ಕನ್ನಡಪ್ರಭ ವಾರ್ತೆ ಮಡಿಕೇರಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷವು ಹಮ್ಮಿಕೊಂಡಿರುವ ಕರ್ನಾಟಕಕ್ಕಾಗಿ ನಾವು ಜನಜಾಗೃತಿ ಬೈಕ್ ಜಾಥಾವು ಫೆ.21ರಂದು ಕೊಡಗು ಜಿಲ್ಲೆಗೆ ಆಗಮಿಸಲಿದ್ದು, ಪಕ್ಷದ ಕಾರ್ಯಕರ್ತರು, ಪ್ರಜ್ಞಾವಂತ ನಾಗರಿಕರು ಪಾಲ್ಗೊಳ್ಳುವ ಮೂಲಕ ಬೆಂಬಲಿಸುವಂತೆ ಪಕ್ಷದ ರೈತ ಘಟಕದ ರಾಜ್ಯ ಕಾರ್ಯದರ್ಶಿ ಪ್ರಭುಸ್ವಾಮಿ ಮನವಿ ಮಾಡಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕೆಆರ್‌ಎಸ್ ಪಕ್ಷವು ಫೆ.19ರಿಂದ ಮಾರ್ಚ್ 2ರವರೆಗೆ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ. ಫೆ.21ರಂದು ಜಿಲ್ಲೆಯ ಕುಶಾಲನಗರ, ಮಡಿಕೇರಿ ಪಟ್ಟಣದ ಮುಖಾಂತರ ಜಾಥಾ ಸಾಗಲಿದೆ. ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಅಪರಾಹ್ನ 3 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕ ಸಭೆ ನಡೆಸಲಿರುವುದಾಗಿ ತಿಳಿಸಿದರು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭವಾಗಲಿರುವ ಜಾಥಾವು ರಾಜ್ಯದ 31 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಮಾ. 2ರಂದು ನೆಲಮಂಗಲದಲ್ಲಿ ಸಮಾರೋಪ ಸಮಾವೇಶ ನಡೆಯಲಿದೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಎಲ್ಲ 28 ಕ್ಷೇತ್ರಗಳಲ್ಲಿ ಕೆಆರ್‌ಎಸ್ ಪಕ್ಷ ಸ್ಪರ್ಧಿಸಲಿದೆ. ನಂತರ ನಡೆಯುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಹ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದ ಪ್ರಭುಸ್ವಾಮಿ, ಕೆಆರ್‌ಎಸ್ ಪಕ್ಷದಿಂದ ಮುಂದಿನ ದಿನಗಳಲ್ಲಿ ಬರಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಾಮಾಣಿಕ ಮತ್ತು ನ್ಯಾಯಪರ ವ್ಯಕ್ತಿಗಳಿಗೆ ಮುಕ್ತ ಆಹ್ವಾನ ನೀಡಲಾಗಿದ್ದು, ಸ್ಪರ್ಧಿಸಲು ಆಸಕ್ತಿಯುಳ್ಳವರನ್ನು ಪಕ್ಷಕ್ಕೆ ಸ್ವಾಗತಿಸಿ, ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮ ಕೂಡ ಇದೇ ಸಂದರ್ಭ ನಡೆಯಲಿದೆ ಎಂದರು.ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಎನ್.ಜೆ.ಗಿರೀಶ್, ಎ.ಬಿ.ಪ್ರದೀಶ್ ಸುದ್ದಿಗೋಷ್ಠಿಯಲ್ಲಿದ್ದರು.