ಕನ್ನಡಪ್ರಭ ವಾರ್ತೆ ಬೆಂಗಳೂರು
ಚಾರಣದ ನೆಪದಲ್ಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂದಣಿ ತಗ್ಗಿಸಲು ಹಾಗೂ ಪರಿಸರ ಸಂರಕ್ಷಣೆಗಾಗಿ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳಿಗೆ ಚಾರಣಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶಿಸಿದೆ. ಅದರ ಜತೆಗೆ ಚಾರಣಕ್ಕೆ ಪ್ರತ್ಯೇಕ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ರೂಪಿಸಲು ನಿರ್ಧರಿಸಲಾಗಿದೆ.ಕಳೆದ ಜ.26ರಂದು ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ನೀಡಿದ್ದರು. ಅದರಿಂದಾಗಿ ಜನಜಂಗುಳಿ ಹೆಚ್ಚಾಗಿ, ವನ್ಯಜೀವಿಗಳಿಗೆ ಸಮಸ್ಯೆಯಾಗಿದ್ದಲ್ಲದೆ, ಪ್ಲಾಸ್ಟಿಕ್ ಸೇರಿ ಇನ್ನಿತರ ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳ ಪ್ರಮಾಣ ಹೆಚ್ಚುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಚಾರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸಲು ಮುಂದಾಗಿರುವ ಅರಣ್ಯ ಇಲಾಖೆ, ಅಲ್ಲಿಯವರೆಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳಿಗೆ ಚಾರಣಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.ಈ ಕುರಿತು ಅರಣ್ಯ ಇಲಾಖೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗು ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅರಣ್ಯ ಪ್ರದೇಶಕ್ಕೆ ಒಮ್ಮೇಲೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದರೆ ಅದರಿಂದ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ. ಪಶ್ಚಿಮಘಟ್ಟದಂತಹ ಅರಣ್ಯ ಸಂಪತ್ತು ಹೊಂದಿರುವ ಪ್ರದೇಶಕ್ಕೆ ಹಾನಿಯಾಗಲಿದೆ. ಅಲ್ಲಿನ ಪರಿಸರ ಹಾಗೂ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಹೀಗಾಗಿ ಚಾರಣ ತಾಣಗಳಲ್ಲಿ ಚಾರಣಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು. ಅದರ ಜತೆಗೆ ಚಾರಣಿಗರು ಪ್ಲಾಸ್ಟಿಕ್ ವಸ್ತುಗಳು, ಆಹಾರ ಪದಾರ್ಥಗಳನ್ನು ತರುವುದನ್ನು ನಿಷೇಧಿಸುವುದು ಅಥವಾ ಅದಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.ನಿಗದಿತ ಸಂಖ್ಯೆಯಲ್ಲಿ ಚಾರಣಿಗರ ಪ್ರವೇಶ:ಚಾರಣ ತಾಣಗಳಿಗೆ ಒಮ್ಮೇಲೆ ಸಾವಿರಾರು ಜನರು ಬಂದರೆ ಅವರನ್ನು ನಿಯಂತ್ರಿಸುವುದು ಹಾಗೂ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗುತ್ತಿದೆ. ಅದರ ಜತೆಗೆ ಕೆಲ ಚಾರಣಿಗರು ಟ್ರಕ್ಕಿಂಗ್ ವೇಳೆ ಅರಣ್ಯ ಪ್ರದೇಶದಲ್ಲೇ ಟೆಂಟ್ ಹಾಕಿ ರಾತ್ರಿ ವಾಸ್ತವ್ಯ ಹೂಡುತ್ತಿದ್ದಾರೆ ಎಂಬ ಮಾಹಿತಿಯಿದೆ. ಈ ರೀತಿಯ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಅದಕ್ಕಾಗಿ ಚಾರಣ ತಾಣಗಳಿಗಾಗಿ ಪ್ರಮಾಣಿತ ಕಾರ್ಯವಿಧಾನ (ಎಸ್‌ಒಪಿ) ರೂಪಿಸಬೇಕಿದೆ.
ಅದರ ಜತೆಗೆ ಚಾರಣ ತಾಣಗಳಿಗೆ ಪ್ರವೇಶಿಸಲು ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೊಳಿಸಬೇಕು. ಅಲ್ಲಿಯವರೆಗೆ ಚಾರಣ ತಾಣಗಳಿಗೆ ಚಾರಣಿಗರ ಪ್ರವೇಶ ನಿಷೇಧಿಸಬೇಕು ಎಂದು ಅರಣ್ಯ ಸಚಿವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ರಾಜ್ಯದಲ್ಲಿ 24 ಚಾರಣ ತಾಣಗಳು:ರಾಜ್ಯದಲ್ಲಿ ಸದ್ಯ ಅರಣ್ಯ ಇಲಾಖೆ ನಿರ್ವಹಣೆಯಲ್ಲಿ 24 ಚಾರಣ ತಾಣಗಳಿದ್ದು, ಅವುಗಳ ಪ್ರವೇಶಕ್ಕೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 150 ಚಾರಣಿಗರು ಆ ತಾಣಗಳಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. www.karnatakaecotourism.com ಇಲ್ಲಿ ಚಾರಣಿಗರು ಚಾರಣಕ್ಕೆ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಚಾರಣ ತಾಣಗಳ ವಿವರಕೋಲಾರ ವಿಭಾಗದ ಅಂತರಗಂಗೆ,ಚಿಕ್ಕಬಳ್ಳಾಪುರ ವಿಭಾಗದ ಸ್ಕಂದಗಿರಿ, ಅವಲಬೆಟ್ಟ, ಕೈವಾರ,
ಬೆಂಗಳೂರು ಗ್ರಾಮಾಂತರ ವಿಭಾಗದ ಮಾಕಳಿದುರ್ಗ,ಚಿಕ್ಕಮಗಳೂರು ವಿಭಾಗದ ಎತ್ತಿನಭುಜ,
ಕೊಪ್ಪ ವಿಭಾಗದ ಬಲ್ಲಾಳರಾಯನದುರ್ಗದ ಕೋಟೆ, ಬಂಡಾಜೆ ಫಾಲ್ಸ್, ರಾಣಿಝರಿ,ರಾಮನಗರ ವಿಭಾಗದ ಸಾವನದುರ್ಗ, ಬಿದರಕಟ್ಟೆ,
ತುಮಕೂರು ವಿಭಾಗದ ದೇವರಾಯನದುರ್ಗ, ಸಿದ್ದರಬೆಟ್ಟ, ಚಿನ್ನಗದಬೆಟ್ಟ, ರಾಮದೇವರ ಬೆಟ್ಟ,ಬೆಳಗಾವಿ ವಿಭಾಗದ ಧಾಮಣೆ-ತಿಳಾರಿ, ಕಾಡ ವ್ಯೂ ಪಾಯಿಂಟ್, ತಿಳಾರಿ ಹಿನ್ನೀರು, ಸೌತೇರಿಯಾ ಜಲಪಾತ, ಸಡಾ, ಹಂಪಿ ಹೆರಿಟೇಜ್ ಟ್ರೇಲ್ಸ್,
ಬಳ್ಳಾರಿ ವಿಭಾಗದ ಸರ್ಮೋದಯ, ಹಾಲಸಾಗರ.