ಕಾನೂನಿನ ಚೌಕಟ್ಟು ಮೀರಿ ಕಟ್ಟಡ ನಿರ್ಮಾಣಕ್ಕೆ ವಿರೋಧ: ತಮ್ಮಯ್ಯ

KannadaprabhaNewsNetwork | Published : Nov 26, 2023 1:15 AM

ಸಾರಾಂಶ

ಕಾನೂನಿನ ಚೌಕಟ್ಟು ಮೀರಿ ಕಟ್ಟಡ ನಿರ್ಮಾಣಕ್ಕೆ ವಿರೋಧ: ತಮ್ಮಯ್ಯ ನಗರದ ಜಿಲ್ಲಾ ಆಟದ ಮೈದಾನದಲ್ಲಿ ವನ್ಯಜೀವಿ ಸಪ್ತಾಹ

ನಗರದ ಸುಭಾಶ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ವೈಲ್ಡ್‌ಕ್ಯಾಟ್-ಸಿ ಆಶ್ರಯದಲ್ಲಿ ವನ್ಯಜೀವಿ ಸಪ್ತಾಹ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರೆಸಾರ್ಟ್ ಹಾಗೂ ಹೋಂ ಸ್ಟೇಗಳ ನಿರ್ಮಾಣ ಜಿಲ್ಲೆಯಲ್ಲಿ ಅಧಿಕವಾಗುತ್ತಿದೆ. ಆದರೆ, ಇವುಗಳ ನಿರ್ಮಾಣ ಕಾನೂನು ಚೌಕಟ್ಟಿನೊಳಗೆ ಇರಬೇಕೇ ಹೊರತು ಅದನ್ನು ಮೀರಿ ನಿರ್ಮಾಣ ಮಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಸುಭಾಶ್‌ ಚಂದ್ರ ಬೋಸ್‌ ಜಿಲ್ಲಾ ಆಟದ ಮೈದಾನದಲ್ಲಿ ವೈಲ್ಡ್‌ಕ್ಯಾಟ್-ಸಿ ಆಶ್ರಯದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಶನಿವಾರ ಏರ್ಪಡಿಸಿದ್ದ 22 ಕಿ.ಮೀ. ಅಂತರದ ‘ಸೈಕಲ್ ತುಳಿ- ಪರಿಸರ ತಿಳಿ’ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರವಾಸೋದ್ಯಮ ಹೆಚ್ಚಳದಿಂದ ಈ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಅವಾಂತರವೂ ಹೆಚ್ಚಾಗಿದೆ. ಅದಕ್ಕೆ ನಾವು ತಡೆ ಹಾಕಲೇಬೇಕಾಗಿದೆ. ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದ ಶಾಸಕರು, ಈ ಬಗ್ಗೆ ಜಿಲ್ಲಾಡಳಿತ ಸಹ ಆಲೋಚಿಸುತ್ತಿದೆ. ಒಂದೇ ಬಾರಿಗೆ ನಿಷೇಧ ಮಾಡುವ ಬದಲು ಪ್ರವಾಸಿ ತಾಣಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡುವ ಆಲೋಚನೆಯೂ ಜಿಲ್ಲಾಡಳಿತದ ಮುಂದಿದೆ. 5 ಲೀಟರ್‌ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್‌ಗಳನ್ನು ಮಾರಾಟ ಮಾಡುವುದಕ್ಕೆ ನಿರ್ಬಂಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು. ಪ್ಲಾಸ್ಟಿಕ್ ಬಳಕೆ ತೀವ್ರವಾಗಿ ಗಿರಿ ಪ್ರದೇಶದ ಜಲಮೂಲಗಳಲ್ಲಿ ನೀರಿನ ಪಸೆಗಿಂತ ಪ್ಲಾಸ್ಟಿಕ್ ಚೀಲಗಳ ಹಾವಳಿಯೇ ಹೆಚ್ಚಾಗಿ ಕಂಡು ಬರುತ್ತಿದ್ದು, ಇದು ನೀರಿನ ಹರಿವಿಗೆ ಹಾಗೂ ಅಂತರ್ಜಲದ ಹೆಚ್ಚಳಕ್ಕೆ ಮಾರಕವಾಗಿದೆ ಎಂದು ಎಚ್ಚರಿಸಿದರು.

