ಮಾನವರಿಗೆ ಮಾರ್ಗದರ್ಶನ ನೀಡಿದ ಸರ್ವಜ್ಞನ ತ್ರಿಪದಿಗಳು

KannadaprabhaNewsNetwork |  
Published : Feb 21, 2024, 02:05 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಸುಲಭ ಹಾಗೂ ಸರಳ ಭಾಷೆಯಲ್ಲಿ ಕವಿ ಸರ್ವಜ್ಞರು ತ್ರಿಪದಿ ರಚನೆ ಮಾಡುವುದರ ಮೂಲಕ ಮಾನವ ಕುಲಕ್ಕೆ ಮಾರ್ಗದರ್ಶನ ಹಾಗೂ ಸಂದೇಶ ನೀಡಿದ್ದಾರೆ.

ಚಿತ್ರದುರ್ಗ: ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಸುಲಭ ಹಾಗೂ ಸರಳ ಭಾಷೆಯಲ್ಲಿ ಕವಿ ಸರ್ವಜ್ಞರು ತ್ರಿಪದಿ ರಚನೆ ಮಾಡುವುದರ ಮೂಲಕ ಮಾನವ ಕುಲಕ್ಕೆ ಮಾರ್ಗದರ್ಶನ ಹಾಗೂ ಸಂದೇಶ ನೀಡಿದ್ದಾರೆ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ಕುಂಬಾರ ಗುಂಡಯ್ಯ ಮಹಾಸಂಸ್ಥಾನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾವತಿಯಿಂದ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಆಚರಣೆ ಸಮಾರಂಭದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸರ್ವಜ್ಞ ಎಂದರೆ ಎಲ್ಲವನ್ನೂ ಬಲ್ಲವನು, ಎಲ್ಲವನ್ನೂ ತಿಳಿದಿರುವ ವ್ಯಕ್ತಿ ಎಂದರ್ಥ. ತ್ರಿಪದಿಗಳಲ್ಲಿ ಶ್ರೇಷ್ಟ ಜೀವತತ್ವಗಳನ್ನು ಅದ್ಭುತವಾಗಿ ತಿಳಿಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ತ್ರಿಪದಿಗಳನ್ನು ರಚನೆ ಮಾಡಿ, ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ಹಾಗೂ ಸಂದೇಶ ನೀಡಿದ್ದಾರೆ ಎಂದರು.

ಶಿಕ್ಷಕಿ ಗೀತಾ ಭರಮಸಾಗರ ಕವಿ ಸರ್ವಜ್ಞರ ಕುರಿತು ಉಪನ್ಯಾಸ ನೀಡಿ, ಕವಿ ಸರ್ವಜ್ಞರನ್ನು ಸಾರ್ವಕಾಲಿಕ ವ್ಯಕ್ತಿ ಎಂದು ಕರೆಯುತ್ತೆವೆ. ಆತನ ವಿದ್ಯೆ, ವಿನಯ, ಪರಿಪೂರ್ಣತೆಯು ಈ ಲೋಕದ ಡೊಂಕು ತಿದ್ದುವ ದಿಟ್ಟತನ ಹೊಂದಿದೆ. ಸರ್ವವನ್ನು ಬಲ್ಲಂತಹ ತ್ರಿಪದಿಗಳ ಸೃಷ್ಟಿಕರ್ತ ಸರ್ವಜ್ಞ. ಕನ್ನಡದ ಸಾಹಿತ್ಯ, ಪರಂಪರೆ, ಸಾಂಸ್ಕೃತಿಕತೆ ಸರ್ವಜ್ಞರ ಕೊಡುಗೆ ಅಜರಾಮರ. ಸರ್ವಜ್ಞರು ತ್ಯಾಗಿಯಾಗಿ, ಯೋಗಿಯಾಗಿ, ಮಹಾಶಿವಯೋಗಿಯಾಗಿ ಲೋಕಕ್ಕೆ ಅಜರಾಮರವಾಗಿದ್ದಾರೆ ಎಂದು ಬಣ್ಣಿಸಿದರು.

