ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರನಗರದಲ್ಲಿ ಮಿತಿ ಮೀರಿರುವ ಬೀದಿ ನಾಯಿಗಳ ಉಪಟಳ ನಿಯಂತ್ರಿಸಲು ಮುಂದಾಗಿರುವ ರಾಮನಗರ ನಗರಸಭೆ ಶೀಘ್ರ ಆಪರೇಷನ್ ಡಾಗ್ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ.
ಎರಡು ವರ್ಷಗಳ ಹಿಂದೆ 1155 ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ (ಎಬಿಸಿ - ಅನಿಮಲ್ ಬರ್ತ್ ಕಂಟ್ರೋಲ್ ) ನಡೆಸಲಾಗಿತ್ತು. ಈಗ ಎರಡನೇ ಬಾರಿಯೂ ನಗರಸಭೆ 1155 ಬೀದಿ ನಾಯಿಗಳಿಗೆ ಎಬಿಸಿ ಮಾಡುವ ಗುರಿ ಹೊಂದಿದೆ.ರಾಮನಗರ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, ಇಲ್ಲಿ ಸುಮಾರು 4 ರಿಂದ 5 ಸಾವಿರ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗಾಗಿ ನಗರಸಭೆ 20 ಲಕ್ಷ ರುಪಾಯಿ ಮೀಸಲಿಟ್ಟಿದ್ದು, ಒಂದು ಬೀದಿ ನಾಯಿಗೆ ಎಬಿಸಿ ಮಾಡಲು 1731 ರುಪಾಯಿ ವೆಚ್ಚ ನಿಗದಿ ಮಾಡಲಾಗಿದೆ.
ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಬೆಂಗಳೂರಿನ ಕೇರ್ ಆಫ್ ವಾಯ್ಸ್ ಲೆಸ್ ಅನಿಮಲ್ಸ್ ಎಂಬ ಎನ್ ಜಿಒ ಗುತ್ತಿಗೆ ಪಡೆದುಕೊಂಡಿದೆ. ನಗರಸಭೆ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕಾರ್ಯಾದೇಶವನ್ನೂ ಸಹ ನೀಡಿದೆ.ಪ್ರತಿ ಶ್ವಾನಗಳನ್ನು ಹಿಡಿದು, ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ, ಆರೈಕೆ, ರೇಬಿಸ್ ಸೇರಿದಂತೆ ಇನ್ನಿತರ ರೋಗಗಳಿಂದ ದೂರವಿಡುವ ಇಂಜೆಕ್ಷನ್ ನೀಡಲು ಕನಿಷ್ಠ 2 ಸಾವಿರ ಖರ್ಚಾಗಲಿದೆ. ಹೆಣ್ಣು ಶ್ವಾನಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲು 2 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತಿತು. ಆದರೆ, ಸರ್ಕಾರ 1,400ರಿಂದ 1,600 ರು. ಮಾತ್ರ ದರ ನಿಗದಿ ಮಾಡಿತ್ತು. ಇದರಿಂದಾಗಿ ಸ್ಥಳೀಯ ಸಂಸ್ಥೆಗಳು ಟೆಂಡರ್ ಕರೆದರೂ, ಯಾರೊಬ್ಬರು ಟೆಂಡರ್ ಅರ್ಜಿ ಸಲ್ಲಿಸುತ್ತಿರಲಿಲ್ಲ.
ಸರ್ಕಾರ ನಿಗದಿ ಮಾಡಿದ್ದ ದರಕ್ಕಿಂತ ನಾಯಿಗಳ ಆಪರೇಷನ್‌ಗೆ ಮೂರು ಪಟ್ಟು ಖರ್ಚಾಗುತ್ತಿತು. ಹೀಗಾಗಿ ಟೆಂಡರ್‌ದಾರರು ಈ ಪ್ರಕ್ರಿಯೆಯಿಂದ ದೂರವೇ ಉಳಿಯುತ್ತಿದ್ದರು. ಹೀಗಾಗಿ ಶ್ವಾನಗಳ ಸಂತತಿ ಏರಿಕೆ ಕಾಣುತ್ತಿದೆ. ಇದೀಗ ಅಭಿಲಾಷ್ ಅವರಿಗೆ ಸೇರಿದ ಬೆಂಗಳೂರಿನ ಕೇರ್ ಆಫ್ ವಾಯ್ಸ್ ಅನಿಮಲ್ಸ್ ಎಂಬ ಎನ್ ಜಿಒ ಬೀದಿ ನಾಯಿಗಳಿಗೆ ಎಬಿಸಿ ಮಾಡಲು ಮುಂದಾಗಿದೆ.ಕಂಗೆಟ್ಟಿದ್ದ ಸಾರ್ವಜನಿಕರು :ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ರೋಸಿ ಹೋಗಿದ್ದರು. ವಾಹನ ಸವಾರರು, ಮಕ್ಕಳು, ಪಾದಾಚಾರಿಗಳು ರಸ್ತೆಗಳಲ್ಲಿ ನೆಮ್ಮದಿಯಿಂದ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಾರ್ವಜನಿಕರಿಂದ ಸಾಕಷ್ಟು ಒತ್ತಾಯಗಳು ಕೇಳಿ ಬರುತ್ತಿದ್ದವು.
