ಒಕ್ಕಲಿಗರ ವಧು -ವರರ ಸಮಾವೇಶ: 200 ಯುವಕರು, 8 ಮಂದಿ ಯುವತಿಯರು ನೋಂದಣಿ

KannadaprabhaNewsNetwork |  
Published : Jul 03, 2024, 12:24 AM IST
1ಕೆಎಂಎನ್ ಡಿ21 | Kannada Prabha

ಸಾರಾಂಶ

ನೋಂದಾಯಿಸಿಕೊಳ್ಳಲು ಹೆಣ್ಣುಮಕ್ಕಳಿಗೆ 50 ರು. ಹಾಗೂ ಗಂಡು ಮಕ್ಕಳಿಗೆ 100 ರು. ಪ್ರವೇಶಾತಿ ಶುಲ್ಕ ನಿಗದಿ ಪಡಿಸಲಾಗಿತ್ತು. ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಕೌಂಟರ್ ನಿಯೋಜಿಸಲಾಗಿತ್ತು. ವಧು-ವರರು ತಮ್ಮ ದಾಖಲೆಗಳನ್ನು ಕೊಟ್ಟು 200 ಯುವಕರು, 8 ಮಂದಿ ಯುವತಿಯರು ನೋಂದಣಿ ಮಾಡಿಕೊಂಡರೆ, ಮೈಸೂರು ಕಚೇರಿಯಲ್ಲಿ 72 ಮಂದಿ ಹೆಣ್ಣು ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ವಿಜಯ ಕಾಲೇಜಿನಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಪಾಂಡವಪುರ ಶಾಖೆಯಿಂದ ನಡೆದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ 200 ಯುವಕರು ಹಾಗೂ 8 ಮಂದಿ ಯುವತಿಯರು ವಿವಾಹ ನೋಂದಣಿ ಮಾಡಿಸಿದರು.

ಇದಕ್ಕೂ ಮುನ್ನ ಸಮಾವೇಶಕ್ಕೆ ಲಯನ್ ಕೆ.ದೇವೇಗೌಡ ಚಾಲನೆ ನೀಡಿದರು. ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಒಕ್ಕಲಿಗ ವಧು-ವರರು ತಮ್ಮ ಹೆಸರು ನೋಂದಾಯಿಸಿಕೊಂಡರು.

ನೋಂದಾಯಿಸಿಕೊಳ್ಳಲು ಹೆಣ್ಣುಮಕ್ಕಳಿಗೆ 50 ರು. ಹಾಗೂ ಗಂಡು ಮಕ್ಕಳಿಗೆ 100 ರು. ಪ್ರವೇಶಾತಿ ಶುಲ್ಕ ನಿಗದಿ ಪಡಿಸಲಾಗಿತ್ತು. ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಕೌಂಟರ್ ನಿಯೋಜಿಸಲಾಗಿತ್ತು. ವಧು-ವರರು ತಮ್ಮ ದಾಖಲೆಗಳನ್ನು ಕೊಟ್ಟು 200 ಯುವಕರು, 8 ಮಂದಿ ಯುವತಿಯರು ನೋಂದಣಿ ಮಾಡಿಕೊಂಡರೆ, ಮೈಸೂರು ಕಚೇರಿಯಲ್ಲಿ 72 ಮಂದಿ ಹೆಣ್ಣು ಮಕ್ಕಳು ನೋಂದಾಯಿಸಿಕೊಂಡಿದ್ದಾರೆ.

ಲಯನ್ ಕೆ.ದೇವೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇರುವ ಒಕ್ಕಲಿಗ ಸಮುದಾಯದ ಮದುವೆಯಾಗದ ರೈತ ಮಕ್ಕಳಿಗೆ ಮದುವೆ ಭಾಗ್ಯ ದೊರಕಿಸಿಕೊಡಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ಒಕ್ಕಲಿಗರ ವಧು-ವರರ ಸಮಾವೇಶ ಆಯೋಜಿಸಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ರೈತರ ಮಕ್ಕಳು ಹೆಚ್ಚು ವಿದ್ಯಾಭ್ಯಾಸ ಮಾಡಿಲ್ಲ, ಉದ್ಯೋಗದಲ್ಲಿಲ್ಲ, ಕೃಷಿ ಮಾಡುತ್ತಾರೆ ಎಂಬ ಹಲವು ಕಾರಣಗಳಿಂದ ಹೆಣ್ಣು ಕೊಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ರೈತರ ಮಕ್ಕಳು ಸೇರಿದಂತೆ ಸಮಾಜದ ಎಲ್ಲರಿಗೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ. ಇದನ್ನು ಎಲ್ಲರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷ ರವಿಕುಮಾರ್ ಮಾತನಾಡಿ, ಮದುವೆ ವಿಚಾರದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಿ ಸಮುದಾಯದ ಜನರಿಗೆ ಅನುಕೂಲ ಮಾಡಿಕೊಡಲು ಕಳೆದ 18 ವರ್ಷಗಳಿಂದಲೂ ಟ್ರಸ್ಟ್ ವಧು-ವರರ ಸಮಾವೇಶ ಏರ್ಪಡಿಸುತ್ತಿದೆ ಎಂದರು.

