ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್, ಡಿಸ್ಟಿಲರಿ ಘಟಕ ಸ್ಥಾಪನೆಗೆ ವಿರೋಧ

KannadaprabhaNewsNetwork | Published : Feb 28, 2024 2:32 AM

ಸಾರಾಂಶ

ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿದೆ. ಈಗಾಗಲೇ ಕಾರ್ಖಾನೆ ಆರಂಭಿಸಿರುವ ವಿದ್ಯುತ್ ಉತ್ಪಾದನಾ ಘಟಕದ ಹಾರು ಬೂದಿಯ ಸಮಸ್ಯೆಯಿಂದ ಸುತ್ತಮುತ್ತಲ ಪರಿಸರ ಹಾನಿಗೊಂಡಿದೆ. ಹಾರು ಬೂದಿಯ ಸಮಸ್ಯೆಯಿಂದ ರೈತರ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ನಾವು ರೈತರು ಸತ್ತರೆ ನಮ್ಮನ್ನು ಇಲ್ಲಿಯೇ ಹೂಳಬೇಕು. ಕಾರ್ಖಾನೆಯವರು ಬಂಡವಾಳ ಮಾಡಿಕೊಂಡು ಎಲ್ಲಿಯೂ ಬದುಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆತಾಲೂಕಿನ ಮಾಕವಳ್ಳಿ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆ ವಿರೋಧಿಸಿ ರೈತ ಸಂಘ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿದೆ.

ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಕಾರ್ಖಾನೆ ವ್ಯಾಪ್ತಿಯ ರಾಮೇನಹಳ್ಳಿ, ಬೀಚನಹಳ್ಳಿ, ಕಾರಿಗನಹಳ್ಳಿ, ಮಾಣಿಕನಹಳ್ಳಿ ಮುಂತಾದ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪರಿಸರ ಜಾಗೃತಿ ಕರಪತ್ರಗಳನ್ನು ಹಂಚಿ ಸಭೆಗಳನ್ನು ನಡೆಸುವ ಮೂಲಕ ಆಂದೋಲನಾ ನಡೆಸುತ್ತಿದ್ದಾರೆ.

ನಾವು ರೈತರು ಸತ್ತರೆ ನಮ್ಮನ್ನು ಇಲ್ಲಿಯೇ ಹೂಳಬೇಕು. ಕಾರ್ಖಾನೆಯವರು ಬಂಡವಾಳ ಮಾಡಿಕೊಂಡು ಎಲ್ಲಿಯೂ ಬದುಕುತ್ತಿದ್ದಾರೆ. ಕಾರ್ಖಾನೆ ಮದ್ಯಸಾರ ಘಟಕವನ್ನು ಆರಂಭಿಸಿದರೆ ನಮ್ಮ ಮಕ್ಕಳಿಗೆ ನಾವೇ ವಿಷ ಕೊಟ್ಟಂತಾಗುತ್ತದೆ ಎಂದು ಎಚ್ಚರಿಸಿದರು.

ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿದೆ. ಈಗಾಗಲೇ ಕಾರ್ಖಾನೆ ಆರಂಭಿಸಿರುವ ವಿದ್ಯುತ್ ಉತ್ಪಾದನಾ ಘಟಕದ ಹಾರು ಬೂದಿಯ ಸಮಸ್ಯೆಯಿಂದ ಸುತ್ತಮುತ್ತಲ ಪರಿಸರ ಹಾನಿಗೊಂಡಿದೆ. ಹಾರು ಬೂದಿಯ ಸಮಸ್ಯೆಯಿಂದ ರೈತರ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ ಎಂದು ತಿಳಿಸಿದ್ದಾರೆ.

ಕೋಜನ್ ಘಟಕ ಆರಂಭಿಸುವ ವೇಳೆ ಕಾರ್ಖಾನೆ ಈ ಭಾಗದ ರೈತರಿಗೆ ನೀಡಿದ ವಾಗ್ದಾನದಂತೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳದೆ ಹಳೆಯ ತಂತ್ರಜ್ಞಾನದಲ್ಲಿಯೇ ಕಾರ್ಖಾನೆ ನಡೆಸುತ್ತಿದೆ. ರೈತರು ಪೂರೈಸಿದ ಕಬ್ಬಿಗೆ ಹೆಚ್ಚು ಬೆಲೆ ನೀಡುವುದಾಗಿ ಹೇಳಿದ್ದ ತನ್ನ ಮಾತಿನಂತೆ ನಡೆದುಕೊಳ್ಳದೆ ಕೇಂದ್ರ ಸರ್ಕಾರದ ಎಂಎಸ್ ಪಿ ದರವನ್ನು ಮಾತ್ರ ನೀಡುತ್ತಿದೆ ಎಂದು ದೂರಿದ್ದಾರೆ.