ಈ ಭೂಮಿಯಲ್ಲಿ ಬದುಕಲು ನಮ್ಮಷ್ಟೇ ಹಕ್ಕು ವನ್ಯಜೀವಿಗಳಿಗೂ ಇದೆ. ಪಶ್ಚಿಮಘಟ್ಟ ವನ್ಯಜೀವಿಗಳ ಆವಾಸಸ್ಥಾನವಷ್ಟೇ ಅಲ್ಲ, ಈ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ಪಂಚ ನದಿಗಳೂ ಜನ್ಮ ತಳೆಯುವ ಸ್ಥಳವಾಗಿದೆ. ಪಶ್ಚಿಮ ಘಟ್ಟವನ್ನು ಸಹಸ್ರಾರು ವರ್ಷಗಳಿಂದ ನಮ್ಮ ಪೂರ್ವಿಕರು ರಕ್ಷಿಸಿಕೊಂಡು ಬಂದಿರುವುದರಿಂದ ನಾವು ಆರೋಗ್ಯ ಪೂರ್ಣವಾಗಿ ಬದುಕಲು ಹಾಗೂ ನೀರನ್ನು ಪಡೆಯಲು ಸಾಧ್ಯವಾಗಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಈ ನದಿಗಳು ಕೇವಲ ನಮ್ಮ ಜಿಲ್ಲೆಗೆ ಮಾತ್ರವಲ್ಲ, ಈ ನಾಡಿನ ಬಹುತೇಕ ಪ್ರದೇಶಕ್ಕೆ ನೀರುಣಿಸುತ್ತವೆ. ಆ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟದ ಸಂರಕ್ಷಣೆ ಅಗತ್ಯ ಎಂದರು. ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾ ಶಂಕರ ಮಾತನಾಡಿ, ಶಾಸಕರು ಅತ್ಯಂತ ಸೂಕ್ಷ್ಮ ಪ್ರದೇಶವಾದ ಮುಳ್ಳಯ್ಯನಗಿರಿಯಲ್ಲಿ ರೋಪ್‌ವೇ ನಿರ್ಮಾಣಕ್ಕೆ ಸರ್ಕಾರ ಮುಂದಾಗಲು ಅವಕಾಶ ನೀಡದೆ, ಅದರಿಂದ ಪರಿಸರಕ್ಕಾಗುವ ಪರಿಣಾಮ ವಿವರಿಸಿ ತಡೆಯೊಡ್ಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪೌರಾಯುಕ್ತ ಬಿ.ಸಿ.ಬಸವರಾಜ್ ಭಾಗವಹಿಸಿ ವಿದ್ಯಾರ್ಥಿಗಳ ಸೈಕಲ್‌ ಜಾಥಾ ಯಶಸ್ವಿಯಾಗಲೆಂದು ಹಾರೈಸಿದರು. ವೈಲ್ಡ್‌ಕ್ಯಾಟ್-ಸಿ ಮುಖ್ಯಸ್ಥ ಶ್ರೀದೇವ್ ಹುಲಿಕೆರೆ, ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಮುಖ್ಯಸ್ಥ ಡಿ.ವಿ.ಗಿರೀಶ್ ಸೇರಿದಂತೆ ವೈಲ್ಡ್‌ಕ್ಯಾಟ್-ಸಿ. ತಂಡದ ಸದಸ್ಯರು ಸೈಕಲ್‌ ಜಾಥಾ ಉಸ್ತುವಾರಿ ನಿರ್ವಹಿಸಿದರು.

25 ಕೆಸಿಕೆಎಂ 4ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ವೈಲ್ಡ್‌ಕ್ಯಾಟ್-ಸಿ ಆಶ್ರಯದಲ್ಲಿ ವನ್ಯಜೀವಿ ಸಪ್ತಾಹದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ‘ಸೈಕಲ್ ತುಳಿ- ಪರಿಸರ ತಿಳಿ’ ಸೈಕಲ್‌ ಜಾಥಾಕ್ಕೆ ಶಾಸಕ ಎಚ್‌.ಡಿ. ತಮ್ಮಯ್ಯ ಚಾಲನೆ ನೀಡಿದರು.

Share this article