ವಾಹನ ಸವಾರರಿಗೆ ಅಡ್ಡ ಬರುವ ನಾಯಿಗಳನ್ನು ತಪ್ಪಿಸಲು ಹೋಗಿ ವಾಹನಗಳು ಉರುಳಿ ಬಿದ್ದುಗಾಯಗೊಂಡಿರುವವರ ಸಂಖ್ಯೆಯೂ ಹೆಚ್ಚಿದೆ. ಪ್ರಮುಖ ರಸ್ತೆಗಳಲ್ಲಿ ಅಲೆಯುವ ಬೀದಿ ನಾಯಿಗಳು ದಾರಿ ಹೋಕರ ಮೇಲೆ ದಾಳಿ ನಡೆಸುತ್ತಲೇ ಇವೆ. ಇತ್ತೀಚೆಗಷ್ಟೇ ಪೌರಕಾರ್ಮಿಕರ ಮೇಲೂ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ್ದವು. ಆದರೆ, ಇದೆಲ್ಲವೂ ಮಾಮೂಲಿ ಎನ್ನುವಂತಿತ್ತು.ಪರ್ಯಾಯ ಜಾಗಕ್ಕಾಗಿ ಹುಡುಕಾಟ :ನಗರದ ಹಳೇ ಬಸ್ ನಿಲ್ದಾಣದ ವೃತ್ತದಲ್ಲಿರುವ ಪಶು ಆಸ್ಪತ್ರೆಯಲ್ಲಿ ಬೀದಿ ನಾಯಿಗಳಿಗೆ ಎಬಿಸಿ ಮಾಡಲಾಗುತ್ತಿತ್ತು. ಆದರೀಗ ಆ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿರುವ ಕಾರಣ ಸ್ಥಳಾವಕಾಶದ ಕೊರತೆ ಇದೆ. ಹೀಗಾಗಿ 1ನೇ ವಾರ್ಡಿನಲ್ಲಿ ನಗರಸಭೆಗೆ ಸೇರಿದ ಜಾಗದಲ್ಲಿಯೇ ಬೀದಿ ನಾಯಿಗಳಿಗೆ ಆಪರೇಷನ್ ಹಾಗೂ ಆರೈಕೆ ಕೇಂದ್ರ ನಿರ್ಮಿಸಲು ಚಿಂತನೆ ನಡೆದಿದೆ ಎಂದು ನಗರಸಭೆ ಪರಿಸರ ವಿಭಾಗದ ಎಇಇ ಸುಬ್ರಹ್ಮಣ್ಯ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.ಅನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಕಾರ್ಯಾಚರಣೆ ಹೇಗಿರಲಿದೆ ?
ಬೀದಿ ನಾಯಿಗಳಿಗೆ ನೀಡುವ ಎಬಿಸಿ ಚಿಕಿತ್ಸೆ ಎಂದರೆ ಅವುಗಳಿಗೆ ಕ್ರಿಮಿನಾಶಕ, ಲಸಿಕೆ ಮತ್ತು ಟ್ಯಾಗ್ ಮಾಡುವುದು. ಈ ಪ್ರಕ್ರಿಯೆಯಲ್ಲಿ ನಾಯಿಗಳನ್ನು ಹಿಡಿದು, ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿ, ಅವುಗಳಿಗೆ ರೇಬಿಸ್ ವಿರೋಧಿ ಲಸಿಕೆ ಹಾಕಿದ ನಂತರ ಟ್ಯಾಗ್ ಅಳವಡಿಸಲಾಗುತ್ತದೆ. ಆನಂತರ ಅವುಗಳನ್ನು ಹಿಡಿದ ಸ್ಥಳಕ್ಕೆ ಬಿಡಲಾಗುತ್ತದೆ.ಪಶು ವೈದ್ಯರು, ಆಯುಕ್ತರು, ನುರಿತ ತಜ್ಞರು ಹಾಗೂ ಸಿಬ್ಬಂದಿ ಒಳಗೊಂಡ ತಂಡ ಇಡೀ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ. ಬೀದಿ ನಾಯಿಯನ್ನು ಹಿಡಿದು ಆಪರೇಷನ್ ಮಾಡಿದ ನಂತರ 7 ದಿನಗಳ ಕಾಲ ಅವುಗಳ ಆರೈಕೆ ಮಾಡಲಾಗುತ್ತದೆ. ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವುದಿಲ್ಲ.ರಾಮನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಜನ ಸಾಮಾನ್ಯರು, ಪೌರಕಾರ್ಮಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಬೀದಿ ನಾಯಿಗಳ ಉಪಟಳ ನಿಯಂತ್ರಿಸುವ ಸಲುವಾಗಿ ಎಬಿಸಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದಕ್ಕಾಗಿ ನಗಸಭೆಯಲ್ಲಿ 20 ಲಕ್ಷ ರುಪಾಯಿ ಮೀಸಲಿಡಲಾಗಿದೆ.
- ಕೆ.ಶೇಷಾದ್ರಿ (ಶಶಿ), ಅಧ್ಯಕ್ಷರು, ನಗರಸಭೆ, ರಾಮನಗರ.ರಾಮನಗರ ಟೌನಿನಲ್ಲಿ 1155 ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದ್ದು, ಈ ಪ್ರಕ್ರಿಯೆ ಮೂರು ತಿಂಗಳ ಕಾಲ ನಡೆಯಲಿದೆ. ಎರಡು ವರ್ಷಗಳ ಹಿಂದೆಯೂ ಎಬಿಸಿ ಮಾಡಲಾಗಿತ್ತು.
- ಡಾ.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.