- ಕೆಆರ್ ಮಾರುಕಟ್ಟೆ ಪಾರಂಪರಿಕ ಮಾರುಕಟ್ಟೆ ಘೋಷಣೆಗೆ ಒತ್ತಾಯ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ನಗರದ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಪಾರ್ಕಿಂಗ್ ಫಲಕ ಅಳವಡಿಸುವುದನ್ನು ವಿರೋಧಿಸಿ ಜಿಲ್ಲಾ ಬೀದಿಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದಿಂದ ಪಾಲಿಕೆ ಆಯುಕ್ತರಿಗೆ ಮನವಿ ಅರ್ಪಿಸಲಾಯಿತು.
ಶುಕ್ರವಾರ ಪದಾಧಿಕಾರಿಗಳ ನೇತೃತ್ವ ನಿಯೋಗವು ಪಾಲಿಕೆಯಲ್ಲಿ ಆಯುಕ್ತೆ ರೇಣುಕಾ ಅವರನ್ನು ಭೇಟಿಯಾಗಿ, ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ತೀವ್ರ ತೊಂದರೆ ಆಗಲಿದೆ. ಈ ಹಿಂದೆ ಮಾರುಕಟ್ಟೆ ಪ್ರದೇಶದಲ್ಲಿ ಇಲ್ಲದ ಪಾರ್ಕಿಂಗ್ ಫಲಕಗಳನ್ನು ಈಗ ಅಳವಡಿಕೆ ಸರಿಯಲ್ಲ. ಈ ಕ್ರಮವನ್ನು ಬೀದಿ ಬದಿಯ ವ್ಯಾಪಾರಸ್ಥರೆಲ್ಲರೂ ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ಸುಮಾರು 2-3 ತಲೆಮಾರುಗಳಿಂದಲೂ ಬೀದಿಬದಿ ವ್ಯಾಪಾರ ನಡೆಸಿಕೊಂಡೇ ಬದುಕು ಕಟ್ಟಿಕೊಂಡ ನೂರಾರು ಬೀದಿ ವ್ಯಾಪಾರಸ್ಥರಿಗೆ ಇದರಿಂದ ತೊಂದರೆಯಾಗಲಿದೆ. ಬೀದಿ ಬದಿ ವ್ಯಾಪಾರಸ್ಥರಿಗೆ ತೊಂದರೆ ನೀಡುವಂಥ ಕ್ರಮಗಳನ್ನು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳಾಗಲೀ, ಪೊಲೀಸ್ ಇಲಾಖೆ ಅಧಿಕಾರಿಗಳಾಗಲೀ, ಪಾಲಿಕೆಯಾಗಲೀ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.ಸುಪ್ರೀಂ ಕೋರ್ಟ್ ಆದೇಶ ಹಾಗೂ ವ್ಯಾಪಾರಸ್ಥರ ಜೀವನ ಸಂರಕ್ಷಣೆ ಮತ್ತು ನಿಯಂತ್ರಣಾ ಕಾಯ್ದೆ-2024ರ ಅನುಸಾರ ಬೀದಿ ಬದಿ ವ್ಯಾಪಾರಸ್ಥರು ನಾಲ್ಕೈದು ದಶಕದಿಂದ ಅದೇ ಜಾಗದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಕೆ.ಆರ್. ಮಾರುಕಟ್ಟೆ ಜಾಗ, ಆ ಪ್ರದೇಶ ಪಾರಂಪರಿಕ ಮಾರುಕಟ್ಟೆಯೆಂದು ಘೋಷಿಸುವಂತೆ ಆದೇಶಿಸಿದೆ. ಯಾವುದೇ ಕಾಮಗಾರಿಗಳನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ನಡೆಸಲು ತೊಂದರೆ ನೀಡುವಂತಿದ್ದರೆ ಅದನ್ನು ಕೈಗೊಳ್ಳದಂತೆ ಆದೇಶಿಸಿದ್ದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಸ್.ಇಸ್ಮಾಯಿಲ್ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಅರ್ಪಿಸಲಾಯಿತು. ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತೆ ರೇಣುಕಾ, ನಮ್ಮ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ಏ.6ರಂದು ಕೆ.ಆರ್. ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸುತ್ತಾರೆಂದು ಪ್ರತಿಕ್ರಿಯಿಸಿದರು.- - - -5ಕೆಡಿವಿಜಿ1:
ದಾವಣಗೆರೆ ಕೆ.ಆರ್. ಮಾರುಕಟ್ಟೆ ಬೀದಿಬದಿ ವ್ಯಾಪಾರಸ್ಥರ ವ್ಯಾಪಾರಕ್ಕೆ ಅಡಚಣೆ ಮಾಡುವಂತಹ ಪಾರ್ಕಿಂಗ್ ವ್ಯವಸ್ಥೆ ವಿರೋಧಿಸಿ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಮನವಿ ಅರ್ಪಿಸಲಾಯಿತು.