ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮಳೆಗಾಲ ಆರಂಭವಾಗಿದ್ದು ವಿಪತ್ತು ನಿರ್ವಹಣೆಗಾಗಿ ಸರ್ಕಾರಿ ನೌಕರರು ಶ್ರಮ ಹಾಕಿ ಕೆಲಸ ಮಾಡಬೇಕು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖೆ ನೌಕರರು ಕೇಂದ್ರ ಸ್ಥಳದಲ್ಲಿದ್ದು ಕೆಲಸ ಮಾಡಬೇಕು. ಅನಿವಾರ್ಯ ಸಂದರ್ಭ ಬಂದರೆ ಪೂರ್ವಾನ್ವವಾಗಿ ತಹಸೀಲ್ದಾರ್‌ಗೆ ತಿಳಿಸಿ ಅನುಮತಿ ಪಡೆಯಬೇಕು ಎಂದು ಉಪವಿಭಾಗಾಧಿಕಾರಿ ಅಭಿಷೇಕ್ ಹೇಳಿದರು.ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಕರೆದಿದ್ದ ನೈಸರ್ಗಿಕ ವಿಪತ್ತು ನಿರ್ವಹಣಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಮಳೆಗಾಲದಲ್ಲಿ ಗ್ರಾಮಗಳಿಗೆ, ಪಟ್ಟಣದ ನದಿ ಪಾತ್ರದ ಮನೆಗಳಿಗೆ ನೀರು ನುಗ್ಗುವ ವಿವರ ಮೊದಲೇ ಪಟ್ಟಿಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವದರೊಂದಿಗೆ ಜನರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.
ಅತಿ ಹೆಚ್ಚು ಮಳೆಯಾಗಿ ಪಟ್ಟಣದ ಬಾಲರಾಜ್‍ಘಾಟ್ ಮತ್ತು ಬಂಬೂಬಾಜಾರ್ ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಘಡ ಸೃಷ್ಟಿಯಾಗುವ ಘಟನೆ ಪ್ರತಿ ವರ್ಷ ನಡೆಯುತ್ತದೆ. ಬಾಲರಾಜ್ ಘಾಟ್ ಮತ್ತು ಬಂಬೂ ಬಾಜಾರ ನಿವಾಸಿಗಳು ವಾಸಿಸುವ ಮನೆಗಳು ಅಧಿಕೃತವೋ ಅನಧಿಕೃತವೋ ಎನ್ನುವ ಬಗ್ಗೆ ಪುರಸಭೆ ಅಧಿಕಾರಿ ನೋಟಿಸ್ ನೀಡಬೇಕು. ಅನಧಿಕೃತ ಎಂದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದರು.ಮುಂಗಾರು ಸಿಡಿಲು ಬಗ್ಗೆ ಅ್ಯಪ್ ಬಂದಿದ್ದು ಅಧಿಕಾರಿಗಳು ಅದನ್ನು ಡೌನ್‍ಲೋಡ್ ಮಾಡಿ ಸೂಕ್ತ ಕ್ರಮ ಕೈಗೊಳಬೇಕು, ಇದರಿಂದ ಸಿಡಿಲು ಬಗ್ಗೆ ಮನ್ನೆಚ್ಚರಿಕೆ ಮಾಹಿತಿ ನೀಡಬಹುದಾಗಿದೆ ಎಂದು ಹೇಳಿದರು.
ಕೃಷಿ, ತೋಟಗಾರಿಕೆ ಇಲಾಖೆಗಳ ಜವಾಬ್ದಾರಿ ಹೆಚ್ಚಿದ್ದು, ಮಳೆಯಿಂದ ಆಗಿರುವ ಹಾನಿ ಕಳಿಸಬೇಕು. ಕಳೆದ ವರ್ಷದ ಮಾಹಿತಿ ಅರಿತು ಮುಂದಿನ ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣ ತಂಡ ರಚಿಸಿ, ಕಾರ್ಯ ನಿರ್ವಹಣೆಯಾಗಬೇಕು ಎಂದರು.ತಹಸೀಲ್ದಾರ್ ಪಟ್ಟರಾಜಗೌಡ ಮಾತನಾಡಿ, ವಿಪತ್ತು ನಿರ್ವಹಣೆಯಲ್ಲಿ ತಹಸೀಲ್ದಾರ್, ಇಒ, ಸೇರಿ ಉನ್ನತ ಅಧಿಕಾರಿಗಳು ಮಾಡುತ್ತಾರೆಂದು ಭಾವಿಸಬಾರದು, ಸರ್ಕಾರದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯ ಎಂದು ಚಾಟಿ ಬೀಸಿದರು.
ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಭೆಗೆ ಹಾಜರಾಗಲು ಸೂಚಿಸಿದ್ದರೂ ತಾಲೂಕು ಆರೋಗ್ಯ ಅಧಿಕಾರಿ ಸಭೆಗೆ ಆಗಮಿಸಿಲ್ಲ ಎಂದ ಅವರು, ತಾಲೂಕು ಆರೋಗ್ಯಾಧಿಕಾರಿ ಇಂಜೆಕ್ಷನ್ ತೆಗೆದುಕೊಂಡು ಮಲಗಿರುವರೇ ಎಂದು ಖಾರವಾಗಿ ಪ್ರಶ್ನಿಸಿದರು.ವಿಪತ್ತು ನಿರ್ವಹಣೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಕೆಲಸ ಇದ್ದು, ಕೆಲಸ ಕಾರ್ಯಗಳಲ್ಲಿ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಜಲ ಸಂಪನ್ಮೂಲ, ಅಗ್ನಿಶಾಮಕ, ಪೊಲೀಸ್ ಸೇರಿ ಇತರೆ ಇಲಾಖೆಗಳು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ತಾಪಂ ಇಒ ರಾಘವೇಂದ್ರ, ಗ್ರೇಡ್-2 ತಹಸೀಲ್ದಾರ್ ಸುರೇಶ್ ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.