ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಕೊಳವೆಬಾವಿಯಲ್ಲಿ ಬಿದ್ದ ಮಗ ಸಾತ್ವಿಕ್ ಸುರಕ್ಷಿತವಾಗಿ ಹೊರಬಂದಿದ್ದಕ್ಕೆ ತಂದೆ ಖುಷಿಗೆ ಪಾರವೇ ಇರಲಿಲ್ಲ. ಸಾವನ್ನೇ ಜಯಿಸಿದ ಮಗನಿಗಾಗಿ ತಂದೆಗೆ ಅದೊಂದು ಯುದ್ಧವನ್ನೇ ಜಯಿಸಿದಂತಾಗಿತ್ತು. ಆದರೆ, ಬೆಳಕಿನ ಬುಡಕ್ಕೆ ಕತ್ತಲೆ ಎಂಬಂತೆ ಮಗನ ರಕ್ಷಣೆಗಾಗಿ ಅಗೆದ ಭೂಮಿಯನ್ನು ಲಕ್ಷ ಲಕ್ಷ ಖರ್ಚು ಮಾಡಿ ಮುಚ್ಚಬೇಕು ಎಂಬ ಚಿಂತೆ ಇದೆ ತಂದೆಯನ್ನು ಈಗ ಬಾಧಿಸತೊಡಗಿದೆ. ಇದರ ಮಧ್ಯೆ ಅವಘಡಕ್ಕೆ ಕಾರಣವಾದ ರೈತನ ಮೇಲೆ ಹಾಗೂ ಬೋರ್ವೆಲ್ ಕೊರೆದು ಮುಚ್ಚಳ ಹಾಕದೇ ಹಾಗೆ ಬಿಟ್ಟಿರುವ ಬೋರ್ವೆಲ್ ಏಜೆನ್ಸಿ ಮೇಲೆ ಎಫ್ಐಆರ್ ದಾಖಲು ಮಾಡುವಂತೆ ಜಿಲ್ಲಾಡಳಿತ ಸಹಿತ ಸೂಚನೆ ನೀಡಿದೆ. ಹೀಗಾಗಿ ಸಾತ್ವಿಕ ತಂದೆ ಸತೀಶಗೆ ಈಗ ನುಂಗಲಾರದ ಸಂಕಟವೊಂದು ಆವರಿಸಿದೆ.
ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಹೊರಬಂದ ಮಗನೊಂದಿಗೆ ಹೆತ್ತಮ್ಮ ಪೂಜಾ ಸಂಭ್ರಮದಿಂದ ಇದ್ದಾರೆ. ಮಗ ವಾಪಸ್ ಕೈಗೆ ಸಿಕ್ಕ ಎಂಬ ಕಾರಣಕ್ಕೆ ಖುಷಿಯಲ್ಲಿದ್ದ ತಂದೆ ಸತೀಶ ಅವರಿಗೆ ಎಫ್‌ಐಆರ್ ಸಂಕಟ ತಂದಿದೆ. ಮಗ ಕೊಳವೆಬಾವಿಗೆ ಬಿದ್ದಾಗ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತ ಸುಮಾರು ಒಂದು ಎಕರೆಯಷ್ಟು ಜಮೀನನ್ನು ಅಗೆದಿದೆ. ಇದರಿಂದ ಅಗೆದ ಜಮೀನಿನಲ್ಲಿ ಕಂದಕ ಸೃಷ್ಟಿಯಾಗಿದ್ದರೆ, ಅಗೆದ ಮಣ್ಣು ಹಾಕಿದ ಸ್ಥಳದಲ್ಲಿ ಗುಡ್ಡೆಯೇ ನಿರ್ಮಾಣವಾಗಿದೆ. ಹೀಗಾಗಿ ಇದನ್ನೆಲ್ಲ ಮರಳಿ ಮುಚ್ಚುವ ಶಕ್ತಿ ಆತನಿಗಿಲ್ಲ. ಇದ್ದ ಎರಡೂವರೆ ಎಕರೆ ಜಮೀನಿನಲ್ಲಿ ಒಂದೂವರೆ ಎಕರೆ ಹೀಗೆ ಹಾಳಾಗಿ ಹೋದರೆ ಮುಂದಿನ ಜೀವನ ಹೇಗೆ? ಅದನ್ನೆಲ್ಲ ಮುಚ್ಚಿಸಲು ಖರ್ಚಾಗುವ ಲಕ್ಷಾಂತರ ರುಪಾಯಿ ಹಣ ಎಲ್ಲಿಂದ ತರಬೇಕು ಎಂಬ ಚಿಂತೆ ಕಾಡತೊಡಗಿದೆ. ಅಲ್ಲದೆ ಮಳೆ ಬಂದಾಗ ಇಡಿ ಕ್ವಾರಿ ನೀರು ತುಂಬಿ ನಿಲ್ಲುವುದರಿಂದ ಮತ್ತೇನು ಅನಾಹುತ ಆಗುತ್ತದೋ ಎಂಬ ಭಯ ಕೂಡ ಸತೀಶ ಕುಟುಂಬವನ್ನು ಕಾಡುತ್ತಿದೆ.ರೈತ ಹಾಗೂ ಏಜೆನ್ಸಿ ಮೇಲೆ ಎಫ್‌ಐಆರ್:
ಬೋರ್‌ವೆಲ್ ಕೊರೆಯಬೇಕಾದರೆ ಆಯಾ ತಾಲೂಕು ಆಡಳಿತಗಳಿಂದ ಅನುಮತಿ ಪಡೆದು ಕೊಳವೆಬಾವಿ ಕೊರೆಯಬೇಕು. ಜತೆಗೆ ಎಲ್ಲ ಸುರಕ್ಷತಾ ಕ್ಷಮಗಳನ್ನು ಕೈಗೊಳ್ಳಬೇಕು. ಆದರೆ, ಇದ್ಯಾವುದೂ ಇಲ್ಲಿ ಆಗಿಲ್ಲದ ಕಾರಣ ಅವಘಡಕ್ಕೆ ಕಾರಣವಾದ ರೈತನ ಮೇಲೆ ಹಾಗೂ ಬೋರ್ವೆಲ್ ಕೊರೆದು ಮುಚ್ಚಳ ಹಾಕದೇ ಬಿಟ್ಟಿರುವ ಬೋರ್‌ವೆಲ್ ಏಜೆನ್ಸಿಯ ಮೇಲೆ ಎಫ್‌ಐಆರ್ ಮಾಡುವಂತೆ ಸೂಚಿಸಲಾಗಿದೆ. ಈ ಮೂಲಕ ನಿರ್ಲಕ್ಷ್ಯ ತೋರಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಭೂಬಾಲನ್ ತಿಳಿಸಿದ್ದಾರೆ.ಜಿಲ್ಲಾಡಳಿತದ ನಿಲುವೇನು?:
