ಶಿರಸಿ: ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮಕ್ಕಳ ಪಾಲಕ- ಪೋಷಕರ ಸಹಕಾರ, ಸಹಭಾಗಿತ್ವದಲ್ಲಿ ತಾಲೂಕಿನ ಬಿಸಲಕೊಪ್ಪ ಗ್ರಾಪಂ ವ್ಯಾಪ್ತಿಯ ಉಲ್ಲಾಳಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಬಣ್ಣ ಬಣ್ಣದ ಚಿತ್ತಾರದೊಂದಿಗೆ ಹೊಸ ರೂಪ ಪಡೆದುಕೊಂಡಿದೆ.೭೫ ವಸಂತ ಪೂರೈಸಿ ಯಶಸ್ಸಿನ ಹಾದಿಯತ್ತ ಮುನ್ನಡೆಯುತ್ತಿರುವ ಈ ಶಾಲೆ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ ಶಿಥಿಲಾವಸ್ಥೆಗೆ ತಲುಪಿದ್ದ ಶಾಲೆಗೆ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಮರುಜೀವ ತುಂಬಿದ್ದಾರೆ.
ತಾವು ಕಲಿತ ಶಾಲೆಗೆ ನಮ್ಮೊದೊಂದು ಕಿಂಚಿತ್ತು ಸಹಾಯ ಮಾಡಬೇಕೆನ್ನುವ ಭಾವನೆ ಶಾಲೆಯ ಹಳೆ ವಿದ್ಯಾರ್ಥಿಗಳಲ್ಲಿ ಮೂಡಿದಾಗ, ಇದಕ್ಕೆ ಪ್ರೋತ್ಸಾಹವಾಗಿ ಈ ಹಿಂದಿನ ಮುಖ್ಯ ಶಿಕ್ಷಕ ವಿ.ಡಿ. ಹೆಗಡೆ ಅವರ ಮಾರ್ಗದರ್ಶನದಲ್ಲಿ ಶಾಲೆಗೆ ಬಣ್ಣದ ಚಿತ್ತಾರ ನೀಡಲು ಮುಂದಾದರು.೨೫ ವರ್ಷ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ವಿ.ಡಿ. ಹೆಗಡೆ ಅವರು ತಮ್ಮ ಕನಸಿನ ಶಾಲೆಯನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಬೇಕುನ್ನುವ ಅವರ ಆಸೆ, ಕನಸಿಗೆ ಹೆಗಲುಕೊಟ್ಟು ನಿಂತವರು ಶಾಲೆಯ ಪೂರ್ವ ವಿದ್ಯಾರ್ಥಿಗಳು. ಗುರುಗಳು ಹೇಳಿದ ಮಾತನ್ನು ವಿನಮ್ರತೆಯಿಂದ ಸ್ವೀಕರಿಸಿದ ಶಿಷ್ಯರು, ಶಾಲೆಗೆ ಹೊಸ ರೂಪ ಕೊಡಲು ಮುಂದಾದರು.
ಶಾಲಾ ಸಹ ಶಿಕ್ಷಕಿ ಸಂಧ್ಯಾ ಭಟ್ಟ ಅವರ ಕಲಾ ಕುಂಚದಲ್ಲಿ ಅರಳಿದ ಕಾವಿ ಕಲೆಯ ಚಿತ್ತಾರಗಳು, ಪಾಠ ಪಠ್ಯಕ್ಕೆ ಸಂಬಂಧಿಸಿದ ಚಿತ್ರಗಳು, ರಾಷ್ಟ್ರಪ್ರೇಮದ ಸಂದೇಶಗಳು, ಮಕ್ಕಳ ಮನಸ್ಸಿಗೆ ಖುಷಿ ನೀಡುವಂತ ಗೊಂಬೆಯ ಚಿತ್ತಾರಗಳು ನೋಡುಗರನ್ನು ಕಣ್ಮನ ಸೆಳೆಯುತ್ತಿವೆ.ಶಾಲೆಯ ಪ್ರತಿ ತರಗತಿಯಲ್ಲಿ ಗಾದೆ ಮಾತುಗಳು, ನುಡಿಮುತ್ತುಗಳು ಹಾಗೂ ಬದುಕಿನ ಪಾಠ ತಿಳಿ ಹೇಳುವಂತ ಲೇಖನಗಳನ್ನು ಬರೆಯಲಾಗಿದೆ.ಆಯಾ ತರಗತಿಗಳಿಗೆ ಅನುಗುಣವಾಗಿ ಗೋಡೆ ಬರಹ ಮತ್ತು ಚಿತ್ರವನ್ನು ಬಿಡಿಸಲಾಗಿದೆ. ಅತ್ಯುತ್ತಮ ಶಾಲಾ ಶಿಕ್ಷಕಿಯರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಈ ಹಿಂದೆ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ದೂರವಾಣಿ ಸಂಪರ್ಕ ಮಾಡಲು ಗ್ರಾಮದಲ್ಲಿ ನೆಟವರ್ಕ್ ಸಮಸ್ಯೆ ಇತ್ತು. ಇದೀಗ ಶಾಲೆಯ ಹಿತದೃಷ್ಟಿಯಿಂದ ನೆಟ್‌ವರ್ಕ್ ಬೂಸ್ಟರ್ ಅಳವಡಿಸಲಾಗಿದೆ. ದಾನಿಗಳ ಸಹಾಯದಿಂದ ೨ ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ.ಇಲಾಖೆಯ ನಿರ್ದೇಶನದಂತೆ ಶಾಲಾ ಶಿಕ್ಷಕರು, ಅಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿಗಳ ಪಾಲಕ- ಪೋಷಕರ ಮತ್ತು ಹಳೆಯ ವಿದ್ಯಾರ್ಥಿಗಳು ಜತೆಗೂಡಿ ಶಾಲೆ, ಕಾಂಪೌಂಡ್ ಹಾಗೂ ರಂಗಮಂದಿರಕ್ಕೆ ಬಣ್ಣ ಬಡಿಯುವ ಮೂಲಕ ನಮ್ಮ ಶಾಲೆ ನಮ್ಮೆಲ್ಲರ ಶಾಲೆ ಎಂಬ ಭಾವನೆ ಒಗ್ಗಟ್ಟಿನಲ್ಲಿ ಮೂಡಿತು ಎನ್ನುತ್ತಾರೆ ಮುಖ್ಯಾಧ್ಯಾಪಕಿ ನಾಗವೇಣಿ ಹೆಗಡೆ.ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರು, ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಹಾಯ ಸಹಕಾರ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು.
ಚಿತ್ರಕಥೆ: ಹತ್ತು ಮಾತಿನಲ್ಲಿ ಹೇಳಲಾಗದ್ದು, ಒಂದು ಚಿತ್ರಕಥೆಯ ಅಂತರಾಳವನ್ನು ತೆರೆದಿಡುತ್ತದೆ. ಮಕ್ಕಳಿಗೆ ಚಿತ್ರಗಳ ಮುಖಾಂತರ ಪಾಠ ಹೇಳಿಕೊಟ್ಟಾಗ ಬೇಗ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಶಾಲಾ ಶಿಕ್ಷಕಿ ಸಂಧ್ಯಾ ಭಟ್ಟ ತಿಳಿಸಿದರು.