ಜಾಲಿ ಪಟ್ಟಣ ಪಂಚಾಯಿತಿ ನಗರಸಭೆಗೆ ಸೇರಿಸಲು ವಿರೋಧ

KannadaprabhaNewsNetwork | Published : Feb 15, 2024 1:31 AM

ಸಾರಾಂಶ

ಜಾಲಿ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ನಗರಸಭೆಗೆ ಸೇರಿಸುವ ಪ್ರಸ್ತಾವನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬುಧವಾರ ಪಂಚಾಯಿತಿಗೆ ನೂರಾರು ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಭಟ್ಕಳ:

ಜಾಲಿ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ನಗರಸಭೆಗೆ ಸೇರಿಸುವ ಪ್ರಸ್ತಾವನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಬುಧವಾರ ಪಂಚಾಯಿತಿಗೆ ನೂರಾರು ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಜಾಲಿ ಗ್ರಾಮ ಪಂಚಾಯಿತಿ ಇರುವುದನ್ನು ಏಳು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ಅಭಿವೃದ್ಧಿ ದೃಷ್ಟಿಯಿಂದ ಏನೂ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯಿತಿ ಆದ ಮೇಲೆ ತೆರಿಗೆ ಏರಿಕೆಯಾಗಿದ್ದು ಜನಸಾಮಾನ್ಯರ ಮೇಲೆ ಹೊರೆ ಬಿದ್ದಿದೆ. ಜಾಲಿಯಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದು, ಇದೀಗ ನಗರಸಭೆ ಮಾಡಿದರೆ ತೆರಿಗೆ ಹೆಚ್ಚಾಗಿ ಎಲ್ಲರಿಗೂ ಆರ್ಥಿಕವಾಗಿ ಹೊರೆಯಾಗಲಿದೆ. ನಗರಸಭೆ ಆದರೆ ರಿಯಲ್ ಎಸ್ಟೇಟ್ ದಂಧೆ ಹೆಚ್ಚಾಗಲಿದ್ದು, ಕೃಷಿ ಭೂಮಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಇನ್ನೂ ಸಾಧ್ಯವಾಗದೇ ಇರುವಾಗ ಇದೀಗ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಿರುವುದು ಹಾಸ್ಯಾಸ್ಪದವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.ಜನಾಭಿಪ್ರಾಯ ಕೇಳದೇ ನಗರಸಭೆ ಮಾಡುವ ಹುನ್ನಾರ ನಡೆಸಲಾಗಿದೆ. ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಸರ್ಕಾರ ಸಮರ್ಪಕವಾದ ಮೂಲಭೂತ ಸೌಕರ್ಯ ಒದಗಿಸಬೇಕು. ಅದನ್ನು ಬಿಟ್ಟು ಜನಾಭಿಪ್ರಾಯಕ್ಕೆ ವಿರುದ್ಧವಾಗಿ ನಗರಸಭೆ ಮಾಡಲು ಮುಂದಾದಲ್ಲಿ ಸಾರ್ವಜನಿಕರ ತೀವ್ರ ವಿರೋಧ ಇದೆ. ಯಾವುದೇ ಕಾರಣಕ್ಕೂ ಜಾಲಿ ಪಟ್ಟಣ ಪಂಚಾಯಿತಿಯನ್ನು ನಗರಸಭೆ ಮಾಡಲು ಮುಂದಾಗಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸ್ಥಳಕ್ಕಾಗಮಿಸಿದ ಆಡಳಿತಾಧಿಕಾರಿ ಮತ್ತು ತಹಸೀಲ್ದಾರ್‌ ತಿಪ್ಪೇಸ್ವಾಮಿ ಅವರಿಗೂ ಜಾಲಿ ಪಟ್ಟಣ ಪಂಚಾಯಿತಿಯನ್ನು ನಗರಸಭೆ ಮಾಡುವ ಪ್ರಸ್ತಾವ ಕೈಬಿಡಬೇಕು. ಒಂದೊಮ್ಮೆ ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಾಡಿದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಮನವಿ ನೀಡಲಾಯಿತು.ಪ್ರತಿಭಟನೆಯಲ್ಲಿ ಜಾಲಿ ಪಪಂ ಸದಸ್ಯರಾದ ದಯಾನಂದ ನಾಯ್ಕ, ಪದ್ಮಾವತಿ ನಾಯ್ಕ ಸೇರಿದಂತೆ ಹಲವರಿದ್ದರು.

Share this article