ರೈತರು ಸಾರ್ವಜನಿಕರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸುವುದರಿಂದ ಈ ರೀತಿಯ ಅವಘಡಗಳು ಆಗುತ್ತಿವೆ. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು. ನಾವು ಏನೇ ಮಾಡಿದರೂ ಅದು ಕಾನೂನಿನ ಪ್ರಕಾರವೇ ಮಾಡಬೇಕಾಗುತ್ತದೆ. ಹಾಗಾಗಿ ನಿಯಮದ ಪ್ರಕಾರ ನಾವು ರೈತ ಮತ್ತು ಏಜೆನ್ಸಿ ಮೇಲೆ ದೂರು ದಾಖಲು ಮಾಡಿಕೊಳುತ್ತೇವೆ. ಜೀವ ಬದುಕಿಸುವ ಕೆಲಸ ಮಾಡಿದ್ದೇವೆ. ಮುಂದಿನದು ರೈತ ತನ್ನ ಜಮೀನನ್ನು ತಾನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ತಪ್ಪು ಮಾಡದಂತೆ ಯಾರಿಗೂ ಜವಾಬ್ದಾರಿ ಬರುವುದಿಲ್ಲ ಎಂದು ಜಿಲ್ಲಾಡಳಿತ ಹೇಳುತ್ತದೆ.----
ಮಗು ಬದುಕಿದ್ದು ಪವಾಡವೇ ಸರಿ!ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಪವಾಡವೋ ಅಥವಾ ಆ ಪುಟ್ಟ ಬಾಲಕನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯೋ ಅಥವಾ ಕಂದಮ್ಮನ ಧೈರ್ಯವೋ ಒಟ್ಟಿನಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಒಂದೂವರೆ ವರ್ಷದ ಸಾತ್ವಿಕ ಬದುಕಿ ಬಂದಿದ್ದಾನೆ. ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನೊಬ್ಬ ಕೊಳವೆಬಾವಿಗೆ ಬಿದ್ದಿದ್ದ ಪ್ರಕರಣ ರಾಜ್ಯ ಮಾತ್ರವಲ್ಲ, ಇಡೀ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಅಂದು ಸಂಜೆಯಿಂದಲೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಪಂ, ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಸೇರಿದಂತೆ ಸಂಬಂಧಿತ ಎಲ್ಲ ಇಲಾಖೆಗಳ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬರೋಬ್ಬರಿ 20 ಗಂಟೆಗಳಲ್ಲಿ 20 ಅಡಿ ಅಗೆದು ಗುರುವಾರ ಮಗುವನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಆದರೆ, ಚಿಕ್ಕ ಕೊಳವೆಬಾವಿಯಲ್ಲಿ ಅದು 40 ಡಿಗ್ರಿ ತಾಪಮಾನದಲ್ಲಿ ಮಗು ಒಳಗಡೆ 20 ಗಂಟೆಗಳ ಕಾಲ ಇದ್ದು ಬದುಕಿ ಬಂದಿದ್ದು ಪವಾಡವೇ ಸರಿ.
