ಹಳಿಯಾಳ: ಪುರಸಭೆಗೆ ಸಾಕಷ್ಟು ಅನುದಾನವನ್ನು ತಂದರೂ ಅವುಗಳ ಸರಿಯಾಗಿ ನಡೆಯದಿದ್ದರೆ ಪ್ರಯೋಜನವೇನು? ಮಹಾನಗರಗಳಲ್ಲಿರುವಂಥ ದೊಡ್ಡ ಗಾತ್ರದ ಕಚೇರಿ ಕಟ್ಟಡಗಳು, ಪುರಭವನಗಳ ನಿರ್ವಹಣೆಯನ್ನು ಪುರಸಭೆಯವರು ಮಾಡುತ್ತಿಲ್ಲ. ನಮ್ಮ ಮನೆಯ ಬಗ್ಗೆ ತೋರುವ ಕಾಳಜಿ, ಆಸಕ್ತಿಯನ್ನು ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೊಂದಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಸೂಚಿಸಿದರು.
ಶನಿವಾರ ಸಂಜೆ ಪುರಸಭೆಯಿಂದ ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಾಣಿಜ್ಯ ಮಳಿಗೆ ಉದ್ಘಾಟನೆ ಹಾಗೂ ₹99.80 ಲಕ್ಷ ವೆಚ್ಚದಲ್ಲಿ ಮುಂದುವರಿಸಲಾದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಜನಪ್ರತಿನಿಧಿಗಳು ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಗೆದ್ದ ನಂತರ ಅವರಿಗೆ ಅಭಿವೃದ್ಧಿ ಮೂಲಮಂತ್ರವಾಗಿರಬೇಕು. ಸಮಾಜ, ಮತದಾರರು ನೆನಪಿಸುವಂಥ ಕೆಲಸವನ್ನು ಮಾಡಬೇಕು. ಇದನ್ನು ನಾನು ಹಿರಿಯ ಶಾಸಕನಾಗಿ ನನ್ನ ಅನುಭವದಿಂದ ಹೇಳುತ್ತಿದ್ದೇನೆ ಎಂದರು.ಹಳಿಯಾಳನ್ನು ಸುಂದರ, ಆದರ್ಶ ಪಟ್ಟಣವನ್ನಾಗಿಸುವ ಕನಸು ನನ್ನದಾಗಿದೆ. ಪಟ್ಟಣಕ್ಕೆ ಪ್ರವೇಶಿಸುವ ಮಾರ್ಗಗಳು ಅತಿಕ್ರಮಣವಾಗಿರಬಾರದು. ಅಲ್ಲಿರುವ ಗೂಡಂಗಡಿಗಳನ್ನು ತೆರವುಗೊಳಿಸಬೇಕು, ಆದಷ್ಟು ಪುರಸಭೆಯ ಸದಸ್ಯರು ಈ ತೆರವು ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.
ಅಭಿನಂದನೆ:ಹಳಿಯಾಳ ಪುರಸಭೆಗೆ ಬೊಲೆರೂ ವಾಹನ, ಘನತ್ಯಾಜ್ಯ ಸಾಗಿಸಲು ಎರಡೂ ವಾಹನಗಳನ್ನು ದೇಣಿಗೆಯಾಗಿ ನೀಡಿದ ಯುವ ಉದ್ಯಮಿ ಇಮ್ತಿಯಾಜ ಮನಿಯಾರ ಅವರನ್ನು ಸಭೆಯಲ್ಲಿ ಅಭಿನಂದಿಸಿದ ದೇಶಪಾಂಡೆ, ಸ್ಥಿತಿವಂತರು ಆದಷ್ಟೂ ಸಾಮಾಜಿಕ ಕಾರ್ಯಗಳಿಗೆ ದಾನ ನೀಡಲು ಹೃದಯವಂತಿಕೆ ತೋರಬೇಕು ಎಂದರು.ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಂಥಾಲಯಕ್ಕೆ ಉಚ್ಚ ವ್ಯಾಸಂಗಕ್ಕೆ ಅನುಕೂಲವಾಗಿಸುವಂತಹ ಗ್ರಂಥಗಳನ್ನು, ನರೇಗಾ ಯೋಜನೆಯಡಿಯಲ್ಲಿ ತಾಲೂಕಿನ 17 ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಹಾಗೂ ಪೌರ ಕಾರ್ಮಿಕರಿಗೆ ಮನೆಯ ಹಕ್ಕುಪತ್ರಗಳನ್ನು ವಿತರಿಸಿದರು.ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೆಕರ, ಪುರಸಭಾ ಸದಸ್ಯರು, ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ತಾಪಂ ಇಒ ಆರ್. ಸತೀಶ್, ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಎಂಜಿನಿಯರ ಹರೀಶ ಇತರರು ಇದ್ದರು.