ಜಿಲ್ಲೆಯಲ್ಲಿ ಮುಂದುವರಿದ ಡೆಂಘೀ ಹಾವಳಿ

KannadaprabhaNewsNetwork | Published : Jul 6, 2024 12:45 AM

ಸಾರಾಂಶ

ಹಾಸನದಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಗ್ರಾಮದ ಸಮೃದ್ಧಿ (8) ಎಂಬ ಮತ್ತೋರ್ವ ಬಾಲಕಿ ಬಲಿಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ನಗರಸಭೆಯು ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ನಗರದ ರಸ್ತೆ ಬದಿ ಇರುವ ಗೂಡಂಗಡಿಯನ್ನು ಜೆಸಿಬಿ ಹಾಗೂ ನಗರಸಭೆ ಸಿಬ್ಬಂದಿಯಿಂದ ಶುಕ್ರವಾರ ಬೆಳಿಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಮಾರಕ ಡೆಂಘೀ ಮಹಾಮಾರಿ ಆರ್ಭಟ ದಿನೇದಿನೇ ಹೆಚ್ಚುತ್ತಿದ್ದು, ಶಂಕಿತ ಡೆಂಘೀಗೆ ಮತ್ತೋರ್ವ ಬಾಲಕಿ ಬಲಿಯಾಗಿದ್ದಾಳೆ.

ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿ ಗ್ರಾಮದ ಸಮೃದ್ಧಿ (8) ಮೃತಪಟ್ಟ ಬಾಲಕಿ. ಗ್ರಾಮದ ರಮೇಶ್-ಅಶ್ವಿನಿ ದಂಪತಿಯ ಪುತ್ರಿಯಾದ ಸಮೃದ್ಧಿ, ಕಳೆದ ಮೂರ್ನಾಲ್ಕು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದು, ಆಕೆಯನ್ನು ಮೂರು ದಿನಗಳ ಹಿಂದೆ ಹಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಆದರೆ ಬಾಲಕಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆಕೆಯನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಮೃದ್ಧಿ ಸಾವನ್ನಪ್ಪಿದ್ದಾಳೆ.

ಒಂದು ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀಗೆ ನಾಲ್ವರು ಬಾಲಕಿಯರು ಬಲಿಯಾಗಿದ್ದು, ಹೊಳೆನರಸೀಪುರ ತಾಲೂಕಿನಲ್ಲೇ ಮೂವರು ಬಾಲಕಿಯರು ಜೀವತೆತ್ತಿದ್ದಾರೆ.

ರಸ್ತೆ ಬದಿ ಅಂಗಡಿಗಳ ತೆರವು:

ಕೊರೋನಾದಂತೆ ಡೆಂಘೀ ಪ್ರಕರಣವು ದಿನೆ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ನಗರಸಭೆಯು ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ನಗರದ ರಸ್ತೆ ಬದಿ ಇರುವ ಗೂಡಂಗಡಿಯನ್ನು ಜೆಸಿಬಿ ಹಾಗೂ ನಗರಸಭೆ ಸಿಬ್ಬಂದಿಯಿಂದ ಶುಕ್ರವಾರ ಬೆಳಿಗ್ಗೆ ತೆರವು ಕಾರ್ಯಾಚರಣೆ ನಡೆಸಿದರು.

ನಗರಸಭೆ ಆರೋಗ್ಯ ನಿರೀಕ್ಷಕ ಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ, ಡೆಂಘೀ ಜ್ವರ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮೌಖಿಕ ಆದೇಶ ಹಾಗೂ ನಗರಸಭೆ ಆಯಕ್ತರ ಆದೇಶದಂತೆ ನಗರಸಭೆಯ ಎಲ್ಲಾ ಆರೋಗ್ಯ ನಿರೀಕ್ಷಕರ ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಡೆಂಘೀನಿಂದ ಹಾಸನದಲ್ಲೂ ಕೂಡ ಸಾವಿನ ಪ್ರಕರಣಗಳು ಕಂಡುಬಂದಿರುವುದರಿಂದ ಅನೇಕರಲ್ಲಿ ಜ್ವರಗಳು ಕಾಣಿಸುತ್ತಿರುವುದರಿಂದ ಮುಖ್ಯವಾಗಿ ಸೊಳ್ಳೆಗಳಿಂದ ಈ ಕಾಯಿಲೆ ಬರುತ್ತಿದೆ ಎಂದು ಆರೋಗ್ಯ ಇಲಾಖೆ ಈಗಾಗಲೇ ಪ್ರಕಟಣೆಯಲ್ಲಿ ತಿಳಿಸಿದೆ ಎಂದರು.

