ಹೊನ್ನಾವರ: ಹೊನ್ನಾವರದಲ್ಲಿ ಉದ್ದೇಶಿತ ಒಲಿವ್ ರಿಡ್ಲಿ ಸಮುದ್ರ ಆಮೆ ಸಂರಕ್ಷಣೆ ಕೇಂದ್ರವನ್ನು ಕಾರವಾರಕ್ಕೆ ಸ್ಥಳಾಂತರಿಸುವ ಯೋಜನೆಗೆ ಸ್ಥಳೀಯ ಸಂರಕ್ಷಣಾ ಕಾರ್ಯಕರ್ತರು ಮತ್ತು ಮೀನುಗಾರ ಸಮುದಾಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಸಮುದ್ರ ಸಂರಕ್ಷಣಾ ಎನ್‌ಜಿಒಗಳಲ್ಲಿ ಒಂದಾದ ಹೊನ್ನಾವರದ ಫೌಂಡೇಶನ್, ಕೆ ಶೋರ್ ಆಮೆ ಪುನರ್ವಸತಿ ಕೇಂದ್ರದ ಸ್ಥಳ ಆಯ್ಕೆ ಸಂಬಂಧ ವಿಶ್ವಬ್ಯಾಂಕ್‌ಗೆ ತಮ್ಮ ಆತಂಕವನ್ನು ಅಧಿಕೃತವಾಗಿ ವ್ಯಕ್ತಪಡಿಸಿದೆ.ಭಾಗಶಃ ವಿಶ್ವಬ್ಯಾಂಕ್‌ನಿಂದ ಧನಸಹಾಯವನ್ನು ಪಡೆಯುತ್ತಿರುವ ಈ ಯೋಜನೆ, ವರ್ಷಗಳಿಂದ ಸಮುದ್ರ ಆಮೆಗಳ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೊನ್ನಾವರ ಫೌಂಡೇಶನ್, ಕರಾವಳಿಯಲ್ಲಿ ಓಲಿವ್ ರಿಡ್ಲಿ ಸಮುದ್ರ ಆಮೆಗಳ ಸಂರಕ್ಷಣೆಯಲ್ಲಿ ಹೊನ್ನಾವರದ ಮಹತ್ವವನ್ನು ತೋರಿಸಲು ಅಂಕಿ- ಅಂಶಗಳನ್ನು ಕಲೆ ಹಾಕಿದೆ. ಕರ್ನಾಟಕದ ಕರಾವಳಿಯಲ್ಲಿನ ಓಲಿವ್ ರಿಡ್ಲಿ ಗೂಡುಗಳು ಹೊನ್ನಾವರದಲ್ಲಿ ಅತಿ ಹೆಚ್ಚು ಕಾಣಸಿಗುತ್ತದೆ ಎಂದು ಹೊನ್ನಾವರ ಫೌಂಡೇಶನ್‌ನ ಟ್ರಸ್ಟಿ ಸಂದೀಪ ಹೆಗಡೆ ತಿಳಿಸಿದ್ದಾರೆ.ಇಲ್ಲಿ 112,063ಕ್ಕೂ ಹೆಚ್ಚು ಮೊಟ್ಟೆಗಳನ್ನು ಮತ್ತು 54,850 ಮರಿಗಳನ್ನು ದಾಖಲಿಸಲಾಗಿದೆ. ಹೀಗಾಗಿ ಕೇಂದ್ರವನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುವುದರಿಂದ ಸಂರಕ್ಷಣಾ ಕೆಲಸದ ಜತೆಗೆ ಈ ಪ್ರದೇಶದಲ್ಲಿ ಆಮೆ ಮರಿಗಳ ಬದುಕು ಸಹ ಅಪಾಯದಲ್ಲಿ ಸಿಲುಕುತ್ತದೆ ಎಂದು ತಿಳಿಸಿದ್ದಾರೆ. ಸ್ಥಳೀಯ ಮೀನುಗಾರರೂ ಪುನರ್ವಸತಿ ಕೇಂದ್ರಕ್ಕೆ ಹೊನ್ನಾವರವನ್ನು ಸೂಕ್ತ ಸ್ಥಳವೆಂದು ತಿಳಿಸಿದ್ದಾರೆ. ಹೊನ್ನಾವರದ ಮೀನುಗಾರ ಸಮುದಾಯದ ನಾಯಕ ರಾಜೇಶ್ ತಾಂಡೆಲ್, ಒಲಿವ್ ರಿಡ್ಲಿ ಆಮೆ ಪವಿತ್ರವಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಮತ್ತು