ವಿಶ್ವಾದ್ಯಂತ ಇಂತಹ ಕೇವಲ 14 ಪ್ರಕರಣ ವರದಿಯಾಗಿದೆ: ಡಾ. ವಿಜಯಕುಮಾರ್
ಕನ್ನಡಪ್ರಭ ವಾರ್ತೆ ಮಣಿಪಾಲಗಮನಾರ್ಹವಾದ ವೈದ್ಯಕೀಯ ಸಾಧನೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತಜ್ಞರ ತಂಡವು ಅಪರೂಪದ ಯಕೃತ್ತಿನ ಗೆಡ್ಡೆಯನ್ನು ತೆಗೆದುಹಾಕುವ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ಈ ಮೂಲಕ ನವಜಾತ ಶಿಶುವಿಗೆ ಮರುಜನ್ಮ ನೀಡಿತು.ಸಂತಾನಹೀನತೆಯ ವಿರುದ್ಧ ಹೋರಾಡುತ್ತಾ ಸುದೀರ್ಘ ಸಮಯದ ನಂತರ ಗರ್ಭಿಣಿಯಾದ ಚಿತ್ರದುರ್ಗದ ನಿವಾಸಿಗಳಾದ ಪೋಷಕರು ಸಂತೋಷಪಟ್ಟಿದ್ದರು. ಆದರೆ ಪ್ರಸವಪೂರ್ವ ಸ್ಕ್ಯಾನಿಂಗ್‌ನಲ್ಲಿ ತಮಗೆ ಹುಟ್ಟಲಿರುವ ಮಗುವಿನ ಯಕೃತ್ತಿನಲ್ಲಿ ಗೆಡ್ಡೆ ಇದೆ ಎಂದು ತಿಳಿದಾಗ ಅವರ ಸಂತೋಷವು ನೋವಾಗಿ ಪರಿಣಿಮಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರು ಮಗುವಿನ ಸಹಿತ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿದರು. ಸಿಟಿ ಸ್ಕ್ಯಾನ್ ಮತ್ತು ಬಯಾಪ್ಸಿಯಿಂದ ಈ 4 ತಿಂಗಳ ಮಗುವಿನ ಯಕೃತ್ತಿನ ಬಲಭಾಗದಲ್ಲಿ ಹೆಪಟೊಬ್ಲಾಸ್ಟೊಮಾ ಎಂಬ ಅಪರೂಪದ ಕ್ಯಾನ್ಸರ್ ಗೆಡ್ಡೆ ಇರುವುದು ದೃಢಪಟ್ಟಿತು. ಸಂಕೀರ್ಣ ಮತ್ತು ಅಪಾಯಕಾರಿ ಈ ಚಿಕಿತ್ಸೆ ನಡೆಸಲು ಪೋಷಕರ ಒಪ್ಪಿಗೆ ಮೇರೆಗೆ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕತ್ಸಾ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಕುಮಾರ್ ತಂಡ, ಶಸ್ತ್ರ ಚಿಕಿತ್ಸೆ ನಡೆಸಿ ಯಕೃತ್ತಿನ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು.
ಈ ತಂಡದಲ್ಲಿ ಡಾ.ಸಂತೋಷ್ ಪ್ರಭು, ಡಾ.ಸಂದೀಪ್ ಪಿ.ಟಿ., ಡಾ.ನಿತಿನ್ ಪೈ, ಡಾ.ರಂಜಿನಿ ಇದ್ದರು. ಡಾ. ಮಾಳವಿಕಾ ನೇತೃತ್ವದ ಅರಿವಳಿಕೆ ತಂಡವು ಸಂಕೀರ್ಣ ಕಾರ್ಯವಿಧಾನವನ್ನು ನೆರವೇರಿಸಲು ಸಹಕರಿಸಿತು ಮತ್ತು ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲೋಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ್ ಭಟ್ ಅವರು ಮಗುವಿನ ಮೌಲ್ಯಮಾಪನ ಮತ್ತು ಚಿಕಿತ್ಸಾ ಯೋಜನೆಗೆ ಮಾರ್ಗದರ್ಶನ ನೀಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ವಿಜಯ್ ಕುಮಾರ್, ಯಕೃತ್ತಿನ ಗೆಡ್ಡೆಗಳು ಅತ್ಯಂತ ಅಪರೂಪವಾಗಿದ್ದು, ವೈದ್ಯಕೀಯ ಸಾಹಿತ್ಯದಲ್ಲಿ ಇಲ್ಲಿಯವರೆಗೆ ವಿಶ್ವಾದ್ಯಂತ ಕೇವಲ 14 ಪ್ರಕರಣಗಳು ವರದಿಯಾಗಿವೆ. ಈ ಚಿಕಿತ್ಸೆಯೇ ಅತ್ಯಂತ ಸಂಕೀರ್ಣವಾಗಿರುತ್ತದೆ, ಅದರಲ್ಲೂ ನವಜಾತ ಶಿಶುವಾದ್ದರಿಂದ ಸವಾಲು ಇನ್ನು ಹೆಚ್ಚಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಮಗು ಚೆನ್ನಾಗಿ ಚೇತರಿಸಿಕೊಳ್ಳುತಿರುವುದನ್ನು ಮತ್ತು ಹೆತ್ತವರ ಮುಖದಲ್ಲಿ ಮರಳಿ ನಗುವನ್ನು ನೋಡಲು ನಾವು ಸಂತೋಷಪಡುತ್ತಿದ್ದೇವೆ ಎಂದಿದ್ದಾರೆ.ಈ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೆಮ್ಮೆ ವ್ಯಕ್ತಪಡಿಸಿದ್ದು, ವಿಶ್ವ ದರ್ಜೆಯ ವೈದ್ಯಕೀಯ ಸೇವೆ ಒದಗಿಸುವ ಆಸ್ಪತ್ರೆಯ ಬದ್ಧತೆಗೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದಿದ್ದಾರೆ.