ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆ ಜಾರಿಗೆ ವಿವಿಧ ಸಂಘಟನೆಗಳ ವಿರೋಧ

KannadaprabhaNewsNetwork |  
Published : Jan 29, 2025, 01:36 AM IST
28ಕೆಎಂಎನ್‌ಡಿ-11ಕೆಆರ್‌ಎಸ್ ಬೃಂದಾವನದ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪರಿಸರ ಸಂರಕ್ಷಣಾ ಸಮಿತಿಯ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರ ಸಾರ್ವಜನಿಕ  ಸಭೆ ನಡೆಸಿದರು. | Kannada Prabha

ಸಾರಾಂಶ

90 ವರ್ಷಗಳ ಇತಿಹಾಸವಿರುವ ಕೆಆರ್‌ಎಸ್ ಅಣೆಕಟ್ಟೆ ಬಳಿಯ ಪ್ರದೇಶಗಳನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಸುಮಾರು 2663 ಕೋಟಿ ರು. ವೆಚ್ಚದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್‌ ನಿರ್ಮಿಸಿ ಖಾಸಗಿ ವ್ಯವಸ್ಥೆಗೆ 34 ವರ್ಷಗಳಿಗೆ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ. ಇದನ್ನು ಸಾರ್ವಜನಿಕರು ತೀವ್ರವಾಗಿ ವಿರೋಧಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಸಿದ್ಧ ಕೆಆರ್‌ಎಸ್ ಬೃಂದಾವನದ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಮುಂದಾಗಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರ ಸಾರ್ವಜನಿಕ ಸಭೆ ನಡೆಸಿದರು.

ತಾಲೂಕಿನ ಕೆಆರ್‌ಎಸ್ ಬಳಿ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನಿವೃತ್ತ ಅರಣ್ಯಾಧಿಕಾರಿ ಹಾಗೂ ಹಿರಿಯ ಪರಿಸರವಾದಿ ಡಾ.ಅ.ನ.ಯಲ್ಲಪ್ಪರೆಡ್ಡಿ ಅಮ್ಯೂಸ್ ಮೆಂಟ್ ಪಾರ್ಕಿನಿಂದಾಗುವ ಹಾನಿ ಹಾಗೂ ದುಷ್ಪರಿಣಾಮಗಳ ಕುರಿತು ಮಾತನಾಡಿದರು.

90 ವರ್ಷಗಳ ಇತಿಹಾಸವಿರುವ ಕೆಆರ್‌ಎಸ್ ಅಣೆಕಟ್ಟೆ ಬಳಿಯ ಪ್ರದೇಶಗಳನ್ನು ಪ್ರವಾಸೋದ್ಯಮದ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಸುಮಾರು 2663 ಕೋಟಿ ರು. ವೆಚ್ಚದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್‌ ನಿರ್ಮಿಸಿ ಖಾಸಗಿ ವ್ಯವಸ್ಥೆಗೆ 34 ವರ್ಷಗಳಿಗೆ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ. ಇದನ್ನು ಸಾರ್ವಜನಿಕರು ತೀವ್ರವಾಗಿ ವಿರೋಧಿಸಬೇಕು ಎಂದರು.

ಈ ಯೋಜನೆ ರೈತ ವಿರೋಧಿ ಕೃತ್ಯವಾಗಿದ್ದು, ಜೊತೆಗೆ ಕೆಆರ್‌ಎಸ್‌ನ ವಿಶ್ವವಿಖ್ಯಾತ ಬೃಂದಾವನವನ್ನು ಉನ್ನತೀಕರಣ ಹೆಸರಿನಲ್ಲಿ ಇಲ್ಲಿನ ಪರಿಸರಕ್ಕೂ ಹಾನಿ ಮಾಡಿ ಈ ಪ್ರದೇಶವನ್ನು ನಾಶಪಡಿಸಲಾಗುತ್ತಿದೆ. ಇದು ಜನ ವಿರೋಧಿಯಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯ ಭದ್ರತೆ ಹಾಗೂ ಕೆಆರ್‌ಎಸ್ ಅಣೆಕಟ್ಟೆಯ ಸುತ್ತಲ ಗ್ರಾಮಗಳ ಕೃಷಿ ಬದುಕು, ರೈತರ ಬೇಸಾಯದ ಬದುಕು ಪಲ್ಲಟಗೊಳಿಸುವ ಅವೈಜ್ಞಾನಿಕವಾಗಿದ್ದು, ಜೀವ ವಿರೋಧಿ, ಜನವಿರೋಧಿ, ಸಂವಿಧಾನ ವಿರೋಧಿ, ಕರಾಳ, ಅಪಾಯಕಾರಿಯಾಗಿದೆ ಎಂದರು.

