ಬ್ಯಾಡಗಿ: ಪ್ರಧಾನಿ ನರೇಂದ್ರ ಮೋದಿ ಆಡಳಿತ ಭಾರತದಲ್ಲಿ ಮೆಚ್ಚುಗೆ ಗಳಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಮೋದಿ ಆಡಳಿತಕ್ಕೆ ಬರುವುದು ಖಚಿತ ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಶಿವಯೋಗಿ ಶಿರೂರು ತಿಳಿಸಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ತಾಲೂಕು ಬಿಜೆಪಿ ಘಟಕ ಹಾಗೂ ವಿವಿಧ ಮೋರ್ಚಾಗಳ ಆಶ್ರಯದಲ್ಲಿ ವಿಕಸಿತ ಭಾರತ ಮೋದಿ ಗ್ಯಾರಂಟಿ ಯೋಜನೆಗಳ ಕರಪತ್ರ ಮನೆಮನೆಗೂ ಹಂಚುವ ಮೂಲಕ ಪ್ರಚಾರ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.ನರೇಂದ್ರ ಮೋದಿ ಭಾರತ ಕಂಡ ಮಹಾನ್ ವ್ಯಕ್ತಿಯಾಗಿದ್ದು, ವಿಶ್ವವೇ ತಿರುಗಿ ನೋಡುವಷ್ಟು ಶಕ್ತಿಯಾಗಿದ್ದಾರೆ. ಬಡವರಿಗೆ ಬೆಳಕಾಗಿ ಹಿಂದುಳಿದವರಿಗಾಗಿ ಕಲ್ಯಾಣ ಕಾರ್ಯಕ್ರಮ ಹಾಕಿಕೊಂಡಿದ್ದು, ಜಾತಿ ವರ್ಗ ಬೇಧವಿಲ್ಲದೆ ಎಲ್ಲರಿಗೆ ನ್ಯಾಯ ಒದಗಿಸಿದ ಧೀಮಂತ ನಾಯಕರಾಗಿರುವ ಮೋದಿ ಮತ್ತೊಮ್ಮೆ ಆಯ್ಕೆಗೊಳಿಸೋಣವೆಂದರು.
ಬಡವರಿಗೆ ಕಡಿಮೆ ದರದಲ್ಲಿ ಸಿಲಿಂಡರ್, ಗ್ರಾಮೀಣ ಪ್ರದೇಶಕ್ಕೆ ಬೆಳಕು ಯೋಜನೆ, ರೈತರಿಗೆ ಕೃಷಿ ಸಮ್ಮಾನ ಮೂಲಕ ₹6 ಸಾವಿರ ಗ್ರಾಮೀಣ ಪ್ರದೇಶಗಳಿಗೆ ರಸ್ತೆ, ಬಡವರ ಆಶ್ರಯ ಮನೆಗಳಿಗೆ ಆದ್ಯತೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳಿಂದ ರೇಲ್ವೆ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಸಾಕಷ್ಟು ಹೊಸ ರೈಲುಗಳ ಆರಂಭ, ಹೊಸ ಹಳಿ ನಿರ್ಮಾಣ, ವಿದ್ಯುತ್ ರೈಲುಗಳ ಸಂಚಾರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದಾರೆ ಎಂದರು.ಯುವ ಮುಖಂಡ ವಿಜಯ ಭರತ ಬಳ್ಳಾರಿ ಮಾತನಾಡಿ, ಹಿಂದಿನ ಬಿಜೆಪಿ ಶಾಸಕರ ಅವಧಿಯಲ್ಲಿ ತಾಲೂಕಿನಲ್ಲಿ ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಎಲ್ಲ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ, ಆಣೂರು, ಬುಡಪನಹಳ್ಳಿ ಕೆರೆ ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆ ಇತ್ಯಾದಿಗಳು ನಡೆದಿವೆ ಎಂದರು.
ಈ ವೇಳೆ ಪುರಸಭೆ ಸದಸ್ಯ ವಿನಯಕುಮಾರ ಹಿರೇಮಠ, ಸುಭಾಸ ಮಾಳಗಿ, ಹಾಲೇಶ ಜಾಧವ, ವಿಷ್ಣುಕಾಂತ ಬೆನ್ನೂರು, ಜಿತೇಂದ್ರ ಸುಣಗಾರ, ನಿಂಗಪ್ಪ ಬಟ್ಟಿಲಕಟ್ಟಿ, ಪರಶುರಾಮ ಉಜನಿಕೊಪ್ಪ ಇದ್ದರು.