ಕನ್ನಡಪ್ರಭ ವಾರ್ತೆ ನಂಜನಗೂಡುದಲಿತರ ಕೋಟಾದಿಂದ ಕೆನೆ ಪದರವನ್ನು ಹೊರಗಿಡುವ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಸಲಹೆಯನ್ನು ಅನೂರ್ಜಿತಗೊಳಿಸಲು ಕೇಂದ್ರ ಸರ್ಕಾರ ವಿಶೇಷ ಶಾಸನ ರೂಪಿಸಲು ಮುಂದಾಗಬೇಕು ಎಂದು ಸಂಸದ ಸುನಿಲ್ ಬೋಸ್ ಆಗ್ರಹಿಸಿದರು.ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಗೃಹ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಮಾಜದಲ್ಲಿ ಅಸ್ಪೃಶ್ಯತೆ ದೂರವಾಗಿಲ್ಲ, ಅಸ್ಪೃಶ್ಯತೆ ದೂರವಾಗುವವರೆಗೂ ಸಹ ಎಸ್ಸಿ, ಎಸ್ಟಿ, ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯಗಳು ಮುಂದುವರೆಯಬೇಕು. ಒಂದು ವೇಳೆ ಕೆನೆ ಪದರ ಸುಪ್ರೀಂ ಕೋರ್ಟ್ ಸಲಹೆ ಅಳವಡಿಸಿಕೊಂಡಲ್ಲಿ ಎಸ್ಸಿ, ಎಸ್ಟಿ ವರ್ಗದ ಜನರು ಐಎಎಸ್, ಎಪಿಎಸ್, ಐಎಫ್ಎಸ್ ರಂತಹ ಉನ್ನತ ಮಟ್ಟದ ಉದ್ಯೋಗಗಳು ದೊರೆಯದೆ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ವಿಶೇಷ ಶಾಸನ ರೂಪಿಸಬೇಕೆಂದು ಸದನದಲ್ಲೂ ಚೆರ್ಚೆ ನಡೆಸಿ ಒತ್ತಾಯಿಸಲಾಗಿದೆ ಎಂದು ಹೇಳಿದರು.ನಂಜನಗೂಡು-ಗುಂಡ್ಲುಪೇಟೆ ರಸ್ತೆ ವಿಸ್ತರಣೆನಂಜನಗೂಡು-ಗುಂಡ್ಲುಪೇಟೆ ಮಾರ್ಗವಾಗಿ ಕೇರಳ, ಸುಲ್ತಾನ್ ಬತ್ತೇರಿ, ಸೇರಿದಂತೆ ನೆರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವ ಕಾರಣ ವಾಹನ ದಟ್ಟಣೆ ಅಧಿಕವಾಗಿ ರಸ್ತೆಯಲ್ಲಿ ಅಪಘಾತ ಸಂಖ್ಯೆಗಳೂ ಅಧಿಕವಾಗುತ್ತಿದೆ ಆದ್ದರಿಂದ ನಂಜನಗೂಡಿನಿಂದ ಗುಂಡ್ಲುಪೇಟೆ ರಸ್ತೆಯನ್ನು ಅಗಲೀಕರಣಗೊಳಿಸಿ ಚತುಷ್ಪತ ರಸ್ತೆಯನ್ನಾಗಿ ರೂಪಿಸಿದರು.ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮಪಟ್ಟಣದ ಆರ್.ಪಿ. ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್ ವೇಳೆ ಸಂಚಾರ ದಟ್ಟಣೆ ಅಧಿಕಗೊಳ್ಳಲಿದೆ, ಆದ್ದರಿಂದ ಆರ್.ಪಿ. ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು, ಜೊತೆಗೆ ರೇಲ್ವೆ ಅಂಡರ್ ಪಾಸ್ ರಸ್ತೆಯನ್ನು ಸರಿಪಡಿಸಲು ಕ್ರಮವಹಿಸುವಂತೆ ರೈಲ್ವೆ ಉನ್ನತಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.ನಗರಸಭೆ ಅಧಿಕಾರ ಹಿಡಿಯಲು ಯತ್ನ ಎಲ್ಲ ಪಕ್ಷದವರಿಗೂ ಕೂಡ ಅಧಿಕಾರ ಹಿಡಿಯಬೇಕು ಎಂಬ ಹಂಬಲವಿರುತ್ತದೆ, ಅಂತೆಯೇ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವ ಸಲುವಾಗಿ ಸಕಲ ಪ್ರಯತ್ನ ನಡೆಸಲಾಗಿದೆ. ಪಕ್ಷದಲ್ಲಿ ಹಲವಾರು ಜನರು ಆಕಾಂಕ್ಷಿಗಳಿದ್ದು ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಅವರೊಂದಿಗೆ ಚರ್ಚೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬರನ್ನು ಅಂತಿಮಗೊಳಿಸಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸಲಾಗಿದೆ ಎಂದರು.ಮುಖಂಡರಾದ ಇಂಧನ್ ಬಾಬು, ಮಹದೇವಪ್ಪ, ವಿಶ್ವಕರ್ಮ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್, ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ತಾಪಂ ಮಾಜಿ ಸದಸ್ಯ ಚಾಮರಾಜು, ಜಿಪಂ ಮಾಜಿ ಸದಸ್ಯರಾದ ಕೆ.ಬಿ. ಸ್ವಾಮಿ, ಚೋಳರಾಜು, ವಕೀಲರಾದ ಶಿವಬಸಪ್ಪ, ನಗರಸಭಾ ಸದಸ್ಯ ಶ್ರೀಕಂಠಸ್ವಾಮಿ, ಯೋಗೀಶ್, ಮುಖಂಡರಾದ ಎನ್.ಟಿ. ಗಿರೀಶ್, ನಂಜುಂಡಸ್ವಾಮಿ, ಅಜ್ಗರ್, ನಗರ್ಲೆ ಗುರುಪಾದಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಇದ್ದರು.