ಬೆಂಗಳೂರು: ಓಕಳಿಪುರ ಅಷ್ಟಪಥ 10 ದಿನದಲ್ಲಿ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : Feb 14, 2024, 02:19 AM ISTUpdated : Feb 14, 2024, 12:50 PM IST
Okalipura Junction 4 | Kannada Prabha

ಸಾರಾಂಶ

ಬೆಂಗಳೂರಿನ ಮೆಜೆಸ್ಟಿಕ್‌ ಸಂಪರ್ಕಿಸುವ ಪ್ರಮುಖ ರಸ್ತೆ ಓಕಳಿಪುರಂ ಕಾರಿಡಾರ್‌ 10 ದಿನಲ್ಲಿ ಉದ್ಘಾಟನೆಗೆ ಲಭ್ಯವಾಗಲಿದೆ. 10 ವರ್ಷ ನಡೆದ ಕಾಮಗಾರಿ ಕೊನೆಗೂ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಒಂದು ದಶಕದಿಂದ ನಡೆಯುತ್ತಿರುವ ಓಕಳಿಪುರ ಜಂಕ್ಷನ್‌ನ ಅಷ್ಟಪಥ ಸಿಗ್ನಲ್‌ ಮುಕ್ತ ಕಾರಿಡಾರ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ.

ಮಜೆಸ್ಟಿಕ್‌ ಸಮೀಪದ ಓಕಳಿಪುರ ಜಂಕ್ಷನ್‌ನಲ್ಲಿ 2013-14ರಲ್ಲಿ ಬಿಬಿಎಂಪಿ ಆರಂಭಿಸಿದ್ದ ಎಂಟು ಮಾರ್ಗಗಳ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಬಣ್ಣ ಬಳಿಯುವ ಕೆಲಸ ಆರಂಭಿಸಲಾಗಿದೆ. 

10 ದಿನದಲ್ಲಿ ಈ ಕೆಲಸ ಮುಕ್ತಾಯಗೊಂಡ ಬಳಿಕ ಉದ್ಘಾಟಿಸಲು ನಿರ್ಧರಿಸಲಾಗಿದೆ.

₹337 ಕೋಟಿ ವೆಚ್ಚ: ಎಂಟು ಲೈನ್‌ ಕಾರಿಡಾರ್‌ ನಿರ್ಮಾಣಕ್ಕೆ ಒಟ್ಟು ₹337 ಕೋಟಿ ವ್ಯಯಿಸಲಾಗಿದೆ. ತಡೆಗೋಡೆ, ರಸ್ತೆ, ಸ್ಕೈವಾಕ್‌, ಫ್ಲೈಓವರ್ ಸೇರಿದಂತೆ ಸಿವಿಲ್‌ ಕಾಮಗಾರಿಯನ್ನು ಬಿಬಿಎಂಪಿ ₹112 ಕೋಟಿ ವೆಚ್ಚದಲ್ಲಿ ಮಾಡಿದೆ. 

ಭೂಸ್ವಾಧೀನಕ್ಕೆ ₹156 ಕೋಟಿ ವೆಚ್ಚ ಮಾಡಲಾಗಿದೆ. ರೈಲ್ವೆ ಹಳಿಗಳ ಕೆಳಭಾಗದಲ್ಲಿ ಪ್ರೀ ಕಾಸ್ಟ್‌ ಬಾಕ್ಸ್‌ಗಳನ್ನು ರೈಲ್ವೆ ಇಲಾಖೆಯು ₹80 ಕೋಟಿ ವೆಚ್ಚದಲ್ಲಿ ಮಾಡಿದೆ. ಬಾಕ್ಸ್‌ ಅಳವಡಿಕೆ ಬಾಕಿ

ತುಮಕೂರು ಮಾರ್ಗದ ರೈಲ್ವೆ ಹಳಿ ಕೆಳಭಾಗದಲ್ಲಿ ಬಾಕ್ಸ್‌ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ವಾಹನ ಸಂಚಾರ ಸಹ ಮುಕ್ತಗೊಳಿಸಲಾಗಿದೆ. 

ಚೆನ್ನೈ ರೈಲ್ವೆ ಹಳಿ ಕೆಳಭಾಗದಲ್ಲಿ ಬಾಕ್ಸ್‌ ಅಳವಡಿಕೆ ಕಾಮಗಾರಿ ಪೂರ್ಣಗೊಳಿಸಲು ಸುಮಾರು ನಾಲ್ಕು ತಿಂಗಳು ಬೇಕಾಗಲಿದೆ ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್ ಮಾಹಿತಿ ನೀಡಿದ್ದಾರೆ.

ಚೆನ್ನೈ ರೈಲ್ವೆ ಮಾರ್ಗದಲ್ಲಿ ಹೆಚ್ಚಿನ ರೈಲುಗಳ ಸಂಚಾರ ಇರುವುದರಿಂದ ಹಗಲು ಕಾಮಗಾರಿ ನಡೆಸಲು ಅಸಾಧ್ಯ. 

ಪ್ರೀ ಕಾಸ್ಟ್‌ ಬಾಕ್ಸ್‌ ಅನ್ನು ರೈಲ್ವೆ ಹಳಿಯ ಕೆಳ ಭಾಗದಲ್ಲಿ ಅಳವಡಿಕೆ ಕಾಮಗಾರಿಯನ್ನು ರಾತ್ರಿ 12.30ರಿಂದ ಬೆಳಗಿನ ಜಾವ 4.30ರ ಸಮಯದಲ್ಲಿ ಮಾತ್ರ ಮಾಡಬೇಕಿದೆ. 

ಹಾಗಾಗಿ, ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರೈಲ್ವೆ ನಿಲ್ದಾಣಕ್ಕೆ ಸಿಗ್ನಲ್‌ ಫ್ರೀ ಪ್ರವೇಶ

ರಾಜಾಜಿನಗರ ಹಾಗೂ ಮಲ್ಲೇಶ್ವರದಿಂದ ವಾಹನಗಳು ಸಿಗ್ನಲ್‌ ಮುಕ್ತವಾಗಿ ರೈಲ್ವೆ ನಿಲ್ದಾಣಕ್ಕೆ ಫ್ಲೈಓವರ್‌ ನಿರ್ಮಾಣ ಮಾಡಲಾಗಿದೆ. 

ದೇಶದಲ್ಲಿ ಈ ರೀತಿ ನೇರವಾಗಿ ವ್ಯವಸ್ಥೆ ಇರುವುದು ಬೆಂಗಳೂರಿನಲ್ಲಿ ಮಾತ್ರ ಎಂದು ಲೋಕೇಶ್ ತಿಳಿಸಿದ್ದಾರೆ.

ಕಾಮಗಾರಿ ಆರಂಭ: 2013-14

ಒಟ್ಟು ಯೋಜನಾ ವೆಚ್ಚ: 337 ಕೋಟಿ

ಅವಧಿ: 18 ತಿಂಗಳು

ಅನುಕೂಲ: ಗುಬ್ಬಿತೋಟದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್‌ ರಸ್ತೆಗಳು ಸಿಗ್ನಲ್‌ ಮುಕ್ತವಾಗಲಿವೆ. 

ಮೆಜೆಸ್ಟಿಕ್‌ ರೈಲ್ವೆ ನಿಲ್ದಾಣದ ಟರ್ಮಿನಲ್‌-2ಗೆ ನೇರವಾಗಿ ಸಂಪರ್ಕ ಮತ್ತು ನಿರ್ಗಮನ ವ್ಯವಸ್ಥೆ ಇರಲಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