ದಲ್ಲಾಳಿಗಳು ಹೆಚ್ಚಾಗಿ ಶ್ರೀಮಂತರ ಮಕ್ಕಳಿಗೆ ಮಾತ್ರ ಹೆಚ್ಚು ಮದುವೆ ಮಾಡಿಸುತ್ತಾರೆ. ಅಲ್ಲದೇ, ಗಂಡಿನ ಕಡೆಯವರು ಶ್ರೀಮಂತರಾಗಿದ್ದರೆ ಹೆಣ್ಣಿನ ಕಡೆಯವರಿಗೆ ದಲ್ಲಾಳಿಗಳೇ ಇಷ್ಟು ಹಣನೀಡಬೇಕು ಎಂಬ ಹಲವು ಆಮಿಷಗಳನ್ನು ಹಾಕುತ್ತಾರೆ. ಅವುಗಳನ್ನು ನಿಯಂತ್ರಿಸಲು ನಮ್ಮ ಸಂಸ್ಥೆ ವಧು-ವರರ ಸಮಾವೇಶ ನಡೆಸಲಾಗುತ್ತಿದೆ ಎಂದರು.

ನಮ್ಮಲ್ಲಿ ಹೆಚ್ಚಾಗಿ ವೈದ್ಯರು, ಎಂಜಿನಿಯರ್, ಸಾಪ್ಟವೇರ್ ಉದ್ಯೋಗಿಗಳು ಸೇರಿದಂತೆ ಪದವಿ, ಸ್ನಾತಕೋತ್ತರ ಪದವಿ ಪಡೆದವರೇ ಹೆಚ್ಚು ನೋಂದಾಯಿಸಿಕೊಳ್ಳುತ್ತಿದ್ದಾರೆ. ರೈತರ ಮಕ್ಕಳು, ಅವಿದ್ಯಾವಂತರು ನೋಂದಾಯಿಸಿಕೊಳ್ಳುವುದು ಕಡಿಮೆ. ಹೀಗಾಗಿ ಗ್ರಾಮೀಣದ ಜನರಿಗೆ ಅನುಕೂಲವಾಗಲು ತಾಲೂಕು ಮಟ್ಟದಲ್ಲಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.

ಸಮಾರಂಭದಲ್ಲಿ ವಿದ್ಯಾಪ್ರಚಾರದ ಸಂಘದ ಗೌರವ ಕಾರ್‍ಯದರ್ಶಿ ಕೆ.ವಿ.ಬಸವರಾಜು ಮಾತನಾಡಿದರು. ಇದಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿಕೊಟ್ಟು ಕಾರ್‍ಯಕ್ರಮಕ್ಕೆ ಶುಭಹಾರೈಸಿದರು. ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷರಾದ ಬಿ.ಎಸ್.ಜಯರಾಮು, ಅನಿತಾಲೋಕೇಶ್, ಮಂಜುಳಾ ಶಂಕರ್‌ನಾಗ್, ಕಾರ್‍ಯಾಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕಾರ್‍ಯದರ್ಶಿ ಕೆ.ಕುಬೇರ್, ಕೋಶಾಧ್ಯಕ್ಷ ಸ್ವಾಮೀಗೌಡ, ಸಂಘಟನಾ ಕಾರ್‍ಯದರ್ಶಿ ಗುಣಶೇಖರ್, ಪದಾಧಿಕಾರಿಗಳಾದ ಡಾ.ಸಿ.ಎ.ಅರವಿಂದ್, ಇ.ಎಸ್.ನಾಗರಾಜು, ಸಿ.ಎಸ್.ಸುಬ್ಬೇಗೌಡ, ಚಂದ್ರಶೇಖರಯ್ಯ, ಬಿ.ಜೆ.ಸ್ವಾಮಿ, ಡಾ.ಮಾದಯ್ಯ, ಗಿರೀಗೌಡ, ನಾಗೇಗೌಡ ಸೇರಿದಂತೆ ಹಲವರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