ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು ಮತ್ತು ರೈತರಿಗೆಸುಲಭವಾಗಿ ಕೃಷಿ ಯಂತ್ರೋಪಕರಣಗಳು ದೊರೆಯುವಂತೆ ಮಾಡಲು ಹೈಟೆಕ್ ಹಾರ್ವೆಸ್ಟರ್ ಹಬ್ ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅರ್ಹ ಕೃಷಿ ಯಂತ್ರಧಾರೆ ಕೇಂದ್ರಗಳು, ನೋಂದಾಯಿತ ಸಂಘ-ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಕಾರಿಡಾರ್ ಮಾದರಿಯಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಕಾರಿಡಾರ್ ನಲ್ಲಿ ಸಂಚರಿಸಿ ಯಂತ್ರೋಪಕರಣಗಳು ಕಾರ್ಯನಿರ್ವಹಿಸಬಹುದಾಗಿದೆ. ಸಾಮಾನ್ಯ ವರ್ಷದ ರೈತರಿಗೆ ಗರಿಷ್ಠ ಶೇ.50ರಂತೆ, ಹಾಗೂ ಸಂಘ ಸಂಸ್ಥೆಗಳಿಗೆ ಗರಿಷ್ಠ ಶೇ.70ರಂತೆ ಸಹಾಯಧನ ನೀಡಲಾಗುವುದು.
ಶುಗರ್ ಕೇನ್ ಹಾರ್ವೆಸ್ಟರ್ ಹಬ್ ನಲ್ಲಿ ಶುಗರ್ ಕೇನ್ ಹಾರ್ವೆಸ್ಟರ್ ನೊಂದಿಗೆ ದಾಸ್ತಾನೀಕರಿಸುವುದು ಕಡ್ಡಾಯವಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಘಟಕಗಳಲ್ಲಿ ಈ ಮೇಲಿನ ಹೈಟೆಕ್ ಯಂತ್ರೋಪಕರಣ ದಾಸ್ತಾನಿಕರಿಸಿ ರೈತರಿಗೆ ಬಾಡಿಗೆ ಆಧಾರದಲ್ಲಿ ಒದಗಿಸಲು ಅವಕಾಶವಿದೆ.ಹೈಟೆಕ್ ಹಾರ್ವೆಸ್ಟರ್ ಹಬ್ ಗಳಲ್ಲಿ ದಾಸ್ತಾನಿಕರಿಸುವ ಯಂತ್ರೋಪಕರಣ ಬಾಡಿಗೆ ಆಧಾರದ ಮೇಲೆ ಕಾರಿಡಾರ್ ನಲ್ಲಿ ಬರುವ ರೈತರಿಗೆ ಒದಗಿಸುವುದು. ಕಾರ್ಯಾದೇಶ ನೀಡಿದ ನಂತರ ಖರೀದಿಸಿದ ಯಂತ್ರೋಪಕರಣಗಳಿಗೆ ಮಾತ್ರ ಸಹಾಯಧನ ನೀಡಲಾಗುವುದು. ಜಿಲ್ಲೆಗೆ ಒಂದು ಶುಗರ್ ಕೇನ್ ಹಾರ್ವೆಸ್ಟರ್ ಹಬ್ (ಪ.ಜಾ ವೈಯಕ್ತಿಕ ಫಲಾನುಭವಿ) ಇದ್ದು, ಜಿಲ್ಲಾಮಟ್ಟದ ಉಪಕರಣ ಸಮಿತಿ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಪಂ ನೇತೃತ್ವದಲ್ಲಿ ನಿಯಮಾನುಸಾರ ಹೈಟೆಕ್ ಹಾರ್ವೆಸ್ಟರ್ ಹಬ್ ಗಳನ್ನು ನಿರ್ವಹಿಸಲು ಸೇವಾದಾರ ಸಂಸ್ಥೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿದಾರರು ಇಚ್ಚಿಸುವ ಹಬ್ ಗೆ ಅರ್ಜಿ ನಮೂನೆಯಲ್ಲಿ, ನೋಂದಾಯಿಸಿದ ಸಂಸ್ಥೆ ಪ್ರಮಾಣ ಪತ್ರ, ಪಹಣಿ, ಜಾತಿ ಪ್ರಮಾಣ ಪತ್ರ, ಗುರುತಿನ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, ₹ 20 ಛಾಪಾ ಕಾಗದದ ಮೇಲೆ ಹಬ್ ಪರಭಾರೆ ಮಾಡುವುದಿಲ್ಲವೆಂದು ಮುಚ್ಚಳಿಕೆ ಪತ್ರ, ಸಕ್ಕರೆ ಕಾರ್ಖಾನೆಯಿಂದ ಕಬ್ಬು ಕಟಾವಿಗೆ ಮಾಡಿಕೊಂಡ ಲಿಖಿತ ಒಪ್ಪಂದ ಪ್ರಮಾಣ ಪತ್ರ ಹಾಗೂ ಸಹಾಯಧನ ಆಗಿರುವುದರಿಂದ ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕಿಂನಿಂದ ತಾತ್ವಿಕ ಸಾಲ ಮಂಜೂರಾತಿ ಪತ್ರವನ್ನು ಸಂಬಂಧಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾ.4 ಕೊನೆಯ ದಿನವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.