ಅಧಿಕಾರಿಗಳಿಗೆ ಮಕ್ಕಳ ನರಕಯಾತನೆ ದರ್ಶನ

KannadaprabhaNewsNetwork |  
Published : Jul 26, 2025, 02:00 AM IST
ವಿಜಯಪುರ ಜಿಲ್ಲೆಯ ವಿವಿಧೆಡೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ವಿವಿಧೆಡೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕಿನ ವಿವಿಧ ಶಾಲಾ-ಕಾಲೇಜು, ವಸತಿ ನಿಲಯಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಡಾ.ತಿಪ್ಪೇಸ್ವಾಮಿ.ಕೆ.ಟಿ ಮತ್ತು ಶೇಖರಗೌಡ.ಜಿ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ವಿವಿಧೆಡೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕಿನ ವಿವಿಧ ಶಾಲಾ-ಕಾಲೇಜು, ವಸತಿ ನಿಲಯಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಡಾ.ತಿಪ್ಪೇಸ್ವಾಮಿ.ಕೆ.ಟಿ ಮತ್ತು ಶೇಖರಗೌಡ.ಜಿ ಅವರನ್ನೊಳಗೊಂಡ ತಂಡ ಭೇಟಿ ನೀಡಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ಮರಗೂರ ಮೊರಾರ್ಜಿ ದೇಸಾಯಿ ಶಾಲೆಗೆ ಮಕ್ಕಳ ಆಯೋಗದ ಸದಸ್ಯರು ಭೇಟಿ ನೀಡಿದಾಗ 250 ಮಕ್ಕಳಲ್ಲಿ 100 ಮಕ್ಕಳು ಗೈರಾಗಿರುವುದು ಕಂಡು ತೀವ್ರ ಕಳವಳ ವ್ಯಕ್ತಪಡಿಸಿದರು. ತಣ್ಣೀರಿನ ಸ್ನಾನದಿಂದ ಚರ್ಮರೋಗದ ಆತಂಕ, ದೈಹಿಕ ಶಿಕ್ಷಕರಿಂದ ಬೆದರಿಕೆ ಸೇರಿ ಸಾಲು ಸಾಲು ಸಮಸ್ಯೆಗಳ ಕುರಿತು ಆಯೋಗದ ಸದಸ್ಯರಿಗೆ ಮಕ್ಕಳು ಗೌಪ್ಯತೆ ಪತ್ರ ಬರೆದು ತಮ್ಮ ಅಳಲು ತೊಡಿಕೊಂಡರು. ಆಯೋಗದ ತಂಡ ಮಕ್ಕಳ ಗೌಪ್ಯತೆ ಪತ್ರ ಆಧರಿಸಿ ಶಾಲೆಯ ಪ್ರಾಚಾರ್ಯ, ದೈಹಿಕ ಶಿಕ್ಷಕ ಮತ್ತು ನರ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಇಲಾಖೆಯ ಮೇಲಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ಠಾಣೆ ಪರಿಶೀಲನೆ

ಇದೇ ವೇಳೆ ಹೊರ್ತಿ ಮತ್ತು ಝಳಕಿ ಪೊಲೀಸ್ ಠಾಣೆಗಳಿಗೆ ಆಯೋಗದ ಸದಸ್ಯರು ಭೇಟಿ ನೀಡಿದರು. ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಖರಿ ಸರಿಯಾಗಿ ನಡೆಯದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಇಲ್ಲಿಯ ಪರಿಸ್ಥಿತಿ ಗಮನಿಸಿದರೇ ಜಿಲ್ಲೆಯ ಎಲ್ಲ 27 ಪೊಲೀಸ್ ಠಾಣೆಗಳಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಸರಿಯಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಮಕ್ಕಳಿಗೆ ಬಸ್ ಹತ್ತಿಸಿದ ಆಯೋಗ