ಅಮ್ಯೂಸ್ ಮೆಂಟ್ (ಡಿಸ್ನಿಲ್ಯಾಂಡ್) ಪಾರ್ಕ್ ನಿರ್ಮಾಣ ಯೋಜನೆಯ ಟೆಂಡರ್‌ನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು. ಯಾವುದೇ ಕಾರಣಕ್ಕೂಜಾರಿಗೆ ಜನರು ಅವಕಾಶ ನೀಡಬಾರದು. ಈಗಲೇ ಜನರು ಜಾಗೃತರಾಗಿ ಒಕ್ಕೋರಲಿನಿಂದ ವಿರೋಧಿಸಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ಸುನಂದಾ ಜಯರಾಂ ಮಾತನಾಡಿ, ಕೆಆರ್‌ಎಸ್ ಅಣೆಕಟ್ಟೆ ಭದ್ರತೆ ಹಾಗೂ ಸುರಕ್ಷತೆ ಹಿತ ದೃಷ್ಟಿಯಿಂದ ಇರುವ ಅಣೆಕಟ್ಟೆಗೆ ಜೋಡಣೆಯ ಸಮಾನಂತರ ಇನ್ನೊಂದು ಅಣೆಕಟ್ಟನ್ನು ತುರ್ತಾಗಿ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಬಳಸಲು ಮುಂದಾಗಿರುವ 2663 ಕೋಟಿ ರು. ಹಣವನ್ನೇ ಈ ಕಾಮಗಾರಿಗೆ ಉಪಯೋಗಿಸಬೇಕು ಎಂದು ಒತ್ತಾಯಿಸಿದರು.

ಅಣೆಕಟ್ಟೆಗಳ ಆಯಸ್ಸು 50-60 ವರ್ಷಗಳು ಮಾತ್ರ. ಅಣೆಕಟ್ಟೆ ಸುರಕ್ಷಿತ ಅನ್ವಯ ಈ ಯೋಜನೆಗೆ ಇದೀಗ ನಿರ್ಮಿಸಲಾಗುವ ಅಮ್ಯೂಸ್ ಮೆಂಟ್ ಪಾರ್ಕಿನಿಂದ ಅಪಾಯ ಎದುರಾಗಲಿದೆ. ಕೆಆರ್‌ಎಸ್ ಆಣೆಕಟ್ಟು ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಹಾಗೂ ಅಣೆಕಟ್ಟೆಗೆ ಅಪಾಯವಾಗುವ ಇತರೆ ಯಾವುದೇ ತರದ ಚಟುವಟಿಕೆಗಳನ್ನು ಮಾಡಬಾರದು ಎಂದು ನಿಷೇಧಿಸಿದ್ದರೂ ಈ ಯೋಜನೆ ಮಾಡಿರುವುದು ಖಂಡನೀಯ. ಕೆಆರ್‌ಎಸ್ ಅಣೆಕಟ್ಟೆ ಪ್ರದೇಶ ಸೂಕ್ಷ್ಮ ಪ್ರದೇಶಕ್ಕೆ ಒಳಪಟ್ಟಿದ್ದು, ದಟ್ಟನೆಯ ಸಾರ್ವಜನಿಕ ಚಟುವಟಿಕೆಗಳಿಂದ ಮುಕ್ತವಾಗಿರಬೇಕು. ಅಣೆಕಟ್ಟು ಬಳಿ ಪವಾಸೋದ್ಯಮದ ಹೆಸರಿನಲ್ಲಿ ಉದ್ಯೋಗ ಸೃಷ್ಟಿ ಬೃಹತ್ ಮನರಂಜನೆ ಪಾರ್ಕ್‌ಗಳ ನಿರ್ಮಾಣ, ಸಾರ್ವಜನಿಕ ವಸತಿ ಸೌಲಭ್ಯ, ವ್ಯಾಪಾರ, ವ್ಯವಹಾರದಂತೆ ಈ ಚಟುವಟಿಕೆಗಳು ನಡೆಯಬಾರದು ಎಂದರು.

ಕೆಆರ್‌ಎಸ್ ಗ್ರಾ.ಪಂ ಅಧ್ಯಕ್ಷ ಜೆ.ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ, ಇಂಡವಾಳು ಚಂದ್ರಶೇಖರ್, ಬೋರಯ್ಯ, ಡಿಎಸ್‌ಎಸ್ ಮುಖಂಡ ಎಂ.ವಿ.ಕೃಷ್ಣ, ಜಯಕರ್ನಾಟಕ ಸಂಘಟನೆ ನಾರಾಯಣ ಸಭೆ ಕುರಿತು ಮಾತನಾಡಿದರು.

ಈ ವೇಳೆ ಕೆಆರ್‌ಎಸ್ ಗ್ರಾ.ಪಂ ಸದಸ್ಯ ಕೆ.ರಾಜು, ವಸಂತಕುಮಾರ್, ಮೂರ್ತಿ, ಮುಖಂಡರಾದ ನಾಗರಾಜು, ಪಳನಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