ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಮನುಷ್ಯ ಬದುಕಿದ್ದಾಗ ಇತರರಿಗೆ ಸಹಾಯ, ಸೇವೆ ಮಾಡುವುದರ ಮೂಲಕ ಹೇಗೆ ಸಾರ್ಥಕ ಜೀವನವನ್ನು ನಡೆಸುತ್ತಾನೆಯೋ ಅದೇ ರೀತಿ ಮರಣದ ನಂತರ ಕಣ್ಣು ಹಾಗೂ ದೇಹದ ಇತರ ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆಯಬಹುದು ಎಂದು ವಿರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅಭಿಪ್ರಾಯಪಟ್ಟಿದ್ದಾರೆ.ವಿರಾಜಪೇಟೆ ಕಾವೇರಿ ಕಾಲೇಜಿನ ಎನ್‌ಸಿಸಿ, ಎನ್ಎಸ್ಎಸ್ ಘಟಕ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಸೋಮವಾರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ನೇತ್ರದಾನದ ಕುರಿತ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಂಗಾಂಗ ದಾನ ಪರಿಕಲ್ಪನೆ ನಮಗೆ ಪೌರಾಣಿಕ ಕಥೆಗಳಿಂದಲೇ ದೊರೆಯುತ್ತದೆ. 1954 ರಲ್ಲಿ ಜಗತ್ತಿನ ಮೊದಲ ಕಿಡ್ನಿ ಕಸಿ ಮಾಡಲಾಯಿತು. ಮಾನವನ ದೇಹದಲ್ಲಿ ಹಲವಾರು ಅಂಗಾಂಗಳನ್ನು ಸಾವಿನ ನಂತರ 6 ಗಂಟೆಯ ಒಳಗೆ ದಾನವಾಗಿ ನೀಡಬಹುದು. ಇದರಿಂದ ನಾವು ಸತ್ತ ನಂತರ ನಮ್ಮ ದೇಹದ ಅಂಗಾಂಗಗಳು ಜಗತ್ತಿನ ಅನುಭವ ಪಡೆಯುತ್ತದೆ ಎಂದು ಹೇಳಿದರು.ನಮ್ಮ ದೇಶದಲ್ಲಿ 8-9 ಮಿಲಿಯನ್ ಜನ ಕುರುಡರಿದ್ದು ಸಾವಿನ ನಂತರ ನಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಕತ್ತಲಿನಲ್ಲಿರುವ ಇಬ್ಬರು ಕುರುಡರ ಪಾಲಿಗೆ ಆಶಾಕಿರಣವಾಗಬಹುದು. ಈ ರೀತಿ ದಾನ ಮಾಡಿದಂತಹ ಸಂದರ್ಭದಲ್ಲಿ ದಾನ ಪಡೆಯುವ ದಾನ ನೀಡಿದವರ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ಸಾವಿನ ನಂತರ ಮಣ್ಣು ಸೇರುವ ಅಥವಾ ಸುಟ್ಟು ಬೂದಿಯಾಗುವ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಬೇರೆಯವರ ಬಾಳಿನಲ್ಲಿ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ಮೆರೆಯಬೇಕೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ದಾನ, ಯುವ ಜನತೆ ನೇತ್ರದಾನದ ಮಹತ್ವ ಅರಿತು ತಮ್ಮ ಸುತ್ತಮುತ್ತಲಿನವರಿಗೆ ನೇತ್ರದಾನದ ಜಾಗೃತಿ ಮೂಡಿಸಿ ಸಾವಿನ ನಂತರ ನೇತ್ರದಾನಕ್ಕೆ ಹುರಿದುಂಬಿಸಬೇಕೆಂದರು.ಕಾಲೇಜಿನ ಉಪ ಪ್ರಾಂಶುಪಾಲ ಡಾ. ಕೆ.ಜಿ. ವೀಣಾ, ಐ.ಕ್ಯೂ.ಎ.ಸಿ. ಸಂಯೋಜಕ ಪ್ರಿಯ ಮುದ್ದಪ್ಪ, ವಿದ್ಯಾರ್ಥಿ ಕ್ಷೇಮ ಪಾಲನ ಸಮಿತಿ ಸಂಚಾಲಕ ಎಚ್.ವಿ.ನಾಗರಾಜು, ಎನ್.ಸಿ.ಸಿ ಅಧಿಕಾರಿ ಭೋಜಮ್ಮ , ಎನ್ಎಸ್ಎಸ್ ಯೋಜನಾಧಿಕಾರಿ ಸುನಿಲ್ ಕುಮಾರ್ ಮತ್ತಿತರರಿದ್ದರು.
ಕಾವೇರಿ ಕಾಲೇಜಿನಲ್ಲಿ ಎನ್.ಸಿ.ಸಿ ಯ 25 ಕೆಡೆಟ್ಸ್, ಎನ್‌ಎಸ್‌ಎಸ್‌ನ 20 ಸ್ವಯಂಸೇವಕರು ಹಾಗೂ 10 ಮಂದಿ ಉಪನ್ಯಾಸಕರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರು.