ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಕ್ಕೆ ವಿರೋಧ

KannadaprabhaNewsNetwork |  
Published : Dec 20, 2023, 01:15 AM IST
19ಕೆಡಿವಿಜಿ1, 2-ದಾವಣಗೆರೆಯಲ್ಲಿ ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಟಪೋರ್ಟ್ ಏಜೆಂಟರ್ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಿಫ್ಲೆಕ್ಟಿವ್ ಟೇಪ್‌, ಕ್ಯೂಆರ್‌ ಕೋಡ್‌, ಎಚ್‌ಎಸ್‌ಆರ್‌ಪಿ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಕಡ್ಡಾಯದ ನಿಯಮಗಳು ವಾಹನ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿವೆ. ರಿಫ್ಲೆಕ್ಟಿವ್‌ ಟೇಬ್ ಮಾರುಕಟ್ಟೆಯಲ್ಲಿ 53 ರು.ಗೆ ಲಭ್ಯವಿದ್ದು, ಅದನ್ನು ಕ್ಯೂಆರ್ ಕೋಡ್‌ ಎಂಬುದಾಗಿ ಯಾವುದೇ ರೀತಿಯ ಕೇಂದ್ರ, ರಾಜ್ಯ ಸರ್ಕಾರಗಳ ಮೋಟಾರು ವಾಹನಗಳ ಕಾಯ್ದೆಯಲ್ಲಿ ನಿಯಮ ಇಲ್ಲದಿದ್ದರೂ, ಇಂತಹ ಆದೇಶ ಹೊರಡಿಸಲಾಗಿದೆ.

* ಕ್ಯೂಆರ್ ಕೋಡ್ ಏಕೆಂಬುದೇ ಅರ್ಥವಾಗುತ್ತಿಲ್ಲ: ಜಿಲ್ಲಾ ಲಾರಿ ಮಾಲೀಕರು, ಟ್ರಾನ್ಸಪೋರ್ಟ್ ಏಜೆಂಟರ್ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ, ರಾಜ್ಯ ಸರ್ಕಾರಗಳು ವಾಹನ ಮಾಲೀಕರ ಮೇಲೆ ಇಲ್ಲಸಲ್ಲದ ನಿಯಮಗಳ ಹೇರಿ ಸಂಕಷ್ಟಕ್ಕೀಡು ಮಾಡುತ್ತಿರುವಾಗಲೇ ಇದೀಗ ರಿಫ್ಲೆಕ್ಟಿವ್ ಟೇಪ್ ಜೊತೆಗೆ ಕ್ಯೂಆರ್‌ ಕೋಡ್, ಎಚ್‌ಎಸ್‌ಆರ್‌ಪಿ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ ) ಕಡ್ಡಾಯವನ್ನು ಜಿಲ್ಲಾ ಲಾರಿ ಮಾಲೀಕರು ಮತ್ತು ಟ್ರಾನ್ಸಪೋರ್ಟ್ ಏಜೆಂಟರ್ ಸಂಘ ತೀವ್ರವಾಗಿ ವಿರೋಧಿಸಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಸೈಫುಲ್ಲಾ, ರಿಫ್ಲೆಕ್ಟಿವ್ ಟೇಪ್‌, ಕ್ಯೂಆರ್‌ ಕೋಡ್‌, ಎಚ್‌ಎಸ್‌ಆರ್‌ಪಿ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಕಡ್ಡಾಯದ ನಿಯಮಗಳು ವಾಹನ ಮಾಲೀಕರಿಗೆ ಆರ್ಥಿಕ ಹೊರೆಯಾಗುತ್ತಿವೆ. ರಿಫ್ಲೆಕ್ಟಿವ್‌ ಟೇಬ್ ಮಾರುಕಟ್ಟೆಯಲ್ಲಿ 53 ರು.ಗೆ ಲಭ್ಯವಿದ್ದು, ಅದನ್ನು ಕ್ಯೂಆರ್ ಕೋಡ್‌ ಎಂಬುದಾಗಿ ಯಾವುದೇ ರೀತಿಯ ಕೇಂದ್ರ, ರಾಜ್ಯ ಸರ್ಕಾರಗಳ ಮೋಟಾರು ವಾಹನಗಳ ಕಾಯ್ದೆಯಲ್ಲಿ ನಿಯಮ ಇಲ್ಲದಿದ್ದರೂ, ಇಂತಹ ಆದೇಶ ಹೊರಡಿಸಲಾಗಿದೆ ಎಂದು ದೂರಿದರು.

ಕೇವಲ 53 ರು.ಗೆ ಸಿಗುವ ರಿಫ್ಲೆಕ್ಟರ್ ಟೇಪನ್ನು ಸಾರಿಗೆ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಿ, 130 ರು.ಗೆ 1 ಮೀಟರ್‌ನಂತೆ ಕೆಲವು ಮಾರಾಟಗಾರರಿಗೆ ಸರ್ಕಾರದಿಂದ ಅಧಿಕೃತ ಮಾರಾಟಗಾರರೆಂದು ನೇಮಿಸಿ, ಜನರ ಸುಲಿಗೆ ಮಾಡುವ ದಂಧೆ ಶುರುವಾಗಿದೆ. ರಾಜ್ಯ, ಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಎಆರ್‌ಎಐ ಮಾನ್ಯತೆ ಪಡೆದಿದ್ದ ರಿಫ್ಲೆಕ್ಟಿವ್ ಟೇಪನ್ನು ವಾಹನಗಳಿಗೆ ಅಳವಡಿಸಬೇಕೆಂದಿದೆ. ಇದಕ್ಕೆ ಸುರಕ್ಷತೆ ದೃಷ್ಟಿಯಿಂದ ನಮ್ಮ ವಿರೋಧವಿಲ್ಲ. ಆದರೆ, ಕ್ಯೂಆರ್ ಕೋಡ್ ಯಾಕೆಂಬುದೇ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಹಳೆಯ ವಾಹನಗಳಿಗೆ ವಿನಾಯಿತಿ ನೀಡಿ:

ಭಾರೀ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸುವುದರಿಂದ ಅತೀ ಕೀಳು ಮಟ್ಟವಾಗಿದ್ದರಿಂದ ಬೇಗ ಹಾಳಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಳಾದರೆ ಮತ್ತೆ ₹1800 ವೆಚ್ಚವಾಗುತ್ತದೆ. 2018ರ ನಂತರ ವಾಹನಗಳಿಗೆ ನಿಮ್ಮ ಆದೇಶದ ಪ್ರಕಾರ ಹೊಸದಾಗಿ ಉತ್ಪಾದನೆಯಾಗುವ ವಾಹನಗಳಿಗೆ ಅಳವಡಿಸಿ, ಹಳೆಯ ವಾಹನಗಳಿಗೆ ಎಚ್ಎಸ್‌ಆರ್‌ಪಿಯಿಂದ ವಿನಾಯಿತಿ ನೀಡಬೇಕು. ಸರ್ಕಾರಗಳು ಇಂತಹ ನಿಮಯಗಳ ಮಾಡುವ ಮುನ್ನ ವಾಹನಗಳ ಮಾಲೀಕರ ಆರ್ಥಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಮುಂದುವರಿಯಬೇಕು ಎಂದು ಆಗ್ರಹಿಸಿದರು.

ಲಾರಿ ಮಾಲೀಕರು, ಚಾಲಕರು ನೈಸರ್ಗಿಕ ವಿಕೋಪಗಳಿಗೆ ಹೆದರದೆ ಕೊರೋನಾ ವೇಳೆ ಜೀವದ ಹಂಗನ್ನೂ ತೊರೆದು, ಅಗತ್ಯ ವಸ್ತು ಸಾಗಾಣಿಕೆಯಲ್ಲಿ ವ್ಯತ್ಯಾಸವಾಗದೇ ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಲಾರಿ ಚಾಲಕರಿಗೆ ಪ್ರತಿ 100 ಕಿಮೀಗೆ ಒಂದರಂತೆ ತಂಗುದಾಣ ನಿರ್ಮಿಸಬೇಕು. ಈಗಾಗಲೇ ನಮ್ಮ ಬೇಡಿಕೆ ಕುರಿತಂತೆ ಸಾರಿಗೆ ಇಲಾಖೆ ಸೇರಿ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಿದ್ದು, ಇಲಾಖೆ ಸ್ಪಂದನೆ ನೋಡಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಿದ್ದೇವೆ ಎಂದು ಸೈಯದ್ ಸೈಫುಲ್ಲಾ ಸರ್ಕಾರಗಳಿಗೆ ಎಚ್ಚರಿಸಿದರು.

ಸಂಘದ ಭೀಮಣ್ಣ, ಎಸ್‌.ಕೆ.ಮಲ್ಲಿಕಾರ್ಜುನ, ಮಹಾಂತೇಶ ವಿ.ಒಣರೊಟ್ಟಿ, ವಿಜಯಕುಮಾರ ಇತರರಿದ್ದರು. ಡೀಲರ್ ಬಳಿಯೇ ಹೋಗಬೇಕಿರುವುದೇಕೆ?

ಎಚ್ಎಸ್ಆರ್‌ಪಿಯನ್ನು ಸರ್ಕಾರ ಎಲ್ಲಾ ವಾಹನಗಳಿಗೂ ಕಡ್ಡಾಯಗಳಿಸಿದ್ದು, ಇದರಿಂದ ವಾಹನ ಮಾಲೀಕರಿಗೆ ಯಾವ ರೀತಿ ಉಪಯೋಗ ಎಂಬುದು ಸ್ಪಷ್ಟಪಡಿಸಲಿ. ನಂಬರ್ ಪ್ಲೇಟ್‌ ಗುಣಮಟ್ಟ ಬಹಳಷ್ಟು ಕೀಳುಮಟ್ಟದ್ದಾಗಿದ್ದು, ಇದರಿಂದ ಏನುಪಯೋಗ? ನಂಬರ್ ಪ್ಲೇಟ್ ತಯಾರಿಕೆ ಕೆಲವೊಬ್ಬರಿಗೆ ಮಾತ್ರ ನೀಡಿದ್ದು, ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಡೀಲರ್ ಬಳಿ ಹೋಗಬೇಕಿರುವುದು ಎಷ್ಟರಮಟ್ಟಿಗೆ ಸರಿ? ನಂಬರ್ ಪ್ಲೇಟ್ ಅಳವಡಿಸಲು ಅದರ ವೆಚ್ಚ, ಸಮಯ, ಇಂಧನ ಖರ್ಚು ಯಾರು ಭರಿಸುತ್ತಾರೆ ಎಂದು ಸೈಯದ್ ಸೈಫುಲ್ಲಾ ಪ್ರಶ್ನಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