27ರಂದು ಶಿರೂರು ಮಠದಲ್ಲಿ ವೈಭವದ ವಿಟ್ಲಪಿಂಡಿ

KannadaprabhaNewsNetwork | Published : Aug 25, 2024 1:47 AM

ಸಾರಾಂಶ

ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವಕ್ಕೆ ವಿಭಿನ್ನ ಮೆರುಗು ನೀಡಿ, ವೈಶಿಷ್ಟಪೂರ್ಣವಾಗಿ ಆಚರಿಸುತಿದ್ದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಹಾಲಿ ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಈ ಬಾರಿಯೂ ವಿಟ್ಲಪಿಂಡಿ ಮಹೋತ್ಸವವನ್ನು ವೈಭವದಿಂದ ಆಚರಿಸಲು ನಿರ್ಧರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಮಹೋತ್ಸವಕ್ಕೆ ವಿಭಿನ್ನ ಮೆರುಗು ನೀಡಿ, ವೈಶಿಷ್ಟಪೂರ್ಣವಾಗಿ ಆಚರಿಸುತಿದ್ದರು. ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಹಾಲಿ ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಈ ಬಾರಿಯೂ ವಿಟ್ಲಪಿಂಡಿ ಮಹೋತ್ಸವವನ್ನು ವೈಭವದಿಂದ ಆಚರಿಸಲು ನಿರ್ಧರಿಸಿದ್ದಾರೆ.

ಆ.27ರಂದು ಶಿರೂರು ಮಠದ ಮುಂಭಾಗದ ಅನ್ನವಿಠಲ ವೇದಿಕೆಯಲ್ಲಿ ಹುಲಿ ವೇಷ, ಜಾನಪದ ವೇಷಗಳ ಕುಣಿತ ಪ್ರದರ್ಶನ, ಪ್ರೋತ್ಸಾಹಧನ ವಿತರಣೆಯನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ, ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಮಠದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಶಿರೂರು ಮಠವೆಂದರೆ ಉಡುಪಿಯ ಸಮಸ್ತ ಹಿಂದೂ ಸಮಾಜ ಬಾಂಧವರಿಗೆ ಬಹಳ ಹತ್ತಿರದ ಮಠ. ಶಿರೂರು ಮಠದ ಯಾವುದೇ ಕಾರ್ಯಕ್ರಮವಾದರೂ ಎಲ್ಲ ಸಮಾಜ ಬಾಂಧವರು ತಮ್ಮ ಕಾರ್ಯಕ್ರಮವೆಂದೇ ಭಾವಿಸಿ ಸ್ವಯಂಪ್ರೇರಿತರಾಗಿ ಬಂದು ಭಾಗವಹಿಸಿ ಸಂಭ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಪೀಠಾಧಿಪತಿ ಶ್ರೀ ವೇದವರ್ಧನತೀರ್ಥರು, ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ನಿಟ್ಟಿನಲ್ಲಿ, ಹಿಂದಿನಿಂದಲೂ ನಡೆದುಕೊಂಡು ಬಂದಂತಹ ವಿಟ್ಲಪಿಂಡಿ ಮಹೋತ್ಸವದ ಈ ಕಾರ್ಯಕ್ರಮವನ್ನು ದೈವಿಕವಾಗಿ ಆಚರಿಸಲು ಸಂಕಲ್ಪಿಸಿದ್ದಾರೆ ಎಂದರು.

ಅಲ್ಲದೆ ಶಿರೂರಿನ ಮೂಲ ಮಠದಲ್ಲಿರುವ ವ್ಯಾಘ್ರ ಚಾಮುಂಡಿ ದೈವದ ಪ್ರೀತಿಗಾಗಿ ಹುಲಿ ವೇಷ ಕುಣಿತ ನಡೆಸಬೇಕೆಂದು ಮಠದ ಪ್ರಶ್ನಾಶಾಸ್ತ್ರದಲ್ಲಿಯೂ ಕಂಡು ಬಂದಿದೆ. ಈ ನಿಟ್ಟಿನಲ್ಲಿ ದೈವದ ಪ್ರೇರಣೆಯಂತೆ ಕೃಷ್ಣನ ಪ್ರೀತಿಗಾಗಿ ಹುಲಿ ವೇಷ ಕುಣಿತ ಸೇವೆಯನ್ನು ನಡೆಸಲು ಶ್ರೀ ವೇದವರ್ಧನತೀರ್ಥರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಶಿರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ, ಶಾಸಕ ಯಶ್ಪಾಲ್ ಸುವರ್ಣರು ಸಂಚಾಲಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ಶ್ರೀ ಮುಖ್ಯಪ್ರಾಣ ಸೇವಾ ಬಳಗದ ಸದಸ್ಯರು ಮತ್ತು ಶಿರೂರು ಮಠದ ಶಿಷ್ಯ ವೃಂದ, ಶ್ರೀಕೃಷ್ಣನ ಭಕ್ತರ ಸಹಕಾರದೊಂದಿಗೆ ಅದ್ದೂರಿಯಾಗಿ ಶ್ರೀ ಕೃಷ್ಣ ಲೀಲೋತ್ಸವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಠದ ಪ್ರಮುಖರಾದ ಶ್ರೀಶ ಕಡೆಕಾರ್, ಮೋಹನ್ ಭಟ್ ಉಪಸ್ಥಿತರಿದ್ದರು.

------5 ಲಕ್ಷ ರು.ಗಳ ನೋಟಿನ ಮಾಲೆ ಬಹುಮಾನ

ಈ ಬಾರಿಯ ವಿಟ್ಲಪಿಂಡಿ ಮಹೋತ್ಸವದಲ್ಲಿ ಒಟ್ಟು 5 ಲಕ್ಷ ರು. ಹಣವನ್ನು ವೇಷಧಾರಿಗಳಿಗೆ ನೀಡಲು ಮಾಲೆಯನ್ನು ನಿರ್ಮಿಸಲಾಗುತ್ತಿದೆ. 20, 50, 100, 200 ರು.ಗಳ ನೋಟುಗಳ ಮಾಲೆಗಳನ್ನು ತಯಾರಿಸಲಾಗುತ್ತಿದ್ದು, ಒಂದು ಮಾಲೆ 5000 ರು.ಗಳ ಬಹುಮಾನವನ್ನು ಹೊಂದಿರುತ್ತದೆ.

Share this article