ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದ ಎಚ್.ಡಿ. ಕುಮಾರಸ್ವಾಮಿ

KannadaprabhaNewsNetwork |  
Published : Jul 29, 2024, 12:46 AM IST
54 | Kannada Prabha

ಸಾರಾಂಶ

ಈ ಹಿಂದೆ ಅವರಪ್ಪನಾಣೆ ಕುಮಾರಸ್ವಾಮಿ ಗೆಲ್ಲುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಭಾನುವಾರ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮೊದಲಿಗೆ ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದುಕೊಂಡ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ದೇಗುಲದ ಒಳಾವರಣದಲ್ಲಿನ ಗಣಪತಿ, ಸುಬ್ರಹ್ಮಣ್ಯ, ಪಾರ್ವತಮ್ಮನವರ ಗುಡಿಗಳಿಗೂ ತೆರಳಿ ದೇವರ ದರ್ಶನ ಪಡೆದರು.

ಇದಕ್ಕೂ ಮುನ್ನ ದೇವಾಲಯದ ವತಿಯಿಂದ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರ ಮಾಡಿಕೊಳ್ಳಲಾಯಿತು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಈ ಹಿಂದೆ ಅವರಪ್ಪನಾಣೆ ಕುಮಾರಸ್ವಾಮಿ ಗೆಲ್ಲುವುದಿಲ್ಲ ಎಂದು ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದಿದ್ದರು. ಆದರೆ ನಾನು ಗೆದ್ದು ಕೇಂದ್ರ ಸಚಿವನಾಗಿಲ್ಲವೇ. ಹಾಗೆಯೇ ಅವರು ಹೇಳಿದ ಹೇಳಿಕೆಗಳಿಗೆ ತದ್ವಿರುದ್ಧವಾಗಿ ನನಗೆ ಒಳ್ಳೆಯದು ನಡೆಯುತ್ತದೆ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು.

ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್ ಮೊದಲಾದವರು ಇದ್ದರು.

ಪ್ರವಾಸಿ ಮಂದಿರಕ್ಕೆ ಬೀಗ

ದೇವಸ್ಥಾನದ ದರ್ಶನದ ಬಳಿಕ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಶ್ರಾಂತಿಗೆಂದು ಪ್ರವಾಸಿ ಮಂದಿರಕ್ಕೆ ತೆರಳಿದ್ದರು. ಆದರೆ, ಆ ವೇಳೆ ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿತ್ತು. ಪ್ರವಾಸಿ ಮಂದಿರದ ಮುಂಭಾಗ ಸುಮಾರು 10 ನಿಮಿಷ ಕಾದರೂ ಯಾವೊಬ್ಬ ಅಧಿಕಾರಿಗಳೂ ಸ್ಥಳಕ್ಕೆ ಆಗಮಿಸದೆ ಕಿರಿಕಿರಿ ಅನುಭವಿಸಿದರು.

ಇದರಿಂದಾಗಿ ಮುಖ್ಯಮಂತ್ರಿ ತವರು ಕ್ಷೇತ್ರ ನಂಜನಗೂಡಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಇರಿಸುಮುರಿಸು ಉಂಟು ಮಾಡುವ ಮೂಲಕ ದ್ವೇಷ ರಾಜಕಾರಣ ನಡೆಯಿತಾ ಎಂಬ ಆಕ್ರೋಶ ವ್ಯಕ್ತವಾಗಿದೆ.

ಮೈಸೂರಿಗೆ ತೆರಳುವ ಮುನ್ನ ಕೆಲ ಸಮಯ ವಿಶ್ರಾಂತಿ ಪಡೆಯಲೆಂದು ಬೈಪಾಸ್ ರಸ್ತೆಯಲ್ಲಿನ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಈ ವೇಳೆ ಸಚಿವರ ಭದ್ರತಾ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದರು. ಹೀಗಾಗಿ ಸುಮಾರು 10 ನಿಮಿಷಗಳ ಕಾಲ ತಮ್ಮಕಾರಿನಲ್ಲಿಯೇ ಎಚ್.ಡಿ. ಕುಮಾರಸ್ವಾಮಿ ಕುಳಿತಿದ್ದರು.

ಈ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಸಚಿವ ಸಾ.ರಾ. ಮಹೇಶ್ ಅಧಿಕಾರಿಗಳ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಸಚಿವರ ಪ್ರವಾಸದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಉದ್ಧಟತನ ತೋರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಅಲ್ಲಿಂದ ಸಚಿವ ಎಚ್.ಡಿ. ಕುಮಾರಸ್ವಾಮಿ ನಿರ್ಗಮಿಸಿದರು.

ಈ ಕುರಿತು ಲೋಕೋಪಯೋಗಿ ಇಲಾಖೆ ಎಇಇ ಸತ್ಯ ನಾರಾಯಣ್ ಸುದ್ದಿಗಾರರೊಡನೆ ಮಾತನಾಡಿ, ಕಪಿಲಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇದ್ದುದರಿಂದ ಪ್ರವಾಸಿ ಮಂದಿರದಲ್ಲಿನ ಪೀಠೋಪಕರಣಗಳನ್ನು ಕಟ್ಟಡದ ಮೇಲ್ಭಾಗಕ್ಕೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಪ್ರವಾಸಿ ಮಂದಿರಕ್ಕೆ ಬೀಗ ಹಾಕಲಾಗಿತ್ತು. ಜೊತೆಗೆ ಕೇಂದ್ರ ಸಚಿವರ ಪ್ರವಾಸದ ಬಗ್ಗೆ ಮಾಹಿತಿ ಲಭ್ಯವಿಲ್ಲದ್ದರಿಂದಾಗಿ ಅಚಾತುರ್ಯವಾಗಿದೆ ಎಂದು ಹೇಳಿದರು.

---

ಕೋಟ್

ಕೇಂದ್ರ ಸಚಿವರ ಪ್ರವಾಸದ ವೇಳೆ ಲಘು ವಿಶ್ರಾಂತಿಗಾಗಿ ನಂಜನಗೂಡಿನ ಸರ್ಕಾರಿ ಅತಿಥಿಗೃಹಕ್ಕೆ ತೆರಳಿದಾಗ ಬೀಗ ಹಾಕಿರುವುದು ಮಾಧ್ಯಮಗಳಿಂದ ತಿಳಿದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡಲಾಗುತ್ತಿದ್ದು, ಕರ್ತವ್ಯ ಲೋಪದಡಿ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು.

- ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