---------ವೈದ್ಯಕೀಯ ಲೋಕಕ್ಕೆ ಅಚ್ಚರಿ
ಅದೃಷ್ಟವೆಂಬಂತೆ ಕೊಳವೆಬಾವಿಯಲ್ಲಿ ಸುಮಾರು 20 ಗಂಟೆಗಳ ಕಾಲ ತಲೆಕೆಳಗಾಗಿ ಬಿದ್ದ ಮಗುವಿನ ಆರೋಗ್ಯದಲ್ಲಿ ಸ್ವಲ್ಪವೂ ಏರುಪೇರಾಗಿಲ್ಲ. ಮಗುವಿನ ದೇಹದ ಒಂದೇ ಒಂದು ಭಾಗದಲ್ಲೂ ಸಮಸ್ಯೆ ಕಾಣಿಸಿಲ್ಲ. ನನ್ನ ಸೇವಾವಧಿಯಲ್ಲೇ 20 ಗಂಟೆ ತಲೆಕೆಳಗಾಗಿ ಇರುವ ಮಗು ಇಷ್ಟು ಆರೋಗ್ಯವಂತನಾಗಿರುವುದನ್ನು ನಾನು ಕಂಡಿಲ್ಲ. ಇದೊಂದು ವೈದ್ಯಕೀಯ ಲೋಕದ ವಿಚಿತ್ರವೇ ಎನ್ನಬಹುದಾಗಿದೆ ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಶಿವಾನಂದ ಮಾಸ್ತಿಹೊಳಿ.-------
ಆಟವಾಡುತ್ತಿರುವ ಸಾತ್ವಿಕ್ದೊಡ್ಡ ಗಂಡಾಂತರದಿಂದ ಪಾರಾಗಿ ಬಂದಿರುವ ಸಾತ್ವಿಕ್ ಆಸ್ಪತ್ರೆಯಲ್ಲಿದ್ದಾಗಲೇ ತನ್ನ ಚೇಷ್ಟೆಗಳ ಮೂಲಕ ಆಟವಾಡುತ್ತಿದ್ದಾನೆ. ತಾಯಿ ಮಡಿಲಿನಲ್ಲಿ ಖುಷಿ ಖುಷಿಯಾಗಿದ್ದು, ಉಪಹಾರವನ್ನೂ ಸೇವಿಸುತ್ತಿದ್ದಾನೆ. ಜೊತೆಗೆ ತನಗೆ ಉಪ್ಪಿಟ್ಟು(ಖಾರಾಬಾತ್) ಬೇಕು ಎಂದು ಹಠ ಕೂಡ ಹಿಡಿದು ಸೇವಿಸಿದ್ದಾನೆ.
-----ಕೋಟ್:
ಈಗಾಗಲೇ ಅಗೆದಿರುವ ಕ್ವಾರಿಯನ್ನು ಸರ್ಕಾರವೇ ಮುಚ್ಚಿಸಬೇಕು. ನಾನು ತುಂಬ ಬಡವನಾಗಿದ್ದು, ಲಕ್ಷ ಲಕ್ಷ ಹಣ ಖರ್ಚು ಮಾಡಿ ಅದನ್ನು ಮುಚ್ಚಿಸಲು ಸಾಧ್ಯವಿಲ್ಲ. ಮೊದಲೇ ಬರಗಾಲದ ಸಮಯದಲ್ಲಿ ಸಾಲ ಮಾಡಿಕೊಂಡಿದ್ದು, ಅದನ್ನೂ ತುಂಬಲಾರದ ಸ್ಥಿತಿಗೆ ಬಂದಿದ್ದೇನೆ. ದಯಮಾಡಿ ಜಿಲ್ಲಾಡಳಿತ ದೊಡ್ಡ ಮನಸ್ಸು ಮಾಡಿ ಜಮೀನಿನಲ್ಲಿನ ಕ್ವಾರಿಯನ್ನು ಮುಚ್ಚಿಸಿ ಅನುಕೂಲ ಮಾಡಿಕೊಡಬೇಕಿದೆ.-ಸತೀಶ ಮುಜಗೊಂಡ, ಸಾತ್ವಿಕ ತಂದೆ
----------ಇದು ರೈತ ಮಾಡಿದ ತಪ್ಪಿನಿಂದ ಆಗಿರುವ ಘಟನೆ. ಮಗು ಬಿದ್ದಾಗ ಜಿಲ್ಲಾಡಳಿತ ಮಾಡಬೇಕಿದ್ದ ಕ್ರಮ ಕೈಗೊಂಡು ಸಾಕಷ್ಟು ಹಣ ಖರ್ಚುಮಾಡಿ ಮಗುವನ್ನು ಬದುಕಿಸಿದೆ. ಈ ಖರ್ಚು ವೆಚ್ಚವನ್ನು ರೈತನಿಂದಲೇ ವಸೂಲಿ ಮಾಡಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಅಗೆದಿರುವ ಜಾಗವನ್ನು ನಾವು ಮುಚ್ಚಿಸಲು ಆಗುವುದಿಲ್ಲ. ಅದನ್ನು ರೈತನೇ ಮುಚ್ಚಿಸಿಕೊಳ್ಳಬೇಕು.
-ಟಿ.ಭೂಬಾಲನ್, ಜಿಲ್ಲಾಧಿಕಾರಿ.