ಯಾರು ಅಶುಚಿತ್ವದಿಂದ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಯಾರು ಬೀದಿ ಬದಿ ವ್ಯಾಪಾರ ಮಾಡುತ್ತಾರೆ ಅಂಥವರನ್ನು ತೆರವುಗೊಳಿಸಬೇಕು ಎನ್ನುವ ಸೂಚನೆ ಇದೆ. ಆದರೇ ರಸ್ತೆಬದಿ ವ್ಯಾಪಾರಸ್ಥರು ಬೆಳಿಗ್ಗೆ ವ್ಯಾಪಾರ ಮಾಡಿ ಸಂಜೆ ಗಾಡಿಗಳನ್ನು ತೆರವು ಮಾಡದೇ ಶಾಶ್ವತವಾಗಿ ಅದೇ ಜಾಗದಲ್ಲಿ ನೆಲೆಸಿದ್ದು, ಇದರಿಂದ ಪಾದಚಾರಿಗಳ ಓಡಾಡುವುದಕ್ಕೆ ಅಡಚಣೆ ಉಂಟಾಗಿದೆ. ಬಿ.ಎಂ. ರಸ್ತೆ ಬಳಿ ಉದ್ದಲಕ್ಕೂ ಎಳನೀರು ವ್ಯಾಪಾರ ಮಾಡುವವರು ಅದರ ಚಿಪ್ಪನ್ನು ಹಾಗೆಯೇ ಬಿಟ್ಟು ಹೋಗುತ್ತಿದ್ದು, ಇದರಿಂದ ಚಿಪ್ಪು ಒಳಗೆ ಮಳೆ ನೀರು ಸೇರಿ ಸೊಳ್ಳೆಗಳು ಹೆಚ್ಚಾಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಮತ್ತು ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪೌರಾಯುಕ್ತರ ನಿರ್ದೇಶನದ ಮೂಲಕ ಆರೋಗ್ಯ ನಿರೀಕ್ಷಕರಾದ ವೆಂಟಕೇಶ್ ನೇತೃತ್ವದಲ್ಲಿ ಎಲ್ಲಾ ಆರೋಗ್ಯ ನಿರೀಕ್ಷಕರ ಜೊತೆ ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಆ ಸ್ಥಳದಲ್ಲಿ ವ್ಯಾಪಾರಸ್ಥರಿಗೆ ಮನವರಿಕೆ ಮಾಡಿಕೊಡಲು ಕಾರ್ಯಾಚರಣೆ ಮಾಡಲಾಗುತ್ತಿದೆ. ಬಿ.ಎಂ. ರಸ್ತೆ ಬದಿ ಅನೇಕರು ಜಾಗ ಅತಿಕ್ರಮಣ ಮಾಡಿದ್ದಾರೆ. ಆ ಸ್ಥಳ ತೆರವು ಮಾಡಲಾಗುತ್ತಿದೆ. ಮುಖ್ಯವಾಗಿ ರಸ್ತೆ ಬದಿ ಮೀನು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲಿ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿತ್ತು. ಶುಚಿತ್ವಕ್ಕೆ ಆದ್ಯತೆ ಕೊಡಬೇಕೆಂದು ಅನೇಕ ಬಾರಿ ಅವರಿಗೆ ತಿಳಿಸಲಾಗಿದ್ದರೂ ಮಾತು ಕೆಳದೇ ಉಳಿದ ಮೀನನ್ನು ರೆಫ್ರಿಜರೇಟರ್‌ ಒಳಗೆ ಇಟ್ಟು ಕೊಳೆತ ಮೀನನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುತ್ತಿತ್ತು. ಇನ್ನು ಸತ್ತ ಹೆಣಗಳ ಮೇಲೆ ಹಾಕುವ ಕೆಮಿಕಲ್ ಅನ್ನು ಮೀನುಗಳ ಮೇಲೆ ಹಾಕಲಾಗುತ್ತಿದೆ ಎನ್ನುವ ದೂರಿನ ಮೇರೆಗೆ ಆ ಮೀನನ್ನು ಶೇಖರಣೆ ಮಾಡಿ ಪರೀಕ್ಷೆಗೆ ಕಳಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಆರೋಗ್ಯ ನಿರೀಕ್ಷಕರಾದ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ನಗರಸಭೆ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ಯಾರು ಶುಚಿತ್ವ ಕಾಪಾಡದೆ ಎಳನೀರು ಬುರುಡೆ, ಟೈರು ಅಂಗಡಿಗಳು, ಮೀನು ಅಂಗಡಿಗಳು ಸೇರಿದಂತೆ ಇತರೆ ಗೂಡಂಗಡಿಗಳನ್ನು ತೆರವುಗೊಳಿಸಲಾಗುತ್ತಿದೆ. ಮನೆಗಳಲ್ಲಿಯೂ ಕೂಡ ಎರಡು ದಿನಕ್ಕಿಂತ ಹೆಚ್ಚಿನ ದಿನ ನೀರು ಶೇಖರಣೆ ಮಾಡದೇ ಹೊಸ ನೀರನ್ನು ಬಳಸಬೇಕು. ಡೆಂಘೀ ಕೇಸುಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ನಮ್ಮ ಜೊತೆ ಸಹಕರಿಸಿದರೇ ಡೆಂಘೀ ನಿಯಂತ್ರಣಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ಯಾರು ಅಶುಚಿತ್ವದಿಂದ ಇದ್ದಾರೆ ಅವರ ವ್ಯಾಪಾರವನ್ನು ತೆರವು ಮಾಡುತಿದ್ದೇವೆ. ಇನ್ನು ಮುಖ್ಯ ರಸ್ತೆಯಲ್ಲಿ ನಗರದ ಸೌಂದರ್ಯಕ್ಕೆ ಧಕ್ಕೆ ಮಾಡಿದ್ದಾರೋ ಆ ಅಂಗಡಿ ಖಾಲಿ ಮಾಡಿಸಲಾಗುತ್ತಿದೆ. ಶೆಡ್ ಮತ್ತು ಟೈರ್‌ ಅಂಗಡಿಗಳಲ್ಲಿ ಹಳೆ ಟೈರು ತುಂಬ ದಿನದಿಂದ ಇಟ್ಟಿರುವವರಿಗೆ ಅವರಿಗೆ ಸೂಚನೆ ಕೊಡಲಾಗಿದೆ. ತೆರವು ಮಾಡದಿದ್ದರೇ ನಾವೇ ಖುದ್ದಾಗಿ ಹೋಗಿ ತೆರವು ಕಾರ್ಯಾಚರಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಫೋಟೋ ಶೀರ್ಷಿಕೆ

