ಸಹಕಾರ ಕ್ಷೇತ್ರದಲ್ಲಿ ಮೀಸಲಿಗೆ ವಿರೋಧ; ಜಿಟಿಡಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork |  
Published : Feb 29, 2024, 02:02 AM IST
5 | Kannada Prabha

ಸಾರಾಂಶ

ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವುದನ್ನು ವಿರೋಧಿಸಿರುವ ಶಾಸಕ ಜಿ.ಟಿ.ದೇವೇಗೌಡರು ಸಂವಿಧಾನ ವಿರೋಧಿಯಾಗಿದ್ದಾರೆ ಎಂದು ಆರೋಪ. ಮೈಸೂರಿನ ಜಲದರ್ಶಿನಿ ಅತಿಥಿಗೃಹ ಆವರಣದ ಶಾಸಕ ಜಿ.ಟಿ.ದೇವೇಗೌಡರ ಕಚೇರಿ ಎದುರು ಕಾಂಗ್ರೆಸ್ ಮತ್ತು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಪದಾಧಿಕಾರಿಗಳಿಂದ ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ಮೈಸೂರುಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವುದನ್ನು ವಿರೋಧಿಸಿರುವ ಶಾಸಕ ಜಿ.ಟಿ.ದೇವೇಗೌಡರು ಸಂವಿಧಾನ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮತ್ತು ಕಾಂಗ್ರೆಸ್ ಪದಾಧಿಕಾರಿಗಳು ಬುಧವಾರ ಪ್ರತಿಭಟಿಸಿದರು.

ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೊಳಿಸುವ ಸಂಬಂಧ ವಿಷಯ ಪ್ರಸ್ತಾಪಕ್ಕೆ ಶಾಸಕ ಜಿ.ಟಿ. ದೇವೇಗೌಡರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ಸಂವಿಧಾನ ವಿರೋಧಿ ನಿಲುವು ಹೊಂದಿದ್ದಾರೆ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಅವಕಾಶವೇ ಇಲ್ಲದಂತಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಹಕಾರ ಕ್ಷೇತ್ರ ಕೆಲವೇ ಕೆಲವು ವರ್ಗದವರಿಗೆ ಮಾತ್ರ ಮೀಸಲಾಗುತ್ತದೆ. ಉಳಿದಂತೆ ಇತರ ವರ್ಗದವರಿಗೆ ಯಾವುದೇ ಅಧಿಕಾರ ಸ್ಥಾನಮಾನ ದೊರಕುವುದಿಲ್ಲ ಎಂದು ಅವರು ದೂರಿದರು.

ರಾಜ್ಯ ಸರ್ಕಾರ ಸಹಕಾರ ಕ್ಷೇತ್ರದಲ್ಲಿ ಹಿಂದುಳಿದ ಮತ್ತು ದಲಿತರಿಗೆ ಮೀಸಲಾತಿ ಜಾರಿಗೆ ತರುವ ವಿಧೇಯಕವನ್ನು ವಿರೋಧಿಸುವ ಶಾಸಕರು, ಚುನಾವಣೆಯಲ್ಲಿ ತಮಗೆ ಮೀಸಲಾತಿ ಫಲಾನುಭವಿಗಳಾದ ಹಿಂದುಳಿದ, ದಲಿತರ ಮತಗಳು ಬೇಡವೆಂದು ಘೋಷಿಸಲಿ ಎಂದು ಒತ್ತಾಯಿಸಿದರು.

ಸಂವಿಧಾನ ಮತ್ತು ಮೀಸಲು, ದಲಿತ ವಿರೋಧಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ಅಧಿಕಾರದ ದಾಹಕ್ಕಾಗಿ ರಾಷ್ಟ್ರ ಮಟ್ಟದಲ್ಲಿ ಕೋಮುವಾದಿ, ಮನುವಾದಿ ಪಕ್ಷವನ್ನು ಬೆಂಬಲಿಸಿದ್ದೀರಿ. ಬಿಜೆಪಿ ಪಕ್ಷದೊಂದಿಗೆ ಮೈತ್ರಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ಆಗುವುದನ್ನು ತಪ್ಪಿಸುವ ಹುನ್ನಾರ ನಡೆಸಿ ಹೊಂದಾಣಿಕೆ ಮಾಡಿಕೊಂಡಿದ್ದೀರಿ. ಮೈತ್ರಿ ಮೂಲಕ ದಲಿತರ ಬಗ್ಗೆ ಮಾತಾಡುವ ನೈತಿಕತೆ ಕಳೆದುಕೊಂಡಿದ್ದೀರಿ ಎಂದು ಪ್ರತಿಭಟನಾಕಾರರು ವಾಗ್ದಾಳಿ ನಡೆಸಿದರು.

ಜಿ.ಟಿ.ದೇವೇಗೌಡ ಅವರು ಎಚ್.ಡಿ. ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಎಷ್ಟು ದಲಿತ ಶಾಸಕರಿಗೆ ಸಚಿವ ನೀಡಿದ್ದರು? ಎಷ್ಟು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿದರು? ನಿಮ ಗೊಸುಂಬೆ ಆಟಗಳು ನಿಲ್ಲಿಸಿ ಎಂದು ಹರಿಹಾಯ್ದರು.

ಮೀಸಲಾತಿ ವಿರೋಧಿಸಿದ ಶಾಸಕರು ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಎಲ್ಲಾ ಕಾರ್ಯಕ್ರಮಗಳಲ್ಲೂ ಘೇರಾವ್ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್. ಭಾಸ್ಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್, ನಗರಧ್ಯಾಕ್ಷ ಆರ್. ಮೂರ್ತಿ, ಮುಖಂಡರಾದ ಕೆ. ಮರೀಗೌಡ, ಮಾಜಿ ಮೇಯರ್ ನಾರಾಯಣ, ಕೆ. ಮುರುಳಿ, ದ್ಯಾವಪ್ಪ ನಾಯಕ, ಕಲೀಂ, ನೆಲೆ ಹಿನ್ನೆಲೆ ಗೋಪಾಲ್, ಯೋಗೇಶ್ ಉಪ್ಪಾರ, ಅಶೋಕಪುರಂ ಪುಟ್ಟರಾಜು, ಜೆ.ಜೆ. ಆನಂದ, ರವಿನಂದನ, ಪ್ರದೀಪ ಚಂದ್ರ, ತ್ಯಾಗರಾಜ್, ಶ್ರೀಧರ್, ಸೋಮಶೇಖರ್, ರಮೇಶ್, ಎಂ.ಕೆ. ಅಶೋಕ, ಡೈರಿ ವೆಂಕಟೇಶ್, ವಕೀಲರಾದ ಕಾಂತರಾಜು, ತಿಮ್ಮಯ್ಯ, ಬಸವಣ್ಣ, ಮಾವಿನಹಳ್ಳಿ ರವಿ, ಸಿದ್ದಯ್ಯ ಮೊದಲಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