ವಿಷ್ಣುವಿನ ಕೂರ್ಮ ಅವತಾರದ ಪ್ರತಿನಿಧಿಯಾಗಿದೆ. ಹೊನ್ನಾವರದ ಮೀನುಗಾರರು ಆಮೆಗಳ ಸಂರಕ್ಷಣೆಗೆ ಬದ್ಧರಾಗಿದ್ದಾರೆ ಮತ್ತು ಸಮುದ್ರದಲ್ಲಿ ಕಂಡುಬರುವ ಗಾಯಗೊಂಡ ಆಮೆಗಳನ್ನು ನಿರಂತರವಾಗಿ ರಕ್ಷಿಸುತ್ತಾರೆ. ಇಲ್ಲಿ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸುವುದರಿಂದ ಆಮೆಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದಿದ್ದಾರೆ.ಕರ್ನಾಟಕದ ಓಲಿವ್ ರಿಡ್ಲಿ ಸಮುದ್ರ ಆಮೆಗಳ ಬಗ್ಗೆ ವ್ಯಾಪಕವಾಗಿ ಸಂಶೋಧನೆ ನಡೆಸಿದ ಸಮುದ್ರಜೀವ ತಜ್ಞ ಡಾ. ಪ್ರಕಾಶ್ ಮೆಸ್ತಾ, ಒಲಿವ್ ರಿಡ್ಲಿ ಆಮೆಗಳು ವಿಶಿಷ್ಟ ಜೈವಿಕ ವೈಶಿಷ್ಟ್ಯತೆಯನ್ನು ಹೊಂದಿದ್ದು, ಹೊನ್ನಾವರದ ಕೇಂದ್ರವನ್ನು ಸ್ಥಳಾಂತರಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ: ರೈತರಿಂದ ಅರ್ಜಿ
ಮುಂಡಗೋಡ: ತೋಟಗಾರಿಕೆ ಇಲಾಖೆಯಿಂದ ೨೦೨೫- ೨೬ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳುವ ವೈಯಕ್ತಿಕ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಲು ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.ಪ್ರತಿ ಅರ್ಹ ಕುಟುಂಬಕ್ಕೆ ವೈಯಕ್ತಿಕ ಕಾಮಗಾರಿಗಳಡಿ ಗರಿಷ್ಠ ಮೊತ್ತ ₹೫ ಲಕ್ಷ ಪಡೆಯಬಹುದು. ರೈತರು ತಮ್ಮ ಉದ್ಯೋಗ ಚೀಟಿ, ಆಧಾರ ಕಾರ್ಡ್ ಮತ್ತು ಜಮೀನಿನ ರೆಕಾರ್ಡ್‌ನೊಂದಿಗೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಹಾಗೂ ತೋಟಗಾರಿಕೆ ಇಲಾಖೆ ಮುಂಡಗೋಡನಲ್ಲಿ ನ. ೨೧ರೊಳಗಾಗಿ ಅರ್ಜಿ ಸಲ್ಲಿಸಿ ಕ್ರಿಯಾಯೋಜನೆಯಲ್ಲಿ ಕಾಮಗಾರಿಗಳನ್ನು ಸೇರಿಸಿಕೊಳ್ಳುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣ ಕುಳ್ಳೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.