ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಿದೇಶಿ ಅಡಕೆ ಆಮದನ್ನು ನಿಷೇಧಿಸಬೇಕು, ತೆಂಗು ಖರೀದಿ ಕೇಂದ್ರವನ್ನು ಪ್ರಾರಂಭಿಸಬೆಕು ಮತ್ತು ಹೊಸ ಅಡಕೆಗೆ ಪ್ರತೀ ಕೆ.ಜಿ.ಗೆ 400 ರು. ಬೆಂಬಲ ಬೆಲೆಯನ್ನು ಘೋಷಿಸಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಮಾ.12ರಂದು ಹಕ್ಕೊತ್ತಾಯ ಪ್ರತಿಭಟನಾ ಜಾಥಾ ನಡೆಯಲಿದೆ ಎಂದು ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಉಪಾಧ್ಯಕ್ಷ ವಲೇರಿಯನ್ ಕುಟಿನ್ಹ ತಿಳಿಸಿದರು.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಅಡಕೆ ಬೆಲೆ ತೀವ್ರ ಕುಸಿತವಾಗಿದ್ದರೂ ಕೇಂದ್ರ ಸರ್ಕಾರ ಆಮದನ್ನು ಸಂಪೂರ್ಣ ನಿರ್ಬಂಧಿಸುವ ಮತ್ತು ಕಳ್ಳ ಸಾಗಾಣಿಕೆಯ ವಿರುದ್ಧ ಕಠಿಣವಾದ ಕಾನೂನನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ. ಅಡಕೆಗೆ ಬೆಂಬಲ ಬೆಲೆಯನ್ನು ಘೋಷಿಸುವಲ್ಲಿ ರಾಜ್ಯ ಸರ್ಕಾರವು ನಿಷ್ಕ್ರಿಯತೆಯನ್ನು ತೋರಿಸುತ್ತಿದೆ ಎಂದು ಹೇಳಿದರು.ಅಡಕೆಗೆ 350 ರು. ಬೆಂಬಲ ಬೆಲೆಯನ್ನು ಘೋಷಿಸಿದ್ದರೂ, ಹೊಸ ಅಡಕೆ, ಹಳೆ ಅಡಕೆ (ಸಿಂಗಲ್-ಡಬಲ್ ಚೋಲ್) ಇದರಲ್ಲಿ ಯಾವುದಕ್ಕೆ ಬೆಂಬಲ ಬೆಲೆಯೆಂದು ಸ್ಪಷ್ಟವಾಗಿ ನಮೂದಿಸದೆ ಇರುವುದರಿಂದ ಅಡಕೆ ಖರೀದಿದಾರರು ರೈತರನ್ನು ವಂಚಿಸುತ್ತಿದ್ದಾರೆ. ರೈತರು ನಿರಂತರ ಅನ್ಯಾಯ, ಶೋಷಣೆಗೆ ಒಳಗಾಗುತ್ತಿದ್ದರೂ ಯಾವುದೇ ಸರ್ಕಾರಗಳು ಈ ಬಗ್ಗೆ ಕಠಿಣವಾದ ಕಾನೂನನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಮೂಡುಬಿದಿರೆಯ ಸಮಾಜ ಮಂದಿರದಿಂದ ತಾಲೂಕು ಕಚೇರಿ ವರೆಗೆ ಹಕ್ಕೊತ್ತಾಯ ಪ್ರತಿಭಟನಾ ಜಾಥಾ ನಡೆಯಲಿದ್ದು, ಶಾಂತಿಪ್ರಸಾದ್ ಹೆಗ್ಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾರ್ಪಾಡಿ ಕಲ್ಲಬೆಟ್ಟು ಗ್ರಾಮ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಕರಿಂಜೆ ಕಿಸಾನ್ ಪ್ರಮುಖರಾದ ಚಂದ್ರಶೇಖರ ಕೋಟ್ಯಾನ್, ಶಿರ್ತಾಡಿ ಗ್ರಾಮ ಸಮಿತಿ ಅಧ್ಯಕ್ಷ ದಯಾನಂದ ಎನ್. ಶೆಟ್ಟಿ, ಪ್ರಗತಿಪರ ಕೃಷಿಕ, ಕಿಸಾನ್ ಪ್ರಮುಖರಾದ ಜೋಯ್ಲಸ್ ಡಿಸೋಜ ಹಾಗೂ ವಸಂತ್ ಭಟ್ ಪಯ್ಯಾಡಿ ಉಪಸ್ಥಿತರಿದ್ದರು.ವಲೇರಿಯನ್ ಕುಟಿನ್ಹ ಅವರು ಕನ್ನಡಪ್ರಭದಲ್ಲಿ ಅಡಕೆ ಆಮದು ಆತಂಕದ ಕುರಿತು ಶನಿವಾರ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿ ಮಾತನಾಡಿದರು.