ಕಾರ್ಖಾನೆ ಡಿಸ್ಟಿಲರಿ ಘಟಕ ಆರಂಭ ವಿರೋಧಿಸಿ ರಾಜ್ಯ ರೈತಸಂಘ ಚೆನ್ನೈ ನಗರದ ಹಸಿರು ನ್ಯಾಯಾಲಯಕ್ಕೆ ದೂರು ನೀಡಿದ ವೇಳೆ ಕಾರ್ಖಾನೆ ಕಬ್ಬು ಅರೆಯುವಿಕೆಯನ್ನು ಹೊರತು ಪಡಿಸಿ ಮದ್ಯಸಾರ ಘಟಕ ಸ್ಥಾಪಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ಲಿಖಿತವಾಗಿ ಹೇಳಿಕೆ ನೀಡಿದೆ. ಆದರೆ, ಈಗ ತನ್ನ ಹೇಳಿಕೆಯನ್ನು ಉಲ್ಲಂಘಿಸಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆ ಎಥೆನಾಲ್ ಉತ್ಪಾದನೆ ಮತ್ತು ಮದ್ಯಸಾರ ಘಟಕ ಆರಂಭಕ್ಕೆ ಸಿದ್ದತೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ಗುತ್ತಿಗೆದಾರರ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕಕ್ಕೆ ರೈತರ ವಿರೋಧವಿಲ್ಲ ಎನ್ನುವ ತಪ್ಪು ಸಂದೇಶ ನೀಡಿ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಕಾರ್ಖಾನೆ ಫೀಲ್ಡ್ ಮೆನ್ ಗಳು ಮತ್ತು ಅಧಿಕಾರಿಗಳು ರೈತರ ಮನೆ ಮನೆಗೆ ತೆರಳಿ ನೈಜ ವಿಚಾರವನ್ನು ಮುಚ್ಚಿಟ್ಟು ರೈತರಿಂದ ಎಥೆನಾಲ್ ಮತ್ತು ಮದ್ಯಸಾರ ಘಟಕದ ಪರವಾಗಿ ಸಹಿ ಸಂಗ್ರಹ ಮಾಡುತ್ತಿದ್ದಾರೆ ಎಂದು ದೂರಿದರು.

ಕಾರ್ಖಾನೆ ಎಥೆನಾಲ್ ಘಟಕ ಮತ್ತು ಮದ್ಯಸಾರ ಘಟಕವನ್ನು ಆರಂಭಿಸಿದರೆ ಕಾರ್ಖಾನೆ ಸುತ್ತಾ ಮುತ್ತಲ 5 ಕಿ.ಮಿ ವ್ಯಾಪ್ತಿಯ ಹಳ್ಳಿ ಜನರ ಬದುಕು ನಾಶವಾಗಲಿದೆ. ಕಾರ್ಖಾನೆಯ ಕೆಳಭಾಗದ ಹೇಮಾವತಿ ನದಿ ನೀರನ್ನು ತಾಲೂಕಿನ ನೂರಾರು ಗ್ರಾಮಗಳ ಜನ ಕುಡಿಯಲು ಬಳಸುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಜಾಗೃತಿ ಸಭೆಗಳಲ್ಲಿ ರೈತರು ಜನರಿಗೆ ಅರಿವು ಮೂಡಿಸುತ್ತಿದ್ದಾರೆ.

ಹೇಮಾವತಿ ನದಿ ಉಳಿಸಿ ಮತ್ತು ಪರಿಸರ ಸಂರಕ್ಷಿಸಿ ಆಂದೋಲನ ಸಮಿತಿ ವತಿಯಿಂದ ಮಾ.1 ರಂದು ಬೆಂಗಳೂರಿನ ರಾಜ್ಯ ಪರಿಸರ ಮಾಲಿನ್ಯ ಇಲಾಖೆ ಅಧ್ಯಕ್ಷರು ಮತ್ತು ಸದಸ್ಯರ ಕಚೇರಿಯಲ್ಲಿ ಸಾಮೂಹಿಕ ಚರ್ಚೆ ನಡೆಯಲಿದೆ. ಎಥೆನಾಲ್ ಹಾಗೂ ಡಿಸ್ಟಿಲರಿ ಸ್ಥಾಪಿಸುವ ಸಂಬಂಧ ಮಾ.6 ರಂದು ಜಿಲ್ಲಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ಅಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಕರೆದಿರುವ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯನ್ನು ಸಭೆಯನ್ನು ರದ್ದುಪಡಿಸಬೇಕು ಎಂದು ರೈತರು ಆಗ್ರಹಿಸಿದರು.

ಈ ವೇಳೆ ರೈತಪರ ಹೋರಾಟಗಾರಗಾರದ ಕಾರಿಗನಹಳ್ಳಿ ಪುಟ್ಟೇಗೌಡ, ಕರೋಟಿ ತಮ್ಮಯ್ಯ, ರಾಮೇಗೌಡ, ನಂಜೇಗೌಡ, ರಾಜೇಗೌಡ, ಮಂಜೇಗೌಡ, ನಿಂಗರಾಜೇಗೌಡ, ಹುಚ್ಚೇಗೌಡ, ಅಂಗಡಿ ಮಂಜುನಾಥ್, ಸತೀಶ್, ಗೌರೀಶ್, ಯುವ ಮುಖಂಡರಾದ ಸ್ವಾಮಿ, ಶಿವಕುಮಾರ್, ವಿಜಯ್, ಪರಮೇಶ್, ಚನ್ನೇಗೌಡ ಯೋಗೇಶ್, ಮಂಜುನಾಥ್, ಮಹಾದೇವ್, ಬಲರಾಮ್, ಬೆಂಕಿ ದೇವರಾಜ್, ದೇವರಾಜ್, ಸುರೇಂದ್ರ, ಮಂಜೇಗೌಡ, ಕರೋಟಿ ಪಾಪೇಗೌಡ, ಶಂಕರ್, ಪುಟ್ಟೇಗೌಡ, ಪ್ರಸನ್ನ, ಅಜಯ್, ಹರೀಶ್ ಸೇರಿದಂತೆ ಮುಖಂಡರು ಇದ್ದರು.

Share this article