ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಹೀಗೊಂದು ಗಾಂಧಿಮಾರ್ಗ
ಭಗೀರಥ ಅಪ್ಪಿಯಣ್ಣನ ಹೋರಾಟಕ್ಕೆ ಜಯ ಸಿಕ್ಕೀತೇ?। ಇನ್ನೂ ಸಿಕ್ಕಿಲ್ಲ ಡಾಂಬರು ಭಾಗ್ಯರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ದೊಂಬರಪಲ್ಕೆಗೆ ಹೋಗುವಾಗ ರಸ್ತೆ ಪಕ್ಕದಲ್ಲಿ ತಲೆಗೆ ಮುಂಡಾಸು, ಸೊಂಟಕ್ಕೆ ಬೈರಾಸು ಸುತ್ತಿಕೊಂಡ 80ರ ವೃದ್ಧರೊಬ್ಬರು ಪಿಕ್ಕಾಸು ಗುದ್ದಲಿ ಹಿಡಿದುಕೊಂಡು ಚರಂಡಿಯ ಮಣ್ಣು ತೆಗೆದು ರಸ್ತೆಗೆ ಹಾಕಿ, ಅದನ್ನು ಕಾಲಿನಿಂದ ಹರಡಿ, ಮೆಟ್ಟಿ ಗಟ್ಟಿ ಮಾಡುವ ದೃಶ್ಯವೊಂದು ಕಾಣಸಿಗುತ್ತದೆ.
ಇವರು ಅಪ್ಪಿಯಣ್ಣ ಯಾನೆ ಶ್ರೀನಿವಾಸ ಮೂಲ್ಯ. ಒಂದು ಕಾಲದಲ್ಲಿ ಮಂಗಳಾದೇವಿ ಮೇಳದಲ್ಲಿ ಕಲಾವಿದರಾಗಿ ಕುಣಿದವರು. ಈ ಇಳಿವಯಸ್ಸಲ್ಲೂ ಈ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ.ಹೌದು, ಮಾನಾಜೆ ಮುಖ್ಯ ರಸ್ತೆಯಿಂದ ದೊಂಬರಪಲ್ಕೆ ಹೋಗುವ 1.5 ಕಿ.ಮೀ. ಕಚ್ಛಾ ರಸ್ತೆ, ಡಾಂಬರು ಕಾಣದೆ ಹಾಗೇ ಇದೆ. ಮಳೆಗಾಲದಲ್ಲಂತೂ ಈ ರಸ್ತೆ ಉಪಯೋಗ ಶೂನ್ಯವಾಗಿ ಬಿಡುತ್ತದೆ. ಈ ಪರಿಸ್ಥಿತಿಯನ್ನು ಇದೇ ರಸ್ತೆಯಲ್ಲಿ ಕೂಲಿ ಕೆಲಸಕ್ಕೆ ಹೋಗುವ ಅಪ್ಪಿಯಣ್ಣ ನೋಡಿ ಇದರ ದುರಸ್ತಿಗೆ ಇಳಿದರು. ಅದೂ ಕಳೆದ 50 ವರ್ಷದಿಂದ ರಸ್ತೆ ಹಾಗೂ ಅದರ ಚರಂಡಿಯನ್ನು ರಿಪೇರಿ ಮಾಡುತ್ತಿದ್ದಾರೆ, ಆದರೆ ಇಷ್ಟು ಸಮಯದಲ್ಲಿ ಸರ್ಕಾರವಾಗಲೀ, ಜನಪ್ರತಿನಿಧಿಗಳಾಗಲಿ ಈ ಕಡೆ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ!
* ಜನಪ್ರತಿನಿಧಿಗಳ ನಿರ್ಲಕ್ಷ್ಯಈ ಗ್ರಾಮದ ರಸ್ತೆಯಲ್ಲಿ ಸುಮಾರು 15 ಬಡ ಕುಟುಂಬಗಳಿವೆ. ಅಲ್ಲಿಗೆ ಹೋಗುವ ಕಾಲುದಾರಿಯೊಂದು ರಸ್ತೆಯ ರೂಪ ಪಡೆದು ಅರ್ಧ ಶತಮಾನವೇ ಕಳೆದಿವೆ. ವರ್ಷಕ್ಕೊಂದರಂತೆ ಬರುವ ಚುನಾವಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ಇದೇ ಮಣ್ಣಿನ ರಸ್ತೆಯಲ್ಲಿ ಕೈಮುಗಿಕೊಂಡು ಬಂದು ಓಟು ಕೇಳುತ್ತಾರೆ, ಗೆದ್ದರೆ ಅವರು ಮತ್ತೆ ಈ ರಸ್ತೆ ನೋಡುವುದು ಇನ್ನೊಂದು ಚುನಾವಣೆಯಲ್ಲಿ!
ಈ 1.50 ಕಿ.ಮೀ. ಉದ್ದದ 8-10 ಅಡಿ ಅಗಲದ ರಸ್ತೆ ಮಳೆ ಬಂದರೆ ಥೇಟ್ ಕಂಬಳದ ಗದ್ದೆಯಾಗುತ್ತದೆ, ಮಣ್ಣು ಕೊಚ್ಚಿಕೊಂಡು ಹೋಗಿ ಜನರಿಗೆ ಮಾತ್ರವಲ್ಲ ಜಾನುವಾರುಗಳಿಗೂ ಓಡಾಟಕ್ಕೆ ಕಷ್ಟವಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಈ ರಸ್ತೆಯ ದುರಾವಸ್ಥೆ ಚೆನ್ನಾಗಿ ಗೊತ್ತಿದೆ, ರಸ್ತೆ ಬಗ್ಗೆ ಗ್ರಾಮಸ್ಥರು ನೂರಾರು ಬಾರಿ ಜನಪ್ರತಿನಿಧಿಗಳ ಗಮನವೂ ಸೆಳೆದಿದ್ದಾರೆ. ಆದರೆ ಅದಕ್ಕೊಂದು ಡಾಂಬರು ಮಾಡುವ ಇಚ್ಛಾಶಕ್ತಿ ಮಾತ್ರ ಯಾರಲ್ಲೂ ಇಲ್ಲ.* ರಸ್ತೆ ಬಗ್ಗೆ ಅಪ್ಪಿಯಣ್ಣನ ಕಾಳಜಿ
ಈ ರಸ್ತೆಯಲ್ಲಿ ಕೂಲಿ ಕೆಲಸಕ್ಕೆ ಹೋಗುವ ಅಪ್ಪಿಯಣ್ಣರಿಗೆ ಈ ರಸ್ತೆ ಬಗ್ಗೆ ಅದೇನೋ ಕಾಳಜಿ, ರಸ್ತೆಯಲ್ಲಿ ಗುಂಡಿ ಕಂಡರೇ ಸಾಕು, ಹಾರೆ ಪಿಕಾಸಿ ತಂದು ಈ ಇಳಿವಯಸ್ಸಲ್ಲೂ ಮಣ್ಣು ಹಾಕಿ ಗುಂಡಿ ಮುಚ್ಚುತ್ತಾರೆ. ಮಳೆಗಾಲದಲ್ಲಂತೂ ಅವರು ಮನೆಯಲ್ಲಿರುವುದು ಕಡಿಮೆ, ಈ ರಸ್ತೆಯಲ್ಲಿರುವುದೇ ಜಾಸ್ತಿ. ಒಂದೆರಡು ದಿನ ಅಥವಾ ತಿಂಗಳಲ್ಲ, ಅಪ್ಪಿಯಣ್ಣ 50 ವರ್ಷಗಳಿಂದ ಈ ರಸ್ತೆಗೆ ತೇಪೆ ಹಾಕುತ್ತಿದ್ದಾರೆ!* ಕುಗ್ರಾಮವಲ್ಲ ಆದರೂ ಸೌಕರ್ಯವಿಲ್ಲ!
ಇದೇನೂ ಯಾವುದೋ ಕಾಡಿನಲ್ಲಿರುವ ಅಥವಾ ಜನಸಂಚಾರವೇ ಇಲ್ಲದ ಕುಗ್ರಾಮವಲ್ಲ. ದೊಂಬರಪಲ್ಕೆ, ಅಜೆಕಾರು ಮುಖ್ಯ ಪೇಟೆಯಿಂದ ಕೇವಲ 8 ಕಿ.ಮೀ. ದೂರದಲ್ಲಿದೆ. ದಿನಕ್ಕೆ ನೂರಾರು ದ್ವಿಚಕ್ರ ಮತ್ತು ಆಟೋಗಳು, ಕಾರುಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಈ ಮಣ್ಣಿನ ರಸ್ತೆಯಲ್ಲಿ ಬಸ್ಸಿಲ್ಲ, ನಡೆದುಕೊಂಡೇ ಓಡಾಡಬೇಕು, ಆಟೋದವರು ಪೇಟೆಯಿಂದ ಇಲ್ಲಿಗೆ ಬರುವುದಕ್ಕೆ 150 ರು. ತೆಗೆದುಕೊಳ್ಳುತ್ತಾರೆ.ಈ ರಸ್ತೆ ನಿರ್ವಹಣೆಯ ಕೆಲಸ ತನ್ನದಲ್ಲ, ಸರ್ಕಾರದ್ದು ಎನ್ನುವುದನ್ನೂ ತಿಳಿಯದ ಮುಗ್ಧ. 2ನೇ ತರಗತಿ ವರೆಗೆ ಓದಿರುವ ಅಪ್ಪಿಯಣ್ಣನಿಗೆ ಯಾರೋ ರಸ್ತೆ ಪಕ್ಕ ಚರಂಡಿ ಮಾಡಿದರೆ ನೀರು ಸರಾಗ ಹರಿದು ರಸ್ತೆ ಉಳಿಯತ್ತದೇ ಎಂದರು. ಸರಿ ಎಂದು ಹಾರೆ ಹಿಡಿದು ಹೊರಟ ಅಪ್ಪಿಯಣ್ಣ, ಏಕಾಂಗಿಯಾಗಿ ಕಾಡಂಚಿನ ಅಷ್ಟೂ ಉದ್ದದ ರಸ್ತೆಗೆ ಚರಂಡಿ ನಿರ್ಮಿಸಿಯೇ ಬಿಟ್ಟರು. ಆದರೆ ಈ ರಸ್ತೆ ಪಕ್ಕ ನೀರಿನ ಪೈಪು ಹಾಕುವ ಗುತ್ತಿಗೆದಾರರು, ಚರಂಡಿಯನ್ನೂ ಮುಚ್ಚಿಬಿಟ್ಟರು, ಅಪ್ಪಿಯಣ್ಣನ ಶ್ರಮ ಮಳೆನೀರಲ್ಲಿಟ್ಟ ಹೋಮವಾಯಿತು.
ಐದಾರು ವರ್ಷಗಳ ಹಿಂದೆ ಅಪ್ಪಿಯಣ್ಣನ ಕಷ್ಟ ನೋಡಿ, ಸ್ಥಳೀಯ ಉದ್ಯಮಿಯೊಬ್ಬರು ತಾವೇ ಖರ್ಚು ಮಾಡಿ ಜೆಸಿಬಿಯಿಂದ ರಸ್ತೆಯನ್ನು ಅಗಲಗೊಳಿಸಿ, ಚರಂಡಿ ನಿರ್ಮಿಸಿದ್ದರು. ಆದರೆ ಒಂದೇ ಮಳೆಗಾಲಕ್ಕೆ ಇಲ್ಲೊಂದು ರಸ್ತೆ ಇತ್ತೇ ಎನ್ನುವಷ್ಟು ಕುಲಗೆಟ್ಟು ಹೋಯಿತು.ಮಳೆಹಾನಿ ನಿರ್ವಹಣೆ, ಪ್ರಕೃತಿ ವಿಕೋಪ, ಗ್ರಾಮೀಣಾಭಿವೃದ್ಧಿ, ರಸ್ತೆ ಅಭಿವೃದ್ಧಿ, ನರೇಗಾ ಇತ್ಯಾಗಿ ಹತ್ತಾರು ಇಲಾಖೆ, ಯೋಜನೆಗಳ ಕೋಟಿಕೋಟಿ ಹಣ ಬರುತ್ತದೆಯಾದರೂ ಈ ರಸ್ತೆಗೆ ಅದ್ಯಾವುದೂ ಬರುತ್ತಿಲ್ಲ!. ಆದರೂ ಅಪ್ಪಿಯಣ್ಣ ತಮ್ಮ ಹೋರಾಟ ಬಿಟ್ಟಿಲ್ಲ, ಅವರು ಕೂಲಿ ಕೆಲಸ ನಡುವೆ ಸಮಯ ಸಿಕ್ಕಾಗ ಮಾಡುವುದು ಇದೊಂದೇ ಕೆಲಸ. ''''''''
ನಾನು ಸಾಯೋದ್ ಮೊದ್ಲು ಈ ರಸ್ತೆಗೊಂದು ಡಾಂಬರಾದ್ರೆ ಖುಷಿ ಆಗ್ತದೆ'''''''' ಎಂದು ಆಶಿಸುತ್ತಿರುವ ಅಪ್ಪಿಯಣ್ಣನ ನಿಸ್ವಾರ್ಥ ಸಮಾಜ ಸೇವೆಯೂ ಹೌದು. ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಗಾಂಧಿಮಾರ್ಗದ ಸಾತ್ವಿಕ ಪ್ರತಿಭಟನೆಯೂ ಹೌದು!ಬಾಕ್ಸ್
ಒಂದು ರು. ಅನುದಾನ ಬಂದಿಲ್ಲ !ಕಾರ್ಕಳ ತಾಲೂಕಿಗೆ 2024-25ರಲ್ಲಿ ನರೇಗಾ ಯೋಜನೆಯಡಿ 670. 35 ಲಕ್ಷ ರು, ವ್ಯಯಿಸಲಾಗಿದೆ. ಅದರಲ್ಲಿ ಮರ್ಣೆ ಗ್ರಾಮ ಪಂಚಾಯತಿಯಲ್ಲಿ 9.87 ಲಕ್ಷ ರು. ಕೂಲಿ, 14.11 ಲಕ್ಷ ರು.ಗಳ ಸಾಮಗ್ರಿ ಸೇರಿ 23.5 ಲಕ್ಷ ರು. ಖರ್ಚು ಮಾಡಲಾಗಿದೆ. ಆದರೆ ದೊಂಬರಪಲ್ಕೆ ರಸ್ತೆ ಅಭಿವೃದ್ಧಿ 50 ವರ್ಷಗಳಿಂದ ಚಿಕ್ಕಾಸು ಬಂದಿಲ್ಲ !--------------
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ!ದೊಂಬರಪಲ್ಕೆ ರಸ್ತೆ ದುರಸ್ತಿ ಮಾಡುವ ಶ್ರೀನಿವಾಸ ಮೂಲ್ಯರ ಬಗ್ಗೆ ತಿಳಿದಿದೆ, ಖುದ್ದು ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯುತ್ತೇನೆ. ಸರ್ಕಾರದ ಎಲ್ಲ ಸವಲತ್ತುಗಳನ್ನು ಒದಗಿಸುವ ಪ್ರಮಾಣಿಕ ಪ್ರಯತ್ನ ಮಾಡುವೆ. ಈ ರಸ್ತೆಯ ಬಗ್ಗೆ ಪಂಚಾಯಿತಿಯಿಂದ ಮಾಹಿತಿ ಪಡೆದು ಅಭಿವೃದ್ಧಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗುವುದು.
। ಕೆ.ಜೆ. ಶಶಿಧರ್, ಕಾರ್ಕಳ ತಾಪಂ ಇಒ