ಆಯೋಗದ ಸದಸ್ಯರು ವಿವಿಧೆಡೆ ಭೇಟಿ ನೀಡಿದ ವೇಳೆ ವಿಜಯಪುರ-ಇಂಡಿ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ನಿಂತಿರುವುದು ಗಮನಿಸಿದರು. ತಕ್ಷಣ ಮಕ್ಕಳ ಬಳಿಗೆ ಆಯೋಗದ ತಂಡ ತೆರಳಿ ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ಬಸ್ ಇಲ್ಲದಿರುವುದನ್ನು ಗಮನಿಸಿದರು. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜಿನ ಅವಧಿಯಲ್ಲಿ ಬಸ್ ಸಂಚರಿಸುವಂತೆ ಸಾರಿಗೆ ಅಧಿಕಾರಿಗಳ ಜತೆಗೆ ಪತ್ರ ವ್ಯವಹಾರ ಮಾಡುವುದಾಗಿ ಭರವಸೆ ನೀಡಿ, ಮಕ್ಕಳಿಗೆ ಬಸ್ ಹತ್ತಿಸಿ ಕಾಳಜಿ ಮೆರೆದರು.

ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಸಾವಿತ್ರಿ ಗೂಗ್ಗರಿ, ಡಿಸಿಪಿಒ ದೀಪಾಕ್ಷಿ ಜಾನಕಿ ಹಾಗೂ ಇತರರಿದ್ದರು.

----

ಬಾಕ್ಸ್

1500 ಬಾಲಕಿಯರಿಗೆ 2 ಶೌಚಾಲಯ

ಝಳಕಿ ಗ್ರಾಮದ ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಆಯೋಗ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ 1500 ಮಕ್ಕಳು ಇರುವ ಶಾಲಾ-ಕಾಲೇಜಿನಲ್ಲಿ ಕೇವಲ ಎರಡು ಶೌಚಾಲಯ ಇರುವ ಬಗ್ಗೆ ಬಾಲಕಿಯರು ಬಗ್ಗೆ ಆಯೋಗದ ಗಮನಕ್ಕೆ ತಂದರು. ಬಾಲಕರು ಕೂಡ ಇದೇ ಸಮಸ್ಯೆಯನ್ನು ತೋಡಿಕೊಂಡರು. 400 ಮಕ್ಕಳಿರುವ ಪ್ರೌಢ ಶಾಲೆಯಲ್ಲಿ ಕಳೆದೊಂದು ವಾರದಿಂದ ಮೊಟ್ಟೆ ನೀಡದಿರುವುದು, ಅರ್ಧಕ್ಕೂ ಹೆಚ್ಚು ಮಕ್ಕಳಿಗೆ ಬಾಳೆ ಹಣ್ಣು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ದಾಖಲಾತಿ ಮತ್ತು ಹಾಜರಾತಿ ಪುಸ್ತಕ ಆಯೋಗ ಪರಿಶೀಲಿಸಿದ ವೇಳೆ ಒಂದಕ್ಕೊಂದು ತಾಳೇ ಆಗದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಬಂಧಿತರಿಗೆ ನೋಟಿಸ್ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಸಿಯೂಟ ಕೋಣೆಗೆ ಆಯೋಗದ ಸದಸ್ಯರು ಭೇಟಿ ನೀಡಿ ತೊಗರಿ ಬೇಳೆ, ತರಕಾರಿ ಮತ್ತಿತರ ಧಾನ್ಯಗಳನ್ನು ಪರಿಶೀಲಿಸಿದರು. ಕಲಬೆರಿಕೆ ತೊಗರಿ ಬೇಳೆ ಪೂರೈಕೆ ಹಿನ್ನೆಲೆಯಲ್ಲಿ ಡಿಸಿ ಮತ್ತು ಬಿಸಿಯೂಟ ನಿರ್ದೇಶಕರಿಗೆ ಪತ್ರ ಬರೆದು ಆಯೋಗಕ್ಕೆ ವರದಿ ನೀಡುವಂತೆ ತಿಳಿಸಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