ಒಮ್ಮೆ ಅವಕಾಶ ಕೊಡಿ, ಪ್ರಾಮಾಣಿಕ ಸೇವೆ ಮಾಡುವೆ: ಪ್ರಭಾ ಮಲ್ಲಿಕಾರ್ಜುನ

KannadaprabhaNewsNetwork | Published : Apr 15, 2024 1:20 AM

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈಗ ನನಗೆ ಮತಹಾಕಿ ಗೆಲ್ಲಿಸಿದರೆ ಕೇಂದ್ರದಿಂದಲೂ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವೆ.

ಹರಪನಹಳ್ಳಿ: ನನಗೆ ಒಮ್ಮೆ ಅವಕಾಶ ಕೊಡಿ, ಪ್ರಾಮಾಣಿಕ ಸೇವೆ ಮಾಡುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತದಾರರಲ್ಲಿ ಮನವಿ ಮಾಡಿದರು.

ಅವರು ತಾಲೂಕಿನ ದುಗ್ಗಾವತ್ತಿ, ಕಡತಿ, ನಿಟ್ಟೂರು ಮುಂತಾದ ಗ್ರಾಮಗಳಲ್ಲಿ ಭಾನುವಾರ ಮತಯಾಚನೆ ಮಾಡಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈಗ ನನಗೆ ಮತಹಾಕಿ ಗೆಲ್ಲಿಸಿದರೆ ಕೇಂದ್ರದಿಂದಲೂ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವೆ ಎಂದು ಅವರು ತಿಳಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರ ಅಭಿವೃದ್ಧಿ ಹೊಂದಬೇಕಾದರೆ ಕಾಂಗ್ರೆಸ್‌ ಗೆ ಮತ ನೀಡಿ, ರೈತರ ಸಮಸ್ಯೆಗಳನ್ನು ಬಗೆಹರಿಸುವೆ ಒಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವೆ ಎಂದು ಹೇಳಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ಈ ಭಾಗದಲ್ಲಿ ₹279 ಕೋಟಿ ಅನುದಾನ ತಂದು 107 ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿದ್ದೇನೆ. ಕಾರ್ಮಿಕ ಇಲಾಖೆಯಿಂದ 1200 ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. 1050 ಫಲಾನುಭ‍ವಿಗಳಿಗೆ ಬೆಸ್ಕಾಂನಿಂದ ಅಕ್ರಮ ಸಕ್ರಮ ಮಾಡಿಸಿಕೊಟ್ಟಿದ್ದೇನೆ. ಒಟ್ಟಿನಲ್ಲಿ ವಿವಿಧ ಅಭಿವೃದ್ಧಿ ಜೊತೆಗೆ ಕಾಂಗ್ರೆಸ್‌ ಸರ್ಕಾರ ಮಹಿಳೆಯರನ್ನು ಸಬಲರನ್ನಾಗಿ ಮಾಡಿದೆ ಎಂದು ಅವರು ತಿಳಿಸಿದರು.

ಹರಪನಹಳ್ಳಿ ಕ್ಷೇತ್ರಕ್ಕೆ ಹಂತ ಹಂತವಾಗಿ ಇನ್ನು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಗುರಿ ಹೊಂದಲಾಗಿದೆ. ಡಾ.ಪ್ರಭಾ ಮಲ್ಲಿಕಾರ್ಜುನಗೆ ಮತ ನೀಡಿ ಬಹುಮತದಿಂದ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.

ಕಡತಿ ಗ್ರಾಮದಲ್ಲಿ ಮುತ್ತೈದೆಯರು ಆರತಿ ಬೆಳಗಿ ಹಾಗೂ ಯುವಕರು ಪಟಾಕಿ ಸಿಡಿಸಿ ಬರಮಾಡಿಕೊಂಡರು.

ಹಲುವಾಗಲು, ಕುಂಚೂರು, ಕೆ.ಕಲ್ಲಹಳ್ಳಿ, ನೀಲಗುಂದ, ಗುಂಡಗತ್ತಿ, ಯಡಿಹಳ್ಳಿ, ತೆಲಿಗಿ ಗ್ರಾಮಗಳಿಗೆ ಭೇಟಿ ನೀಡಿ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ಶಾಸಕಿ ಎಂ.ಪಿ.ಲತಾ ಮತಯಾಚನೆ ಮಾಡಿದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್‌ ಅಧ್ಯಕ್ಷ ಕೆ.ಕುಬೇರಪ್ಪ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ಮುಖಂಡರಾದ ಎಂ.ರಾಜಶೇಖರ, ಆಲದಹಳ್ಳಿ ಷಣ್ಮುಖಪ್ಪ, ಪ್ರಕಾಶ ಪಾಟೀಲ್, ಸುಷ್ಮಾ ಪಾಟೀಲ್, ಎಚ್‌.ಎಂ. ಮಲ್ಲಿಕಾರ್ಜುನ, ಕೋಡಿಹಳ್ಳಿ ಭೀಮಪ್ಪ, ಹಲಗೇರಿ ಮಂಜಪ್ಪ, ಪುರಸಭಾ ಸದಸ್ಯ ಟಿ.ವೆಂಕಟೇಶ ಲಾಟಿ ದಾದಾಪೀರ, ತೆಲಗಿ ಜಿಬಿಟಿ ಮಹೇಶ, ಯೋಗೀಶ, ಮತ್ತೂರು ಬಸವರಾಜ, ಈ.ದೇವದಾಸ, ಉದಯಶಂಕರ, ಕೊಟ್ಟೂರು ಪ್ರದೀಪ, ಮೋತಿನಾಯ್ಕ, ದುಗ್ಗಾವತ್ತಿ ಮಂಜು, ಕಡತಿ ಜಗದೀಶ, ಬಂಡೇಶ, ಹಾಲೇಶಗೌಡ ಇತರರು ಪಾಲ್ಗೊಂಡಿದ್ದರು.

Share this article