5ಎಚ್ಎಸ್ಎನ್10ಬಿ : ಶಂಕಿತ ಡೆಂಘೀಗೆ ಬಲಿಯಾದ ಬಾಲಕಿ ಸಮೃದ್ಧಿಯ ಊರಾದ ಹೊಳೆನರಸೀಪುರ ತಾಲೂಕಿನ ದೊಡ್ಡಳ್ಳಿಗೆ ಶುಕ್ರವಾರ ಜಿಲ್ಲಾ ಪಂಚಾಯ್ತಿ ಸಿಇಒ ಪೂರ್ಣಿಮಾ ಅವರು ಡಾ. ಶಿವಸ್ವಾಮಿ ಹಾಗೂ ಇನ್ನಿತರೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಸಮೃದ್ಧಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಫೋಟೋ ಶೀರ್ಷಿಕೆ

5ಎಚ್ಎಸ್ಎನ್10ಎ : ಹಾಸನ ನಗರದ ಬಿಎಂ ರಸ್ತೆ ಬದಿಯಲ್ಲಿ ಎಳನೀರು ಅಂಗಡಿಗಳನ್ನು ಜೆಸಿಬಿ ಮೂಲಕ ತೆರವು ಮಾಡಿಸುತ್ತಿರುವುದು.

* ಹೇಳೀಕೆ1ಡೆಂಘೀನಿಂದ ಹಾಸನದಲ್ಲೂ ಕೂಡ ಸಾವಿನ ಪ್ರಕರಣಗಳು ಕಂಡುಬಂದಿರುವುದರಿಂದ ಅನೇಕರಲ್ಲಿ ಜ್ವರ ಕಾಣಿಸುತ್ತಿದೆ.ವ್ಯಾಪಾರಸ್ಥರು ಬೆಳಿಗ್ಗೆ ವ್ಯಾಪಾರ ಮಾಡಿ ಸಂಜೆ ಗಾಡಿಗಳನ್ನು ತೆರವು ಮಾಡದೇ ಶಾಶ್ವತವಾಗಿ ಅದೇ ಜಾಗದಲ್ಲಿ ನೆಲೆಸಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಠಿಯಿಂದ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. - ಪ್ರಸಾದ್,ನಗರಸಭೆ ಆರೋಗ್ಯ ನಿರೀಕ್ಷಕ

* ಹೇಳೀಕೆ2

ಮನೆಗಳಲ್ಲಿ ಎರಡು ದಿನಕ್ಕಿಂತ ಹೆಚ್ಚಿನ ದಿನ ನೀರು ಶೇಖರಣೆ ಮಾಡದೇ ಹೊಸ ನೀರನ್ನು ಬಳಸಬೇಕು. ಡೆಂಘೀ ಕೇಸುಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ನಮ್ಮ ಜೊತೆ ಸಹಕರಿಸಿದರೇ ಡೆಂಘೀ ನಿಯಂತ್ರಣಕ್ಕೆ ಅನುಕೂಲವಾಗಲಿದೆ.

- ಮಂಜುನಾಥ್,ಆರೋಗ್ಯ ನಿರೀಕ್ಷಕ

Share this article