7 ರಂದು ರೈತ ಸಂಘದಿಂದ ಬೆಳಗಾವಿಯಲ್ಲಿ ಹೋರಾಟ- ವಿಜಯಕುಮಾರ ಸುಂಕದ

KannadaprabhaNewsNetwork | Published : Dec 3, 2023 1:00 AM

ಸಾರಾಂಶ

ರೈತರ ವಿವಿಧ ಬೇಡಿಕೆಗಳನ್ನು ಹಾಗೂ ಜಿಲ್ಲೆಯ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಡಿ. 7 ರಂದು ಬೆಳಗಾವಿಯ ಸುವರ್ಣಸೌಧದ ಎದುರಿಗೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಗದಗ: ರೈತರ ವಿವಿಧ ಬೇಡಿಕೆಗಳನ್ನು ಹಾಗೂ ಜಿಲ್ಲೆಯ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಡಿ. 7 ರಂದು ಬೆಳಗಾವಿಯ ಸುವರ್ಣಸೌಧದ ಎದುರಿಗೆ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ ಸುಂಕದ ಹೇಳಿದರು.

ಅವರು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತೀವ್ರ ಬರಗಾಲದಿಂದ ಜಿಲ್ಲೆಯ ರೈತರು, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೆಳೆ ಸಾಲ ಮನ್ನಾ ಮಾಡಬೇಕು.

ರೈತರ ಬೆಳೆಗಳಿಗೆ ನಿರ್ದಿಷ್ಟ ಬೆಲೆ ನಿಗದಿಪಡಿಸಿ ಶಾಶ್ವತ ಕೇಂದ್ರವನ್ನು ಸ್ಥಾಪಿಸಬೇಕು. ಸಿಂಗಟಾಲೂರ ಏತ ನೀರಾವರಿ ಹಲವಾರು ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಅದನ್ನು ಪೂರ್ಣಗೊಳಿಸಲು ಸರ್ಕಾರ ಮುಂದಾಗಬೇಕು. ಬ್ಯಾಂಕ್ ಅಧಿಕಾರಿಗಳು ಸಾಲ ತುಂಬುವಂತೆ ರೈತರ ಮನೆ ಬಾಗಿಲಿಗೆ ಬಂದು ಒತ್ತಾಯಿಸುತ್ತಿದ್ದಾರೆ. ಮಹೇಂದ್ರ ಮತ್ತು ಸುಂದರಂ ಕಂಪನಿಯ ಅಧಿಕಾರಿಗಳು ಟ್ರ್ಯಾಕ್ಟರ್ ಜಪ್ತಿ ಮಾಡುತ್ತಿದ್ದಾರೆ. ಸಂಕಷ್ಟದ ಬರಗಾಲದಲ್ಲಿ ರೈತರ ನೋವುಗಳಿಗೆ ಸರಕಾರ ಸ್ಪಂದಿಸಬೇಕು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕೆಂದು ಆಗ್ರಹಿಸಿದ ಅವರು ಅವಳಿ ನಗರದಲ್ಲಿ 24*7 ಕುಡಿಯುವ ನೀರಿನ ಯೋಜನೆ ಅಪೂರ್ಣಗೊಂಡಿದ್ದು ಕೂಡಲೇ ಪೂರ್ಣಗೊಳಿಸಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ವಸತಿ ಗೃಹಗಳು ಇಲ್ಲದೆ ಇರುವದರಿಂದ ಮತ್ತು ರೈತರಗಾಗಿ ಇರುವ ರೈತ ಭವನವನ್ನು ಬೇರೆ ಇಲಾಖೆಗೆ ನೀಡಿದ್ದು ಖಂಡನೀಯವಾಗಿದೆ ಅದನ್ನು ರೈತ ಸಮುದಾಯ ಉಪಯೋಗಿಸುವಂತೆ ರೈತ ಭವನವನ್ನು ಬಿಟ್ಟುಕೊಡಬೇಕು. ಬರಗಾಲದಿಂದ ತತ್ತರಿಸುವ ರೈತರಿಗೆ ಎಕರೆಗೆ 30 ಸಾವಿರ ರು.ಗಳಂತೆ ಪರಿಹಾರ ನೀಡಬೇಕು. ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದಂತೆ ಕಾಂಗ್ರೆಸ್ ಸರ್ಕಾರ ರೈತರಿಗೆ 10 ಗಂಟೆ ವಿದ್ಯುತ್ ನೀಡಬೇಕು. ತೋಟದ ಮನೆಗೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು. ಹಿರಿಯ ರೈತರಿಗೆ 5 ಸಾವಿರ ಪಿಂಚಣಿ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳು ಈಡೇರಿಸುವಂತೆ ಹೋರಾಟ ಮಾಡಲಾಗುವುದು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ಅವರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಅಪ್ಪಣ್ಣ ಬಿಂಗಿ, ಬಸವರಾಜ ಬಾಳೆಕಾಯಿ, ಸೈಯದ್ ಮುಲಾ, ಈರಣ್ಣ ಹಂಡಿ, ಬದ್ಯಪ್ಪ ಲಮಾಣಿ, ಪಾಂಡು ಸೋಮರೆಡ್ಡಿ, ಅಕ್ಕಮ್ಮ ಹೊಸಮನಿ ತುಕಾರಾಂ ಗೋಧಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this article