ವಿಧಾನಸಭೆಯಲ್ಲಿ ರಾಮನಗರ ಕೋಲಾಹಲ

KannadaprabhaNewsNetwork | Updated : Feb 21 2024, 12:41 PM IST

ಸಾರಾಂಶ

ವಕೀಲರ ವಿರುದ್ಧ ಕೇಸ್‌ ಹಾಕಿದ್ದಕ್ಕೆ ವಿಪಕ್ಷ ಸಿಟ್ಟು ಮಾಡಿಕೊಂಡು ಬಾವಿಗಿಳಿದು ಧರಣಿ ನಡೆಸಿದೆ. ಇಂದು ಸರ್ಕಾರ ಈ ವಿಷಯವಾಗಿ ಉತ್ತರ ನೀಡಲಿದೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

ವಕೀಲರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರ ಕ್ರಮ ಖಂಡಿಸಿ ರಾಮನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸದನದಲ್ಲಿಯೂ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿದ ಪ್ರಸಂಗ ನಡೆದಿದ್ದು, ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಬಾವಿಗಿಳಿದು ಧರಣಿ ನಡೆಸಿದವು.

ಮಂಗಳವಾರ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಸರ್ಕಾರ ನೀಡಿದ ಉತ್ತರಕ್ಕೆ ಸಮಾಧಾನಗೊಳ್ಳದೆ ಬಿಜೆಪಿ-ಜೆಡಿಎಸ್‌ ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು. 

ಪ್ರತಿಪಕ್ಷದ ಸದಸ್ಯರ ಪ್ರತಿಭಟನೆ ನಡುವೆಯೇ ವಿಧೇಯಕಗಳ ಮಂಡನೆ ಮತ್ತು ಅಂಗೀಕಾರ ಪ್ರಕ್ರಿಯೆಗೆ ಸರ್ಕಾರ ಮುಂದಾದಾಗ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು.

ಸದನವನ್ನು ಮುಂದೂಡಿ ಸಂಧಾನ ನಡೆಸಬೇಕು ಎಂಬ ಒತ್ತಾಯ ಕೇಳಿಬಂತ. ಬಳಿಕ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸದನವನ್ನು ಮುಂದೂಡಿ ಸಂಧಾನ ನಡೆಸಿದರು. 

ಸಂಧಾನದ ಬಳಿಕ ಸದನ ಸೇರಿದಾಗ ಸರ್ಕಾರವು ಬುಧವಾರ ಮತ್ತೊಮ್ಮೆ ಉತ್ತರ ನೀಡುವುದಾಗಿ ಭರವಸೆ ನೀಡಿದ ನಂತರ ಧರಣಿಯನ್ನು ಕೈಬಿಡಲಾಯಿತು. 

ಬಳಿಕ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ವಿಷಯ ಪ್ರಸ್ತಾಪಿಸಿದ ಆರ್‌.ಅಶೋಕ್‌, ಜ್ಞಾನವ್ಯಾಪಿ ದೇಗುಲದಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಿದ ವಾರಾಣಸಿ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ವಕೀಲ ಚಾಂದ್‌ಪಾಷ ಅವಾಚ್ಯ ಶಬ್ದಗಳಿಂದ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಾರೆ. 

ಆತನ ಬೆಂಬಲಿಗರು ವಕೀಲರು ಸಭೆ ನಡೆಸುತ್ತಿದ್ದ ವೇಳೆ ದಾಂಧಲೆ ನಡೆಸಿರುವ ಬಗ್ಗೆ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಆದರೆ, ಚಾಂದ್‌ಪಾಷ ಬೆಂಬಲಿಗರು ನೀಡಿದ ದೂರಿನ ಮೇರೆಗೆ 40 ವಕೀಲರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಹೇಳಿದರು.

 ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ವಿಸ್ತೃತವಾಗಿ ಉತ್ತರ ನೀಡಿದರು. ವಕೀಲ ಚಾಂದ್‌ಪಾಷ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಅಲ್ಲದೇ, ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಮೇಲ್ನೋಟಕ್ಕೆ ಎಸ್‌ಐ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. 

ಆದರೂ ಚನ್ನಪಟ್ಟಣ ಡಿವೈಎಸ್‌ಪಿ ಅವರಿಗೆ ತನಿಖೆಗೆ ಸೂಚಿಸಲಾಗಿದ್ದು, ತನಿಖಾ ವರದಿ ಬಂದ ಬಳಿಕ ಕಾನೂನು ಕ್ರಮ ಜರುಗಿಸಲಾಗುವುದು. ಘಟನೆಯನ್ನು ಬೇರೆ ರೀತಿಯಲ್ಲಿ ಕೊಂಡೊಯ್ಯಬಾರದು. 

ಘಟನೆಯನ್ನು ಸರ್ಕಾರವು ಗಂಭೀರವಾಗಿ ತೆಗೆದುಕೊಂಡಿದೆ. ವಕೀಲರ ಸಂಘ, ರಾಮನಗರ ವಕೀಲರ ಸಂಘವು ಪ್ರತಿಭಟನೆಯನ್ನು ವಾಪಸ್‌ ಪಡೆದುಕೊಂಡು ಸಹಕರಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. 

ಸಚಿವರ ಉತ್ತರಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಇತರರು ಎಸ್ಐ ಅಮಾನತಿಗೆ ಆಗ್ರಹಿಸಿದರು. 

ಸರ್ಕಾರದ ಉತ್ತರಕ್ಕೆ ಸಮಾಧಾನಗೊಳ್ಳದೆ ಬಾವಿಗಿಳಿದು ಧರಣಿ ನಡೆಸಿದರು. ಪ್ರತಿಭಟನೆಯ ನಡುವೆಯೇ ಸಭಾಧ್ಯಕ್ಷರು ವಿಧೇಯಕಗಳ ಮಂಡನೆ ಮತ್ತು ಅಂಗೀಕಾರಕ್ಕೆ ಅನುವು ಮಾಡಿಕೊಟ್ಟರು.

ಸಭಾಧ್ಯಕ್ಷರ ನಡೆಯನ್ನು ಅಶೋಕ್‌ ತೀವ್ರವಾಗಿ ಟೀಕಿಸಿದರು. ಬಳಿಕ ಸಭಾಧ್ಯಕ್ಷರು ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಸಂಧಾನವನ್ನುಂಟು ಮಾಡಲು ಸದನವನ್ನು ಹತ್ತು ನಿಮಿಷ ಮುಂದೂಡಿದರು. 

ಸಂಧಾನದ ಬಳಿಕ ಸದನ ಸಮಾವೇಶಗೊಂಡಾಗ ಸರ್ಕಾರವು ಘಟನೆ ಕುರಿತು ಬುಧವಾರ ಮತ್ತೊಮ್ಮೆ ಉತ್ತರ ನೀಡಲಾಗುವುದು ಎಂದು ತಿಳಿಸಿತು. ತದನಂತರ ಪ್ರತಿಪಕ್ಷಗಳು ಧರಣಿಯನ್ನು ಕೈಬಿಟ್ಟಿದ್ದು, ಸದನವನ್ನು ಬುಧವಾರಕ್ಕೆ ಮುಂದೂಡಲಾಯಿತು.

Share this article