಮಾನ್ಯರಿಗೆ ಅನ್ಯಾಯವಾದರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳು ಯಾವುದೇ ರಾಜಕಾರಣಿಗಳ ಹಿಂಬಾಲಕರಾಗದೇ ಕಾನೂನು ಪ್ರಕಾರ ಕೆಲಸ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಮೊಹ್ಮದ ಖೀಜರ್, ತಹಸೀಲ್ದಾರ ಸಂತೋಷ ಹಿರೇಮಠ, ಭರತ, ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ ಹಾಗೂ ನವೀನ ಪ್ರಸಾದ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಯ ಪೂರ್ವದಲ್ಲಿ ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಲಾಯಿತು.