ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸೌಹಾರ್ದ ಪರಿಷತ್ ನಿಂದ ಸ್ನೇಹ ಮಿಲನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಯಸ್ಸಿನ ಅರ್ಧ ಶತಕ ದಾಟಿದ ಬಳಿಕ ಹೊಸ ಕನಸಿಗಿಂತ ಕಾಲೇಜಿನ ಹಳೆ ನೆನಪುಗಳು ಸುಮಧುರವಾಗಿದೆ. ಜೀವನದಲ್ಲಿ ಕಳೆದ ಆ ಕ್ಷಣಗಳು ಇಂದಿಗೂ ಕಣ್ಮುಂದೆ ಮರುಕಳಿಸುತ್ತಿದೆ ಎಂದು ಹಿರಿಯ ವಿದ್ಯಾರ್ಥಿಗಳ ಸ್ನೇಹ ಸೌಹಾರ್ದ ಪರಿಷತ್ ಅಧ್ಯಕ್ಷ ಎಂ. ಭೋಜೇಗೌಡ ಹೇಳಿದರು.ನಗರದ ರತ್ನಗಿರಿ ರಸ್ತೆ ಸಮೀಪದ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸೌಹಾರ್ದ ಪರಿಷತ್ ನಿಂದ ಭಾನುವಾರ ಏರ್ಪಡಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಗೆಳೆಯರು ವರ್ಷಕ್ಕೊಮ್ಮೆ ಭೇಟಿ ಮಾಡಿ ಕಷ್ಟ ಸುಖ, ಹಿಂದಿನ ಸಂತೋಷದ ಸಮಯವನ್ನು ಮೆಲುಕು ಹಾಕುವ ದೃಷ್ಟಿಯಿಂದ ಹಳೇ ವಿದ್ಯಾರ್ಥಿಗಳ ಪರಿಷತ್ ಸ್ಥಾಪನೆ ಮಾಡಲಾಗಿದೆ. ವೈಯಕ್ತಿಕ ಅಥವಾ ಕುಟುಂಬಗಳ ಜವಾಬ್ದಾರಿಯಿಂದ ಗೆಳೆಯರು ಭೇಟಿ ಯಾಗದಿರುವ ಕಾರಣ ಪರಸ್ಪರ ಭೇಟಿ ಮಾಡಲಿಚ್ಚಿಸಲು ಇಂಥ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಸಮಾಜದಲ್ಲಿ ಪ್ರತಿಯೊಬ್ಬರ ಬದುಕು ಆದರ್ಶಪ್ರಾಯವಾಗಿರಬೇಕು. ಸಮಸ್ಯೆಗಳು ಮನುಷ್ಯನನ್ನು ಕಾಡುವುದು ನಿಜ. ಆದರೆ ಧೈರ್ಯವಾಗಿ ಎದುರಿಸಿ ಮುನ್ನುಗ್ಗಿದರೆ ಯಶಸ್ವಿಪೂರ್ಣ ವ್ಯಕ್ತಿಯಾಗಬಹುದು. ಪರರಿಗೆ ಮೆಚ್ಚಿಸುವ ಸಾಧನೆಗಿಂತ ಆತ್ಮ ತೃಪ್ತಿಗೆ ಶ್ರಮಪಡಬೇಕು. ಬದುಕಿನಲ್ಲಿ ಇಲ್ಲಸಲ್ಲದ ಮಾತುಗಳಿಗೆ ಹೆಚ್ಚು ಗಮನಹರಿಸದೇ ಗುರಿಮುಟ್ಟಲು ಮುನ್ನಡೆದರೆ ಬೆಳವಣಿಗೆ ಹೊಂದಲು ಸಾಧ್ಯ ಎಂದರು.ಪ್ರಪಂಚದ ಪ್ರತಿಯೊಂದು ಜೀವರಾಶಿಗೂ ಪ್ರಕೃತಿ ಸಾಕಷ್ಟು ಸಂಪನ್ಮೂಲ ಕರುಣಿಸಿದೆ. ಆದರೆ, ಮಾನವರು ಪ್ರಕೃತಿಯನ್ನು ದುರ್ಬಳಕೆ ಮಾಡಿಕೊಂಡು ಹಾನಿಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ. ಬದುಕಿಗೆ ಸಂತೋಷ, ನೆಮ್ಮದಿ ಹೇಗೆ ಮುಖ್ಯವೋ, ಅದೇ ರೀತಿ ಪರಿಸರಕ್ಕೂ ಪೂರಕವಾಗಿ ನಡೆದುಕೊಳ್ಳುವುದು ಮುಖ್ಯವಾಗುತ್ತದೆ ಎಂದರು.ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಐಡಿಎಸ್‌ಜಿ ಕಾಲೇಜಿನ 80ರ ದಶಕದಲ್ಲಿ ಕಳೆದಂತಹ ಸವಿನೆನಪು ಹಾಗೂ ಗೆಳೆಯರನ್ನು ಮರೆಯಲು ಅಸಾಧ್ಯ. ಪ್ರತಿದಿನ ಒಡನಾಡಿಗಳ ಜೊತೆ ತುಂಟಾಟ, ಒಟ್ಟಾಗಿ ಪ್ರವಾಸ ಕೈಗೊಂಡ ದಿನಗಳು ಅವಿಸ್ಮರಣೀಯ ಎಂದು ತಿಳಿಸಿದರು.ಗಿರಿಪ್ರರ್ವತ ಶ್ರೇಣಿಗಳಲ್ಲಿ ಹಸಿರನ್ನು ಹೊದ್ದಿರುವ ಚಿಕ್ಕಮಗಳೂರು ಮಲೆನಾಡು ದೇವತೆ. ಅಯ್ಯನ ಕೆರೆ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ, ಬಿಂಡಿಗ ದೇವಾಲಯ, ದೇವರಮನೆ ಬೆಟ್ಟದ ಸಾಲುಗಳು ಪರಿಸರ ಪ್ರಿಯರನ್ನು ಕೈಬಿಸಿ ಕರೆಯುತ್ತಿದೆ. ಇಂಥ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಜನಿಸಿರುವುದು ಹೆಮ್ಮೆಪಡಬೇಕು ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ ಮಾತನಾಡಿ, ಹಲವಾರು ವರ್ಷಗಳಿಂದ ವಕೀಲ ವೃತ್ತಿಯಲ್ಲಿ ಸೇವೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಹಲವಾರು ಮಂದಿ ಆತ್ಮೀಯರಿದ್ದಾರೆ. ಅವರು ಐಡಿಎಸ್‌ಜಿ ಕಾಲೇಜಿನ ಹಳೇ ವಿದ್ಯಾರ್ಥಿ ಗಳೆಂಬ ಪರಿಚಯವಿರಲಿಲ್ಲ. ಆದರೆ, ಪರಿಷತ್ ಸದಸ್ಯರಾದ ಬಳಿಕ ಎಲ್ಲರೂ ಐಡಿಎಸ್‌ಜಿ ಗೆಳೆಯರ ಬಳಗವೇ ಆಗಿರುವುದು ಖುಷಿ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ನೇಹ ಸೌಹಾರ್ದ ಪರಿಷತ್ ಉಪಾಧ್ಯಕ್ಷ ಜಿ.ಎಸ್.ಚಂದ್ರಪ್ಪ, ಪ್ರಧಾನ ಕಾರ್ಯ ದರ್ಶಿ ಬಿ.ಎಚ್.ಅಲ್ತಾಫ್ ರೆಹಮಾನ್, ಸಹ ಕಾರ್ಯದರ್ಶಿ ಸಿ.ಆರ್.ಶಿವಾನಂದ್, ಖಜಾಂಚಿ ಎಂ.ಎಸ್. ನಟರಾಜ್, ಮಾಜಿ ಅಧ್ಯಕ್ಷರಾದ ಡಿ. ಪಾರ್ಥನಾಥ್, ವಿ.ಎಸ್.ನಾಗೇಶ್‌ಕುಮಾರ್, ಅಶ್ವಕ್ ಅಹ್ಮದ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಖಜಾಂಚಿ ದೀಪಕ್ ಇದ್ದರು.12 ಕೆಸಿಕೆಎಂ 5ಚಿಕ್ಕಮಗಳೂರಿನ ಭುವನೇಂದ್ರ ಶಾಲೆಯಲ್ಲಿ ಭಾನುವಾರ ಐಡಿಎಸ್‌ಜಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸೌಹಾರ್ದ ಪರಿಷತ್ ಹಮ್ಮಿಕೊಂಡಿದ್ದ ಸ್ನೇಹ ಮಿಲನ ಕಾರ್ಯಕ್ರಮವನ್ನು ಭೋಜೇಗೌಡ ಅವರು ಉದ್ಘಾಟಿಸಿದರು. ಸುಜೇಂದ್ರ, ಅನಿಲ್‌ಕುಮಾರ್, ಚಂದ್ರಪ್ಪ ಇದ್ದರು.