ಸರ್ವಜ್ಞ ಎಂಬುವುದು ಹುಟ್ಟು ಹೆಸರಲ್ಲ. ಅಂದಿನ ರಾಜಾಶ್ರಯದಲ್ಲಿ ನೀಡಿದಂತಹ ಒಂದು ಬಿರುದಾಗಿದೆ. ಕೆಲವೊಂದು ಸಾಹಿತಿಗಳಿಗೆ, ಮೇರು ಕವಿಗಳಿಗೆ ನೀಡುವಂತಹ ಒಂದು ಹೆಸರಾಗಿದೆ. ಅವರ ನಿಜನಾಮ ಪುಷ್ಪದತ್ತ. ಸುಮಾರು ಎರಡು ಸಾವಿರ ತ್ರಿಪದಿಗಳು ಸಿಕ್ಕರೂ ಸರ್ವಜ್ಞನ ಹೆಸರಿನಲ್ಲಿರುವುದು ಒಂದು ಸಾವಿರ ಮಾತ್ರ ಎಂದರು.

ತ್ರಿಪದಿಗಳ ಮೂಲಕ ಕನ್ನಡ ಅಸ್ಮಿತೆಯನ್ನು ಅರ್ಥ ಮಾಡಿಸಿದ , ಸಮಾಜವನ್ನು ತಿದ್ದುವಂತಹ, ಛಾಟಿಯನ್ನು ಬೀಸುವ ಕೆಲಸ ಮಾಡಿದವರು ಸರ್ವಜ್ಞರು. ಸಮಾಜಜ ಒಳಿತಿಗಾಗಿ, ಸಮಾಜಕ್ಕೆ ಹಿಡಿದಿರುವ ರೋಗವನ್ನು ಚಿಕಿತ್ಸೆ ಮೂಲಕ ಗುಣಪಡಿಸಲು ತ್ರಿಪದಿಗಳು ಅತ್ಯವಶ್ಯಕವಾಗಿವೆ ಎಂದು ಹೇಳಿದರು.

ಡಾ.ಬಿ.ತಿಪ್ಪೇಸ್ವಾಮಿ ಮಾತನಾಡಿ, ಕವಿ ಸರ್ವಜ್ಞರು ತ್ರಿಪದಿಗಳ ಮೂಲಕ ನಾಗರಿಕ ಸಮಾಜಕ್ಕೆ ನೈತಿಕ, ಸಾಮಾಜಿಕ ಹಾಗೂ ಧಾರ್ಮಿಕ ವಿಚಾರಗಳ ಪ್ರಚುರ ಪಡಿಸಿದ್ದಾರೆ. ಜಾತಿ, ಮತ, ಪಂಥಗಳ ಬಗ್ಗೆ ಸಮಾಜದ ಅಂಕು-ಡೊಂಕು ತಿದ್ದಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗ ಕುಂಬಾರ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಅಧ್ಯಕ್ಷ ಕೆ.ಚಂದ್ರಪ್ಪ, ಕಾರ್ಯದರ್ಶಿ ಎ.ಎನ್.ಮಹಾಂತೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಯರ್ರಿಸ್ವಾಮಿ, ಕಾರ್ಯದರ್ಶಿ ವೈ.ಮೃತ್ಯುಂಜಯ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾದ ಅಧ್ಯಕ್ಷೆ ಎಸ್.ಬೈಲಮ್ಮ, ಕಾರ್ಯದರ್ಶಿ ಹೇಮಾವತಿ, ಮುಖಂಡರಾದ ಚಂದ್ರಶೇಖರ್ ಮಲ್ಲಿಕಾರ್ಜುನ್, ಜೆಜೆ ಹಟ್ಟಿ ತಿಪ್ಪೇಸ್ವಾಮಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ ಸೇರಿದಂತೆ ಮತ್ತಿತರರು ಇದ್ದರು. ಹೊಸದುರ್ಗದ ಸರಸ್ವತಿ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

ಕವಿ ಸರ್ವಜ್ಞ ಜಯಂತಿ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ ದೇವಸ್ಥಾನದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಆಯೋಜಿಸಲಾದ ಕವಿ ಸರ್ವಜ್ಞರ ಭಾವಚಿತ್ರ ಮೆರವಣಿಗೆಗೆ ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